ರಾಷ್ಟ್ರೀಯ

ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಿರುವುದರಿಂದ ಮುಸ್ಲಿಮರು ಆತಂಕ ಪಡಬೇಕಿಲ್ಲ: ಅಸಾದುದ್ದೀನ್ ಓವೈಸಿ

Pinterest LinkedIn Tumblr

ಹೈದರಾಬಾದ್: ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಿರುವುದರಿಂದ ಮುಸ್ಲಿಮರು ಆತಂಕ ಪಡಬೇಕಿಲ್ಲ, ಮಸೀದಿಗಳಿಗೆ ತೆರಳಿ, ನಂಬಿಕೆಯನ್ನು ಅನುಸರಿಸುವುದಕ್ಕೆ ಮುಸ್ಲಿಮರಿಗೆ ಸ್ವಾತಂತ್ರ್ಯವಿದೆ ಎಂದು ಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

ಸಂವಿಧಾನ ಪ್ರತಿಯೊಬ್ಬ ವ್ಯಕ್ತಿಗೂ ಧಾರ್ಮಿಕ ಸ್ವಾತಂತ್ರ್ಯ ನೀಡಿದೆ. ಮೋದಿ ದೇವಾಲಯಗಳಿಗೆ ಭೇಟಿ ನೀಡಿದರೆ ನಾವು ಮಸೀದಿಗೆ ಭೇಟಿ ನೀಡಬಹುದು, 300 ಸ್ಥಾನಗಳನ್ನು ಗೆದ್ದಿರುವುದು ದೊಡ್ಡ ವಿಷಯವೇನಲ್ಲ, ಏಕೆಂದರೆ ಭಾರತ ಸಂವಿಧಾನವನ್ನು ಜೀವಿಸುತ್ತಿದೆ, 300 ಸ್ಥಾನಗಳು ನಮ್ಮ ಹಕ್ಕುಗಳನ್ನು ಕಸಿದುಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಓವೈಸಿ ಹೇಳಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಅಸಾದುದ್ದೀನ್ ಒವೈಸಿ ಹೈದರಾಬಾದ್ ನಿಂದ ಸಂಸತ್ ಗೆ ಸತತ 4 ನೇ ಬಾರಿಗೆ ಪುನರಾಯ್ಕೆಗೊಂಡಿದ್ದಾರೆ. ಚುನಾವಣೆ ಬಳಿಕ ಹೈದರಾಬಾದ್ ನಲ್ಲಿ ನಡೆದ ಸಮುದಾಯದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವೇಳೆ ಈ ಹೇಳಿಕೆ ನೀಡಿದ್ದಾರೆ.

300 ಸ್ಥಾನಗಳನ್ನು ಗೆದ್ದ ಮಾತ್ರಕ್ಕೆ ಬಿಜೆಪಿ ಇಡೀ ಭಾರತವನ್ನು ಆಳಬಹುದು ಎಂದುಕೊಂಡಿದೆ, ಆದರೆ ಅವರ ಕಲ್ಪನೆ ತಪ್ಪು, ನಾನು ಭಾರತಕ್ಕಾಗಿ ಹೋರಾಡುತ್ತೇನೆ, ನಮ್ಮ ಜೊತೆಯಾಗಲು ದಲಿತರಿಗೂ ಕರೆ ನೀಡುತ್ತೇನೆ ಎಂದು ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

ಇದೇ ವೇಳೆ ಶ್ರೀಲಂಕಾದಲ್ಲಿ ನಡೆದ ಬಾಂಬ್ ಸ್ಫೋಟದ ಬಗ್ಗೆಯೂ ಮಾತನಾಡಿರುವ ಓವೈಸಿ, ಲಂಕಾದಲ್ಲಿನ ಭಯೋತ್ಪಾದಕ ದಾಳಿ ಇಸ್ಲಾಮ್ ಗೆ ಕೆಟ್ಟ ಹಣೆಪಟ್ಟಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಮುಸಲ್ಮಾನನೋರ್ವ 40 ಮಕ್ಕಳನ್ನು, ಮುಗ್ಧರನ್ನು ಹತ್ಯೆ ಮಾಡುತ್ತಾನೆಂದರೆ ಅದು ಎಂತಹ ಧಾರ್ಮಿಕ ಮತ ಪ್ರಚಾರ? ಇಂತಹವರು ಇಸ್ಲಾಂ ಗೆ ಕಳಂಕ ಎಂದು ಹೇಳಿದ್ದಾರೆ.

Comments are closed.