ರಾಷ್ಟ್ರೀಯ

ಬೆನ್ನಟ್ಟಿ ಪಾಕ್ ಹಡಗನ್ನು ನಿಲ್ಲಿಸಿದ ಭಾರತ – 500 ಕೋಟಿ ಮೌಲ್ಯದ ಮಾದಕ ವಸ್ತು ವಶ

Pinterest LinkedIn Tumblr

ನವದೆಹಲಿ: ಪಾಕಿಸ್ತಾನದ ಹಡಗಿನಲ್ಲಿ ಸಾಗಿಸುತ್ತಿದ್ದ 500 ಕೋಟಿ ರೂ. ಮೌಲ್ಯದ ಮಾದಕ ವಸ್ತುವನ್ನು ಭಾರತದ ಕೋಸ್ಟ್ ಗಾರ್ಡ್ ವಶಪಡಿಸಿಕೊಂಡಿದೆ.

ಪಾಕಿಸ್ತಾನದ “ಅಲ್ ಮದಿನಾ” ಹೆಸರಿನ ಹಡಗು ಗುಜರಾತಿನ ಜಾಕೌ ಕರವಾಳಿಯ ಭಾಗದಲ್ಲಿ ಮಾದಕ ವಸ್ತುಗಳನ್ನು ರಫ್ತು ಮಾಡಲು ಬಂದು ನಿಂತಿದೆ ಎಂದು ಗುಪ್ತಚರ ಇಲಾಖೆ ಖಚಿತ ಮಾಹಿತಿ ನೀಡಿತ್ತು. ಈ ಮಾಹಿತಿಯ ಹಿನ್ನೆಲೆಯಲ್ಲಿ ಕೋಸ್ಟ್ ಗಾರ್ಡ್ ಸಿಬ್ಬಂದಿ ಈ ಹಡಗನ್ನು ಜಪ್ತಿ ಮಾಡಲು ಎರಡು ವೇಗದ ಬೋಟ್‍ನೊಂದಿಗೆ ಸಮುದ್ರಕ್ಕೆ ಇಳಿದಿದೆ.

ಭಾರತದ ಬೋಟ್‍ಗಳನ್ನು ತಮ್ಮ ಕಡೆ ಬರುತ್ತಿರುವುದನ್ನು ಗಮನಿಸಿದ ಪಾಕ್ ಹಡಗು ವಾಪಸ್ ತಿರುಗಿಸಿ ಪಾಕ್ ಕರಾವಳಿಯತ್ತ ಮುನ್ನುಗ್ಗಿದೆ. ಈ ವೇಳೆ ಭಾರತದ ಬೋಟ್‍ಗಳು ಚೇಸ್ ಮಾಡಿ ಆ ಹಡಗನ್ನು ತಡೆದು ನಿಲ್ಲಿಸಿದೆ.

ಈ ವೇಳೆ ಆ ಹಡಗಿನಲ್ಲಿದ್ದ ವ್ಯಕ್ತಿಗಳು ಕೆಲವು ಚೀಲಗಳನ್ನು ಸಮುದ್ರಕ್ಕೆ ಎಸೆದಿದ್ದಾರೆ. ಸಮುದ್ರಕ್ಕೆ ಎಸೆದಿದ್ದ 7 ಚೀಲಗಳನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಹಡಗಿನಿಂದ ವಶಪಡಿಸಿಕೊಂಡ ವಸ್ತುಗಳನ್ನು ಪ್ರಾಥಮಿಕ ಪರೀಕ್ಷೆಗೆ ಒಳಪಡಿಸಿದಾಗ ಈ ಮಾದಕ ವಸ್ತುಗಳ ಸುಮಾರು 400 ರಿಂದ 500 ಕೋಟಿ ಬೆಲೆ ಬಾಳುತ್ತದೆ ಎಂದು ಅಂದಾಜಿಸಲಾಗಿದೆ. ಹಡಗಿನಲ್ಲಿದ್ದ ವ್ಯಕ್ತಿಗಳನ್ನು ಕೋಸ್ಟ್ ಗಾರ್ಡ್ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.

ಮೂರು ತಿಂಗಳಲ್ಲಿ 2 ಬಾರಿ ಗುಜರಾತಿನ ಜಾಕೌ ಕರವಾಳಿಯಲ್ಲಿ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಕಳೆದ ಮಾರ್ಚ್‍ನಲ್ಲಿ 100 ಕಿಲೋಗ್ರಾಮ್ ಹೆರಾಯಿನ್ ವಶಕ್ಕೆ ಪಡೆಯಲಾಗಿತ್ತು.

2017ರ ಜುಲೈನಲ್ಲಿ ಪನಾಮ ಎಂಬ ಹಡಗಿನಿಂದ 3,500 ಕೋಟಿ ಬೆಲೆ ಬಾಳುವ 1,500 ಕಿಲೋಗ್ರಾಮ್ ಹೆರಾಯಿನ್ ವಶಕ್ಕೆ ಪಡೆಯಲಾಗಿತ್ತು. ಇದು ಗುಜರಾತ್ ಕರಾವಳಿ ಪ್ರದೇಶದಲ್ಲಿ ವಶಪಡಿಸಿಕೊಂಡ ದೊಡ್ಡ ಮೊತ್ತದ ಮಾದಕ ವಸ್ತು ಎಂಬುದಾಗಿ ವರದಿಯಾಗಿದೆ.

Comments are closed.