ರಾಷ್ಟ್ರೀಯ

ಅಡ್ವಾಣಿ ಕೋಟೆಯಲ್ಲಿ ಅಮಿತ್​​ ಶಾ ಗೆಲುವು

Pinterest LinkedIn Tumblr


ನವದೆಹಲಿ: ಬಿಜೆಪಿ ಹಿರಿಯ ನಾಯಕ ಎಲ್‌.ಕೆ. ಆಡ್ವಾಣಿಯವರ ಭದ್ರಕೋಟೆ ಎಂದೇ ಕರೆಯಲ್ಪಡುವ ಗುಜರಾತಿನ ಗಾಂಧಿನಗರ ಲೋಕಸಭೆ ಕ್ಷೇತ್ರದಿಂದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಕಣಕ್ಕಿಳಿದಿದ್ದಾರೆ. ಎಲ್​.ಕೆ ಆಡ್ವಾಣಿ ಮತ್ತು ಅಟಲ್‌ ಬಿಹಾರಿ ವಾಜಪೇಯಿ ತರಹದ ಧೀಮಂತ ನಾಯಕರೇ ಸ್ಪರ್ಧಿಸಿ ಗೆದ್ದು ಸಂಸದರಾದ ಗಾಂಧಿನಗರ ಕ್ಷೇತ್ರದಿಂದ ಈಗ ಅಮಿತ್​ ಶಾ ಸ್ಪರ್ಧಿಸಿದ್ದು, ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

ಬಿಜೆಪಿ ಎರಡು ಸಲ ಕೇಂದ್ರದಲ್ಲಿ ಅಧಿಕಾರಕ್ಕೇರಲು ಶ್ರಮಿಸಿದ್ದ ಹಿರಿಯ ಮುತ್ಸದ್ಧಿ ಲಾಲ್‌ಕೃಷ್ಣ ಆಡ್ವಾಣಿ ಅವರೇ, ತಾವು ಪ್ರತಿನಿಧಿಸುತ್ತಿದ್ದ ಈ ಕ್ಷೇತ್ರವನ್ನು ಅಮಿತ್‌ ಶಾ ಅವರಿಗೆ ಬಿಟ್ಟುಕೊಟ್ಟಿದ್ದಾರೆ. ತಮ್ಮ ರಾಜಕೀಯ ಜೀವನ ಇನ್ನೇನು ಮುಗಿಯಿತು ಎಂದು ಗೊತ್ತಾಗುತ್ತಿದ್ದಂತೆಯೇ ಅಡ್ವಾಣಿ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿತ್ತು.

ಗಾಂಧಿನಗರ ಕ್ಷೇತ್ರದಿಂದ ಆಡ್ವಾಣಿಯವರು ಹಲವಾರು ಬಾರಿ ಸ್ಪರ್ಧಿಸಿ ಗೆದ್ದರೂ, ಈ ಕ್ಷೇತ್ರದ ಸಂಪೂರ್ಣ ಮಾಹಿತಿ ಗೊತ್ತಿರುವುದು ಅಮಿತ್‌ ಶಾ ಅವರಿಗೇ ಎಂಬುದು ಹಳೆಯ ವಿಚಾರ. 1989ರ ಬಳಿಕ ಬಿಜೆಪಿ ಒಮ್ಮೆಯೂ ಇಲ್ಲಿ ಸೋತಿಲ್ಲ. 2009 ರಲ್ಲಿಯೇ ಪಾಟೀದಾರ ಸಮುದಾಯಕ್ಕೆ ಸೇರಿದ ಬಲಿಷ್ಠ ಮುಖಂಡ ಸುರೇಶ್‌ ಪಟೇಲ್‌ ಎದುರು ಸ್ಪರ್ಧಿಸಿ ಆಡ್ವಾಣಿ ಗೆದ್ದ ಸಂದರ್ಭವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಆಗ ಗುಜರಾತ್‌ನ ಗೃಹ ಸಚಿವರಾಗಿದ್ದ ಇದೇ ಅಮಿತ್​​ ಶಾ ಅವರು, ಬಿಜೆಪಿ ಒಂದು ಲಕ್ಷ ಮತಗಳ ಅಧಿಕ ಅಂತರದಿಂದ ಗೆಲ್ಲಲಿದೆ ಎಂದಿದ್ದರು. ಅದೇ ಮಾದರಿಯಲ್ಲಿ ಆಡ್ವಾಣಿ 1.22 ಲಕ್ಷ ಮತಗಳ ಅಂತರದಲ್ಲಿ ಗೆದ್ದಿದ್ದರು.

ಗಾಂಧಿನಗರ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲೇ ಇರುವ ವಿಧಾನಸಭಾ ಕ್ಷೇತ್ರಗಳಾದ ಸರ್‌ಖೇಜ್‌ನಿಂದ ಮೂರು ಬಾರಿ ಮತ್ತು ನಾರನ್‌ಪುರದಿಂದ ಒಮ್ಮೆ ಅಮಿತ್‌ ಶಾ ಸ್ಪರ್ಧಿಸಿ ಶಾಸಕರಾಗಿದ್ದರು ಎಂಬುದು ಇತಿಹಾಸ. ಇಲ್ಲಿಂದಲೇ ಅಮಿತ್​​ ಶಾ ಸ್ಪರ್ಧಿಸಬೇಕೆಂಬ ಒತ್ತಾಯ ಕೇಳಿ ಬಂದದ್ದು ಮೊದಲು ಸ್ಥಳೀಯ ಬಿಜೆಪಿ ನಾಯಕರಿಂದಲೇ. ನಂತರ ಗಾಂಧಿನಗರ ಕ್ಷೇತ್ರದ ಉಸ್ತುವಾರಿ ಹರ್ಷದ್‌ ಪಟೇಲ್‌ ಈ ವಿಚಾರವನ್ನು ಖಚಿತಪಡಿಸಿದರು.

ಆಡ್ವಾಣಿ ಜತೆಗೆ ಬಿಜೆಪಿಯ ಮತ್ತೋರ್ವ ಮಹಾನಾಯಕ ಅಟಲ್‌ ಬಿಹಾರಿ ವಾಜಪೇಯಿ ಅವರೂ ಈ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಲು ಮಾಜಿ ಚುನಾವಣಾ ಆಯುಕ್ತ ಟಿಎನ್‌ ಶೇಷನ್‌, ಬಾಲಿವುಡ್ ಸೂಪರ್‌ಸ್ಟಾರ್‌ ರಾಜೇಶ್‌ ಖನ್ನಾ, ಕಲಾವಿದೆ ಮಲ್ಲಿಕಾ ಸಾರಾಭಾಯಿ, ವಿಠ್ಠಲ್‌ ಪಾಂಡ್ಯ, ಹರೇನ್‌ ಪಾಂಡ್ಯ ಮುಂತಾದ ಘಟಾನುಘಟಿಗಳೂ ಹರಸಾಹಸಪಟ್ಟು ನೆಲ ಕಚ್ಚಿಹೋದರು.

2014ರವರೆಗೂ ಗುಜರಾತ್‌ನಲ್ಲಿ ಅತ್ಯಂತ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ ದಾಖಲೆಯನ್ನು ಆಡ್ವಾಣಿ ನಿರ್ಮಿಸಿದ್ದಾರೆ. 1998ರಲ್ಲಿ 2.77 ಲಕ್ಷ ಮತಗಳ ಅಂತರದಿಂದ ಭಾರಿ ಗೆಲುವು ಸಾಧಿಸಿದ್ದರು. ಅಂತೆಯೇ 2014ರಲ್ಲಿಯೂ ಕಾಂಗ್ರೆಸ್​​ ಅಭ್ಯರ್ಥಿ ಎದುರು ಸುಮಾರು 4.83,121 ಮತ ಪಡೆದು ದಾಖಲೆ ಬರೆದರು.

ಗಾಂಧಿನಗರದಲ್ಲಿ ಪಟೇಲ್‌ ಸಮುದಾಯವೇ ನಿರ್ಣಾಯಕ. ಕ್ಷೇತ್ರದಲ್ಲಿ ಒಟ್ಟಾರೆ 17,33,972 ಮತದಾರರು ಇದ್ದಾರೆ. ಈ ಪೈಕಿ ಒಟ್ಟು 9,00,744 ಪುರುಷರು ಮತ್ತು 8,33,210 ಮಹಿಳಾ ಮತದಾರರು ಇದ್ದಾರೆ. ಅಮಿತ್‌ ಶಾ ಅವರ ಸೊಸೆ ಪಾಟೀಲ್​​ ಸಮುದಾಯಕ್ಕೆ ಸೇರಿದವರು. ಇತ್ತೀಚೆಗೆ ಪಟೇಲ್‌ ಸಮುದಾಯದ ಯುವ ಮುಖಂಡ ಹಾರ್ದಿಕ್‌ ಪಟೇಲ್‌ ಕಾಂಗ್ರೆಸ್​​ ಸೇರಿದರು. ಇವರು ಅಮಿತ್‌ ಶಾರನ್ನು ಪಾಟೀದಾರ್‌ ಸಮುದಾಯದ ದ್ವೇಷಿ ಎಂಬಂತೆ ಚಿತ್ರಿಸಲು ಯತ್ನಿಸಿದ್ದರೂ, ಅದರಲ್ಲಿ ವಿಫಲರಾಗಿದ್ದಾರೆ. ಏನೇ ಆದರೂ ಬಿಜೆಪಿ ಭದ್ರಕೋಟೆಯಲ್ಲಿ ಅಮಿತ್​​ ಶಾ ಗೆಲುವು ಗ್ಯಾರಂಟಿ ಮತ್ತು ಪಟೇಲ್​​ ಸಮುದಾಯ ಕೈಹಿಡಿಯಲಿದೆ ಎಂಬ ವಿಶ್ವಾಸ ಸ್ಥಳೀಯ ಕೇಸರಿ ನಾಯಕರದ್ದು.

ಹಾಗೆಯೇ, ಬಿಜೆಪಿ ಅಧ್ಯಕ್ಷ ಅಮಿತ್​ ಶಾ ವಿರುದ್ಧ ಕಾಂಗ್ರೆಸ್​ ಶಾಸಕ ಸಿ.ಜೆ. ಚಾವ್ಡಾ ಅವರನ್ನು ಸ್ಪರ್ಧೆಗೆ ಇಳಿಸಿದೆ. ಗಾಂಧಿನಗರ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಚಾವ್ಡಾ ಅವರು ಅಮಿತ್ ಶಾಗೆ ಪ್ರಬಲ ಪೈಪೋಟಿ ನೀಡಲಿದ್ದಾರೆ ಎನ್ನುವ ವಿಶ್ವಾಸವನ್ನು ಕಾಂಗ್ರೆಸ್ ವ್ಯಕ್ತಪಡಿಸಿದೆ. ಆದರೂ, ಪೈಪೋಟಿ ನೀಡಬಹುದೇ ಹೊರತು ಗೆಲುವು ಸುಲಭವಲ್ಲ ಎಂದು ಭಾವಿಸಿರುವ ಕಾಂಗ್ರೆಸ್​​ ಈಗಾಗಲೇ ಶಾ ಎದುರು ಸೋಲನ್ನು ಒಪ್ಪಿಕೊಂಡಿದೆ.

​​ಗಾಂಧಿನಗರದಲ್ಲಿ ಇಲ್ಲಿಯವರೆಗೂ ಗೆದ್ದವರ ಪಟ್ಟಿ?

1967: ಕಾಂಗ್ರೆಸ್‌/ಎಸ್‌ಎಂ ಸೋಲಂಕಿ
1971: ಕಾಂಗ್ರೆಸ್‌(ಒ)/ಎಸ್‌ಎಂ ಸೋಲಂಕಿ
1977: ಭಾರತೀಯ ಲೋಕದಳ/ಪಿಜಿ ಮಾವಲಂಕರ್‌
1980: ಕಾಂಗ್ರೆಸ್‌/ಎಎಂ ಪಟೇಲ್‌
1984: ಕಾಂಗ್ರೆಸ್‌/ಜಿಐ ಪಟೇಲ್‌
1989: ಬಿಜೆಪಿ/ವಿಎಸ್‌ ಲಕ್ಷ್ಮಣ್‌ಜಿ
1991: ಬಿಜೆಪಿ/ಎಲ್‌ಕೆ ಆಡ್ವಾಣಿ
1996: ಬಿಜೆಪಿ/ ಅಟಲ್‌ ಬಿಹಾರಿ ವಾಜಪೇಯಿ
1998 ರಿಂದ 2014: ಬಿಜೆಪಿ/ಎಲ್‌ಕೆ ಆಡ್ವಾಣಿ

1984ರ ಚುನಾವಣೆಯಲ್ಲಿ ಬಿಜೆಪಿ ಕೇವಲ 2 ಲೋಕಸಭಾ ಕ್ಷೇತ್ರ ಗೆದ್ದಿತ್ತು. ಈ ಸಂದರ್ಭದಲ್ಲಿ ಪಕ್ಷ ಕಟ್ಟುವಲ್ಲಿ ಅಡ್ವಾಣಿ ಪ್ರಮುಖ ಪಾತ್ರವಹಿಸಿದ್ದರು. ಬಳಿಕ ಮೊದಲ ಬಾರಿಗೆ 1991ರಲ್ಲಿ ಗೆದ್ದ ಎಲ್​​​.ಕೆ ಆಡ್ವಾಣಿ ನಂತರದಲ್ಲಿ ಸತತವಾಗಿ ಆರು ಬಾರಿ ಗೆದ್ದರು. ಗಾಂಧಿನಗರ ಕ್ಷೇತ್ರದಿಂದ ಗೆದ್ದು ಬಂದ ನಂತರದಲ್ಲಿ ಆಯೋಧ್ಯದಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಒತ್ತಾಯಿಸಿ ದೇಶಾದ್ಯಂತ ಹಿಂದೂ ರಥ ಯಾತ್ರೆ ನಡೆಸಿದರು.

ಅಮಿತ್ ಶಾ ಬಿಜೆಪಿ ಪಕ್ಷದ ರಾಷ್ಟ್ರಾಧ್ಯಕ್ಷ. ಪ್ರಸಕ್ತ ರಾಜಕೀಯ ಸ್ಥಿತಿಗತಿಗಳ ಇಂಚಿಂಚು ಮಾಹಿತಿ ಹೊಂದಿರುವ ಅವರಿಗೆ ‘ಚಾಣಕ್ಯ’ ಎನ್ನುವ ಬಿರುದೂ ಇದೆ. ಆರಂಭದಲ್ಲಿ ಗುಜರಾತ್​ನಲ್ಲಿ ಹಿರಿಯ ಬಿಜೆಪಿ ನಾಯಕ ಎಲ್.ಕೆ. ಆಡ್ವಾಣಿ ಚುನಾವಣೆಗೆ ಸ್ಪರ್ಧಿಸಿದ್ದ ಕ್ಷೇತ್ರದ ಪ್ರಚಾರದ ಜವಾಬ್ದಾರಿ ಹೊತ್ತು ಒಂದಷ್ಟು ಅನುಭವ ಪಡೆದುಕೊಂಡರು. ನಂತರ ಅವರು ಹಿಂತಿರುಗಿ ನೋಡಲೇ ಇಲ್ಲ.

1989-2014ರ ಅವಧಿಯಲ್ಲಿ ಅಮಿತ್ ಶಾ ಸ್ಥಳೀಯ ಚುನಾವಣೆಯಿಂದ ಹಿಡಿದು ಲೋಕಸಭೆಯವರೆಗೆ ಒಟ್ಟು 42 ಚುನಾವಣೆಗಳನ್ನು ಎದುರಿಸಿದ್ದಾರೆ. ಆ ಪೈಕಿ ಅವರು ಒಂದೇ ಒಂದು ಚುನಾವಣೆಯನ್ನು ಸೋತಿಲ್ಲ ಎಂಬುದು ಅವರ ಹೆಚ್ಚುಗಾರಿಕೆ. ಸದ್ಯ ಅವರು ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ 43ನೇ ಚುನಾವಣೆಯನ್ನೂ ಗೆದ್ದಿದ್ದಾರೆ. ಹಾಗಾಗಿ ಈ ಸಲ ಕಾಂಗ್ರೆಸ್​ನಿಂದ ಯಾರನ್ನೇ ಕಣಕ್ಕಿಳಿಸಿದರೂ ಗೆಲುವು ಅಮಿತ್​​ ಶಾ ಅವರದ್ದೇ ಎಂದು ಸಮೀಕ್ಷೆಗಳು ಹೇಳುತ್ತಿವೆ.

Comments are closed.