ರಾಷ್ಟ್ರೀಯ

ಮೋದಿ, ದೀದಿ, ರಾಹುಲ್ ಯಾರಾಗಲಿದ್ದಾರೆ ಮುಂದಿನ ಪ್ರಧಾನಿ?

Pinterest LinkedIn Tumblr


ಲೋಕಸಭೆ ಚುನಾವಣೆ ಕೊನೆಗೂ ಮುಗಿದಿದ್ದು ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದೆ. ಬಹುತೇಕ ಮೇ.23ರ ಸಂಜೆಯ ವೇಳೆ ದೇಶದ ಮತದಾರ ಯಾರ ಪರವಾಗಿ ಮತ ಚಲಾಯಿಸಿದ್ದಾನೆ? ಆತನ ಪ್ರಧಾನಿ ಆಯ್ಕೆ ಯಾರು? ದೇಶದ ಆಡಳತ ಚುಕ್ಕಾಣಿ ಯಾರ ಕೈಗೆ ಸಿಗಲಿದೆ? ಹೀಗೆ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.

ಆದರೆ, ಪ್ರಜಾಪ್ರಭುತ್ವದಲ್ಲಿ ಎಲ್ಲವೂ ಮತದಾರನ ಆಯ್ಕೆಯಂತೆಯೇ ನಡೆಯುವುದಿಲ್ಲ. ಮತದಾನ ಮಾಡುವುದಷ್ಟೆ ಆತನ ಕರ್ತವ್ಯ. ಮುಂದಿನದೇನಿದ್ದರೂ ಆಯಾ ಪಕ್ಷಗಳ ಲೆಕ್ಕಚಾರ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ಈ ನಿಟ್ಟಿನಲ್ಲಿ ಯಾವ ಪಕ್ಷ ಎಷ್ಟು ಸ್ಥಾನಗಳಲ್ಲಿ ಗೆಲ್ಲಲಿದೆ.? ಯಾವ ಪಕ್ಷ ಎಷ್ಟು ಸ್ಥಾನದಲ್ಲಿ ಗೆಲುವು ಸಾಧಿಸಿದರೆ ಯಾರು ಪ್ರಧಾನಿಯಾಗಲಿದ್ದಾರೆ? ಎಲ್ಲಾ ಪಕ್ಷಗಳ ರಾಜಕೀಯ ಲೆಕ್ಕಾಚಾರವೇನು? ಘಟಬಂಧನ್​ ನಡೆ ಏನು? ಅಸಲಿಗೆ ದೇಶದ ಅತ್ಯುನ್ನತ ಸ್ಥಾನವಾದ ಪ್ರಧಾನಿ ಹುದ್ದೆಯ ರೇಸ್​ನಲ್ಲಿ ಯಾರೆಲ್ಲಾ ಇದ್ದಾರೆ? ಇಲ್ಲಿದೆ ಕಂಪ್ಲೀಟ್​ ಡೀಟೈಲ್​.

ಮೋದಿ ಹಾದಿ ಅಷ್ಟೇನು ಸುಗಮವಾಗಿಲ್ಲ; ಈ ಬಾರಿಯ ಚುನಾವಣೆಯನ್ನೂ ಬಿಜೆಪಿ ನರೇಂದ್ರ ಮೋದಿಯ ಹೆಸರಿನಲ್ಲೇ ಎದುರಿಸಿತ್ತು. ಮೋದಿಯನ್ನೇ ಮುಂದಿನ ಪ್ರಧಾನಿ ಎಂದು ಬಿಂಬಿಸಿ ಮತ ಕೇಳಿತ್ತು. ಆದರೆ, ಬಿಜೆಪಿ ಹಾಗೂ ಆರ್​ಎಸ್​ಎಸ್​ ಒಳ ರಾಜಕೀಯವನ್ನು ಒಳಹೊಕ್ಕು ಗಮನಿಸಿದರೆ ಎರಡನೇ ಅವಧಿಗೆ ಪ್ರಧಾನಿಯಾಗಬೇಕು ಎಂಬ ಮೋದಿ ಕನಸು ಅಷ್ಟು ಸುಲಭವಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇದಕ್ಕೆ ಕಾರಣಗಳೂ ಇಲ್ಲದೇ ಏನಿಲ್ಲ.

ಐದು ವರ್ಷಗಳ ಹಿಂದಿನ ಮೋದಿ ಇಮೇಜ್ ಇವತ್ತಿಗೆ ದೊಡ್ಡ ಮಟ್ಟದಲ್ಲಿ ಘಾಸಿಗೊಂಡಿದೆ. ಪಕ್ಷದ ಹೊರಗೆ ಹಾಗೂ ಒಳಗೆ ಇಂದಿಗೆ ಮೋದಿ ಪ್ರಶ್ನಾತೀತ ನಾಯಕನಾಗಿ ಉಳಿದಿಲ್ಲ. ಅಲ್ಲದೆ ಆರ್​ಎಸ್​ಎಸ್​ ಅನ್ನೂ ಮೀರಿ ಬೆಳೆದಿರುವ ಮೋದಿ ವಿರುದ್ಧ ಸಂಘಪರಿವಾರಕ್ಕೂ ಅಸಮಾಧಾನವಿದೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಇಂದು ಮೋದಿ ಸ್ಥಾನಕ್ಕೆ ಪರ್ಯಾಯವಾಗಿ ಪಕ್ಷದ ಒಳಗೆ ಕೇಳಿ ಬರುತ್ತಿರುವ ದೊಡ್ಡ ಹೆಸರು ಸಚಿವ ನಿತಿನ್​ ಗಡ್ಕರಿ.

ನಾಗಪುರದ ಆರ್​ಎಸ್​ಎಸ್​ ಶಾಖೆಯಲ್ಲೇ ಬಾಲ್ಯ ಕಳೆದು ಇಂದು ಕೇಂದ್ರ ಸಚಿವರಾಗಿ, ಬಹುದೊಡ್ಡ ಉದ್ಯಮಿಯಾಗಿ ಬೆಳೆದಿರುವ ನಿತಿನ್ ಗಡ್ಕರಿ ಪಕ್ಷ ಹಾಗೂ ಸಂಘ ಪರಿವಾರದ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಆದರೆ, ಮೋದಿ ಹಾಗೂ ಸಂಘ ಪರಿವಾರದ ನಡುವಿನ ಬಾಂಧವ್ಯ ಪ್ರಸ್ತುತ ಅಷ್ಟಾಗಿ ಸರಿಯಿಲ್ಲ. ಇದೇ ಕಾರಣಕ್ಕೆ ಸಂಘ ಪರಿವಾರ ಮೋದಿಗೆ ಪರ್ಯಾಯವಾಗಿ ಗಡ್ಕರಿಯನ್ನು ಬೆಳೆಸಲು ಮುಂದಾಗಿದೆ ಎನ್ನುತ್ತಾರೆ ಬೆಂಗಳೂರು ರಾಜ್ಯಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ.ಕಿರಣ್ ಗಜನೂರು.

ಬಿಜೆಪಿಯೊಳಗಿನ ಲೆಕ್ಕಾಚಾರದಂತೆ ಮೋದಿ ನಾಯಕತ್ವದಲ್ಲಿ ಪಕ್ಷ ಬಹುಮತ ಗಳಿಸಿ ಅಧಿಕಾರಕ್ಕೆ ಬಂದರೆ ಮಾತ್ರ ನರೇಂದ್ರ ಮೋದಿ ಮತ್ತೊಂದು ಅವಧಿಗೆ ಪ್ರಧಾನಿಯಾಗಲಿದ್ದಾರೆ. ಅಕಸ್ಮಾತ್ ಪಕ್ಷ 250ಕ್ಕಿಂತ ಕಡಿಮೆ ಸ್ಥಾನಗಳನ್ನು ಗಳಿಸಿದರೆ ಎನ್​ಡಿಎ ಮೈತ್ರಿ ಅಭ್ಯರ್ಥಿಯಾಗಿ ಸಂಘಪರಿವಾರ ನಿತಿನ್ ಗಡ್ಕರಿ ಹೆಸರನ್ನು ಸೂಚಿಸಲಿದೆ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ. ಹೀಗಾಗಿ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ನಿತಿನ್ ಗಡ್ಕರಿ ಪ್ರಧಾನಿಯಾದರೂ ಆಶ್ಚರ್ಯವೇನಿಲ್ಲ.

ರಾಹುಲ್​ ಗಾಂಧಿಗಿಲ್ಲ ಚಾನ್ಸ್; ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷ ಹುದ್ದೆಗೆ ಏರಿದ ರಾಹುಲ್ ಗಾಂಧಿಯನ್ನು ಪಕ್ಷ ಈವರೆಗೆ ಅಧಿಕೃತವಾಗಿ ಪ್ರಧಾನಿ ಅಭ್ಯರ್ಥಿ ಎಂದು ಎಲ್ಲಿಯೂ ಘೋಷಿಸಿಲ್ಲ. ಆದರೆ ಯುಪಿಎ ಒಕ್ಕೂಟದಲ್ಲಿರುವ ಕೆಲ ಮೈತ್ರಿ ಪಕ್ಷಗಳ ನಾಯಕರು ಬಹಿರಂಗವಾಗಿ ರಾಹುಲ್ ತಮ್ಮ ಪ್ರಧಾನಿ ಅಭ್ಯರ್ಥಿ ಎಂದು ಹೇಳಿಕೆ ನೀಡುತ್ತಿದ್ದಾರೆ.

ಲೋಕಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜಿನ ಖರ್ಗೆಯಿಂದ ತಮಿಳುನಾಡಿನ ಡಿಎಂಕೆ ಪಕ್ಷದ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ವರೆಗೆ ಎಲ್ಲರೂ ಬಹಿರಂಗವಾಗಿ ರಾಹುಲ್ ಗಾಂಧಿಯೇ ತಮ್ಮ ಪ್ರಧಾನಿ ಅಭ್ಯರ್ಥಿ ಎಂದು ಹೋದಲ್ಲಿ ಬಂದೆಲ್ಲೆಲ್ಲಾ ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಅಲ್ಲದೆ ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯ ಹೊರತಾದ ದೊಡ್ಡ ಪಕ್ಷವೆಂದರೆ ಕಾಂಗ್ರೆಸ್ ಇದೇ ಕಾರಣಕ್ಕೆ ರಾಹುಲ್ ಗಾಂಧಿಯವರ ಹೆಸರು ತಾನಾಗಿಯೇ ಪ್ರಧಾನಿ ರೇಸ್​ನಲ್ಲಿ ಸ್ಥಾನ ಪಡೆದಿದೆ.

ಆದರೆ, ಇದು ಅಷ್ಟು ಸುಲಭದ ಲೆಕ್ಕಾಚಾರವಲ್ಲ. ಎರಡನೇ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ ಕನಿಷ್ಟ 160 ರಿಂದ 180 ಸ್ಥಾನಗಳಲ್ಲಿ ಜಯ ಗಳಿಸಿದರೆ ಮಾತ್ರ ಆ ಪಕ್ಷಕ್ಕೆ ಪ್ರಧಾನಿ ಹುದ್ದೆ ಒಲಿದು ಬರಲಿದೆ. ಉಳಿದ ಮೈತ್ರಿ ಪಕ್ಷಗಳ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ನಡೆಸುವುದು ಸಾಧ್ಯ. ಆದರೆ, ಚುನಾವಣೋತ್ತರ ಸಮೀಕ್ಷೆಗಳ ಕಡೆಗೆ ಒಮ್ಮೆ ಕಣ್ಣಾಡಿಸಿದರೆ ಕಾಂಗ್ರೆಸ್ ಪಕ್ಷಕ್ಕೆ ಇಷ್ಟು ಸ್ಥಾನ ಬರಲಿದೆ ಎಂಬುದರ ಕುರಿತು ಸ್ವತಃ ಕಾಂಗ್ರೆಸ್ ಪಕ್ಷಕ್ಕೆ ನಂಬಿಕೆ ಇಲ್ಲ. ಹೀಗಾಗಿ ರಾಹುಲ್ ಗಾಂಧಿ ಹೆಸರು ಬಹುತೇಕ ಪ್ರಧಾನಿ ರೇಸ್​ನಿಂದ ಹೊರಬಿದ್ದಿದೆ ಎಂದೇ ಹೇಳಲಾಗುತ್ತಿದೆ.

ರಾಷ್ಟ್ರ ರಾಜಕಾರಣದತ್ತ ಮಮತಾ..? : ಇತ್ತೀಚೆಗೆ ಬಿಜೆಪಿ ಹಾಗೂ ನರೇಂದ್ರ ಮೋದಿ ಆಡಳಿತದ ಕುರಿತು ಟೀಕಾಪ್ರಹಾರ ನಡೆಸುತ್ತಿರುವ ಕೋಲ್ಕತಾ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಡೆಯನ್ನು ಒಮ್ಮೆ ಗಮನಿಸಿದರೆ ಅವರು ರಾಷ್ಟ್ರ ರಾಜಕಾರಣದತ್ತ ಗಮನ ನೆಟ್ಟಿರುವುದು ಸ್ಪಷ್ಟವಾಗುತ್ತಿದೆ.

ಪ್ರಸ್ತುತ ರಾಷ್ಟ್ರ ರಾಜಕಾರಣಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಸೆಡ್ಡು ಹೊಡೆಯುತ್ತಿರುವ ಮಮತಾ ಬ್ಯಾನರ್ಜಿ ಪ್ರಧಾನಿ ಹುದ್ದೆಯ ಪ್ರಬಲ ಅಭ್ಯರ್ಥಿ ಎಂದೇ ಬಣ್ಣಿಸಲಾಗುತ್ತಿದೆ. ಒಟ್ಟಾರೆ 42 ಲೋಕಸಭಾ ಕ್ಷೇತ್ರವನ್ನು ಹೊಂದಿರುವ ಕೋಲ್ಕತಾದಲ್ಲಿ ಮಮತಾ ನೇತೃತ್ವದ ತೃಣಮೂಲ ಕಾಂಗ್ರೆಸ್ ಕಳೆದ ಬಾರಿ 34 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಇನ್ನೂ ಈ ಚುನಾವಣೆಯಲ್ಲೂ ಇದಕ್ಕಿಂತ ಅಧಿಕ ಸ್ಥಾನ ಗೆಲ್ಲುವ ವಿಶ್ವಾಸದಲ್ಲಿದ್ದು, ಮಹಾಘಟಬಂಧನ್​ ಒಕ್ಕೂಟದ ನೆಚ್ಚಿನ ಪ್ರಧಾನಿ ಅಭ್ಯರ್ಥಿ ಎನ್ನಲಾಗುತ್ತಿದೆ.

ಕರ್ನಾಟಕದ ಹೊರತಾಗಿ ದಕ್ಷಿಣ ಭಾರತದ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಪ್ರಾದೇಶಿಕ ಪಕ್ಷಗಳು ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಲಿರುವುದು ಈಗಾಗಲೇ ನಿಶ್ಚಳವಾಗಿದೆ. ಇಲ್ಲದೆ ಬಿಹಾರ, ಕೋಲ್ಕತಾ, ಉತ್ತರಪ್ರದೇಶ, ಒದಿಶಾ ಸೇರಿದಂತೆ ಈಶಾನ್ಯ ಭಾರತದಲ್ಲೂ ಪ್ರಾದೇಶಿಕ ಪಕ್ಷಗಳೇ ಮೇಲುಗೈ ಸಾಧಿಸಲಿದೆ. ಹೀಗಾಗಿ ಮಹಾಘಟಬಂಧನ್​ ಲೆಕ್ಕಾಚಾರದಂತೆ 250ಕ್ಕೂ ಅಧಿಕ ಸ್ಥಾನ ಗಳಿಸಿ ತೃತೀಯ ರಂಗಕ್ಕೆ ಅಧಿಕಾರ ಒಲಿದರೆ, ಪ್ರಧಾನಿ ರೇಸ್​ನಲ್ಲಿ ಮಮತಾ ಬ್ಯಾನರ್ಜಿ ಹೆಸರನ್ನೇ ಮೊದಲು ಸೂಚಿಸಲಾಗುವುದು ಎಂಬ ವಿಶ್ಲೇಷಣೆ ನಿಡುತ್ತಾರೆ ಕುವೆಂಪು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಪ್ರವೀಣ್.

ಪ್ರಧಾನಿ ಹುದ್ದೆ ಮೇಲೆ ಮಾಯಾವತಿ ಕಣ್ಣು; 2014ರ ಲೋಕಸಭೆ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಚತುಷ್ಕೋನ ಸ್ಫರ್ಧೆ ಏರ್ಪಟ್ಟಿತ್ತು. ಬಿಎಸ್​ಪಿ-ಎಸ್​ಪಿ ಹಾಗೂ ಕಾಂಗ್ರೆಸ್ ತಮ್ಮ ಮತಗಳನ್ನು ಹಂಚಿಕೊಂಡ ಪರಿಣಾಮ ಬಿಜೆಪಿ ಉತ್ತರಪ್ರದೇಶದ 80 ಲೋಕಸಭಾ ಕ್ಷೇತ್ರಗಳ ಪೈಕಿ 72 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ಉತ್ತರಪ್ರದೇಶ ಪ್ರಮುಖ ಪಾತ್ರವಹಿಸಿತ್ತು.

ಆದರೆ, ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಬಿಜೆಪಿಗೆ ಸೋಲುಣಿಸುವ ಸಲುವಾಗಿ ಮಾಯಾವತಿ ಮುಂದಾಳತ್ವದಲ್ಲಿ ಉತ್ತರಪ್ರದೇಶದ ಪ್ರಮುಖ ಪ್ರಾದೇಶಿಕ ಪಕ್ಷವಾದ ಎಸ್​ಪಿ ಹಾಗೂ ಬಿಎಸ್​ಪಿ ಮೈತ್ರಿ ಸಾಧಿಸಿಕೊಂಡಿವೆ. ಈಗಾಗಲೇ ಚುನಾವಣೋತ್ತರ ಸಮೀಕ್ಷೆಗಳು ಈ ಮೈತ್ರಿ ಉತ್ತರಪ್ರದೇಶದಲ್ಲಿ 56ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿರುವುದು ಮಾಯಾವತಿ ಪಾಲಿಗೆ ವರಧಾನವಾಗಿದೆ.

ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿಗೆ ದಶಕಗಳಿಂದ ಪ್ರಧಾನಿ ಹುದ್ದೆಯ ಮೇಲೆ ಕಣ್ಣಿರುವುದು ಸುಳ್ಳಲ್ಲ. ಅಲ್ಲದೆ ಉತ್ತರಪ್ರದೇಶವನ್ನು ಗೆದ್ದವರು ದೇಶವನ್ನೇ ಗೆಲ್ಲುತ್ತಾರೆ ಎಂಬ ರಾಜಕೀಯ ನಾಡ್ನುಡಿ ದೇಶದಲ್ಲಿ ಭಾರೀ ಪ್ರಚಲಿತ. ಈ ಮಾತಿನಂತೆ ಎಸ್​ಪಿ-ಬಿಎಸ್​ಪಿ ಮೈತ್ರಿ ಹೆಚ್ಚು ಸ್ಥಾನದಲ್ಲಿ ಗೆಲುವು ಸಾಧಿಸಿದರೆ, ಎಸ್​ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಹಾಗೂ ಮಹಾಘಟಬಂಧನ್ ಸಹಾಯದೊಂದಿಗೆ ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ ಮಾಯಾವತಿ.

ಇದಲ್ಲದೆ ದೇಶದ ಪ್ರಧಾನಿ ಹುದ್ದೆಯ ರೇಸ್​ನಲ್ಲಿ ಕರ್ನಾಟಕದ ಹೆಚ್​.ಡಿ. ದೇವೇಗೌಡ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಆಂಧ್ರಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಹೀಗೆ ಹತ್ತಾರು ಹೆಸರುಗಳು ಕೇಳಿಬರುತ್ತಿದೆ. ಆದರೆ, ಇವೆಲ್ಲವೂ ರಾಜಕೀಯ ತಜ್ಞರ ಅಭಿಪ್ರಾಯಗಳು ಹಾಗೂ ವಿಶ್ಲೇಷಣೆಯಷ್ಟೆ. ನಿಜಕ್ಕೂ ಪ್ರಧಾನಿ ಯಾರಾಗಲಿದ್ದಾರೆ? ದೇಶದ ಅಧಿಕಾರದ ಚುಕ್ಕಾಣಿ ಯಾರ ಕೈಗೆ ಸಿಗಲಿದೆ ಎಂಬುದನ್ನು ಮುಂದಿನ 1 ವಾರದ ರಾಜಕೀಯ ಆಟಗಳು ಸ್ಪಷ್ಟಪಡಿಸಲಿವೆ.

Comments are closed.