ರಾಷ್ಟ್ರೀಯ

ಅನಾರೋಗ್ಯ ಹಿನ್ನೆಲೆ ಸಚಿವ ಸ್ಥಾನ ಬೇಡ ಎಂದು ಅರುಣ್​ ಜೇಟ್ಲಿಯಿಂದ ಮೋದಿಗೆ ಪತ್ರ

Pinterest LinkedIn Tumblr


ನವದೆಹಲಿ: ಹಾಲಿ ಹಣಕಾಸು ಸಚಿವ ಅರುಣ್​ ಜೇಟ್ಲಿ ಅವರು ತಮ್ಮ ಅನಾರೋಗ್ಯದ ಕಾರಣ ಮುಂದಿಟ್ಟು ಈ ಬಾರಿ ಎನ್​ಡಿಎ ಸರ್ಕಾರದಲ್ಲಿ ತನಗೆ ಯಾವುದೇ ಜವಾಬ್ದಾರಿ ಬೇಡ ಎಂದು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ತಮ್ಮನ್ನು ಸಚಿವ ಸಂಪುಟದಿಂದ ಹೊರಗಿಡಬೇಕೆಂದು ಹೇಳಿರುವ ಜೇಟ್ಲಿ, ಅನಾರೋಗ್ಯದ ಕಾರಣ ಸಮಯ ಹಾಗೂ ವಿಶ್ರಾಂತಿ ಪಡೆಯಬೇಕೆಂದಿದ್ದಾರೆ. ಜೊತೆಗೆ ಬಿಜೆಪಿ ನಾಯಕರಿಗೆ ಧನ್ಯವಾದ ತಿಳಿಸಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಗುರುವಾರ ಪ್ರಮಾಣವಚನ ಸ್ವೀಕರಿಸಲಿದೆ. ಇದಕ್ಕೂ ಮುನ್ನ ಅರುಣ್​​​ ಜೇಟ್ಲಿ ಅವರು ಮೋದಿಗೆ ಪತ್ರ ಬರೆದಿದ್ದಾರೆ.

“ಪ್ರತಿ ಬಾರಿ ಎನ್​​​ಡಿಎ ಸರಕಾರದಲ್ಲಿ ನಾನು ಸಚಿವನಾಗಿದ್ದೆ. ಅವಕಾಶ ಮಾಡಿಕೊಟ್ಟಿದ್ದಕ್ಕೆ ಬಿಜೆಪಿ ನಾಯಕರಿಗೆ ಧನ್ಯವಾದಗಳು. ಅನಾರೋಗ್ಯದಿಂದಾಗಿ ಈ ಬಾರಿ ವಿರಮಿಸಬಯಸುತ್ತೇನೆ. ಈ ಬಾರಿ ಸಂಪುಟ ಸೇರಲು ಅಸಹಾಯಕನಾಗಿದ್ದೇನೆ. ಸರ್ಕಾರದಲ್ಲಿ ಯಾವುದೇ ಜವಾಬ್ದಾರಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಆದರೆ ಸದಾ ಸರಕಾರ ಮತ್ತು ಪಕ್ಷದೊಂದಿಗೆ ಇರುತ್ತೇನೆ ಎಂದು,” ಎಂದು ಪತ್ರದಲ್ಲಿ ತಿಳಿಸಿದ್ದಾರೆ.

“ಪಕ್ಷ ನನಗೆ ಪ್ರತಿಬಾರಿ ಜವಾಬ್ದಾರಿಯನ್ನು ನೀಡಿ ಆಶೀರ್ವದಿಸಿದೆ. ಮೊದಲ ಬಾರಿ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗಲೂ ನನಗೆ ಜವಾಬ್ದಾರಿ ನೀಡಲಾಗಿತ್ತು. ವಿರೋಧ ಪಕ್ಷದಲ್ಲಿದ್ದಾಗಲೂ ನನಗೆ ಪಕ್ಷ ಸಂಘಟನೆಯ ಜವಾಬ್ದಾರಿಯನ್ನು ಪಕ್ಷ ನೀಡಿದೆ. ಆದರೆ ಅನಾರೋಗ್ಯದ ಕಾರಣ ಈ ಬಾರಿ ವಿಶ್ರಾಂತಿ ಬಯಸುತ್ತೇನೆ. ನನ್ನನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಡಿ” ಎಂದು ಹೇಳಿದ್ಧಾರೆ.

Comments are closed.