ರಾಷ್ಟ್ರೀಯ

ಗೋಡ್ಸೆ ದೇಶಭಕ್ತ ಎಂದ ಪ್ರಗ್ಯಾ ಠಾಕೂರ್; ವಿಪಕ್ಷಗಳು, ಬಿಜೆಪಿಯಿಂದಲೂ ಖಂಡನೆ

Pinterest LinkedIn Tumblr


ಭೋಪಾಲ್: ಸಂಝೋತಾ ಎಕ್ಸ್​ಪ್ರೆಸ್ ರೈಲು ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿದ್ದ ಹಾಗೂ ಭೋಪಾಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಗ್ಯಾ ಠಾಕೂರ್ ಅವರು ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 1948ರಲ್ಲಿ ಮಹಾತ್ಮ ಗಾಂಧಿ ಅವರನ್ನು ಹತ್ಯೆಗೈದಿದ್ದ ನಾಥುರಾಮ್ ಗೋಡ್ಸೆ ಒಬ್ಬ ದೇಶಭಕ್ತ ಎಂದು ಪ್ರಗ್ಯಾ ಸಿಂಗ್ ಹೇಳಿಕೆ ನೀಡಿದ್ದಾರೆ. ಗಾಂಧಿಯನ್ನು ಕೊಂದ ಗೋಡ್ಸೆ ಸ್ವತಂತ್ರ ಭಾರತದ ಮೊತ್ತಮೊದಲ ಭಯೋತ್ಪಾದಕ ಎಂದು ಕಮಲ ಹಾಸನ್ ನೀಡಿದ್ದ ಹೇಳಿಕೆಗೆ ಪ್ರಗ್ಯಾ ಸಿಂಗ್ ಠಾಕೂರ್ ಈ ರೀತಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಮಧ್ಯಪ್ರದೇಶದ ಅಗರ್ ಮಾಲವಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದ ಪ್ರಗ್ಯಾ ಸಿಂಗ್, “ನಾಥುರಾಮ್ ಗೋಡ್ಸೆ ಒಬ್ಬ ದೇಶಭಕ್ತರಾಗಿದ್ದವರು, ಮುಂದೆಯೂ ಅವರು ದೇಶಭಕ್ತರೇ. ಅವರನ್ನು ಭಯೋತ್ಪಾದಕ ಎಂದು ಕರೆಯುವವರು ಆತ್ಮವಿಮರ್ಶೆ ಮಾಡಿಕೊಳ್ಳಲಿ. ಇಂಥವರಿಗೆ ಜನರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ” ಎಂದು ಎಚ್ಚರಿಕೆ ನೀಡಿದ್ದಾರೆ.

ಗೋಡ್ಸೆಯನ್ನು ದೇಶಭಕ್ತ ಎಂದು ಪ್ರಗ್ಯಾ ಸಿಂಗ್ ಹೇಳಿಕೆ ನೀಡಿದ ಬೆನ್ನಲ್ಲೇ ದೇಶಾದ್ಯಂತ ಖಂಡನೆ ವ್ಯಕ್ತವಾಗಿದೆ. ಕಾಂಗ್ರೆಸ್ ಸೇರಿದಂತೆ ಬಹುತೇಕ ವಿಪಕ್ಷಗಳು ತೀಕ್ಷ್ಣ ಪ್ರತಿಕ್ರಿಯೆ ನೀಡಿವೆ. ಬಿಜೆಪಿ ಕೂಡ ತಮ್ಮ ಅಭ್ಯರ್ಥಿಯ ಹೇಳಿಕೆಯನ್ನು ಅಲ್ಲಗಳೆದಿದೆ.

ಪ್ರಗ್ಯಾ ಸಿಂಗ್ ಅವರ ಈ ಹೇಳಿಕೆಯನ್ನು ಪಕ್ಷ ಒಪ್ಪುವುದಿಲ್ಲ. ನಾವು ಇದನ್ನು ಖಂಡಿಸುತ್ತೇವೆ. ಈ ಬಗ್ಗೆ ಆಕೆಯಲ್ಲಿ ಸ್ಪಷ್ಟನೆ ಕೇಳುತ್ತೇವೆ. ಅವರು ಈ ಹೇಳಿಕೆಗಾಗಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ವಕ್ತಾರ ಜಿ.ವಿ.ಎಲ್. ನರಸಿಂಹ ರಾವ್ ತಿಳಿಸಿದ್ದಾರೆ.

ಪ್ರಗ್ಯಾ ಠಾಕೂರ್ ಅವರ ಪ್ರಚಾರ ಉಸ್ತುವಾರಿ ಹೊತ್ತಿರುವ ಡಾ| ಹಿತೇಶ್ ವಾಜಪೇಯಿ ಕೂಡ ಈ ಹೇಳಿಕೆಯನ್ನು ಖಂಡಿಸಿದ್ದಾರೆ. ಮಹಾತ್ಮ ಗಾಂಧಿ ಅವರ ಘನತೆಗೆ ಧಕ್ಕೆ ತರುವ ಯಾವುದೇ ಅಂಶವನ್ನೂ ಬಿಜೆಪಿ ಪುರಸ್ಕರಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಹಾಗೆಯೇ ಭಯೋತ್ಪಾದನೆಗೆ ಯಾವುದೇ ಜಾತಿ, ವರ್ಗ ಅಥವಾ ಬಣ್ಣ ಇಲ್ಲ ಎಂದೂ ಅವರು ವಿಪಕ್ಷಗಳಿಗೆ ತಿಳಿಹೇಳಿದ್ದಾರೆ.

ಇನ್ನು, ವಿಪಕ್ಷ ಮುಖಂಡರಂತೂ ಸಾಧ್ವಿ ಹೇಳಿಕೆಗೆ ತೀಕ್ಷ್ಣ ಪದಗಳಲ್ಲಿ ಪ್ರತಿಕ್ರಿಯಿಸಿದ್ದಾರೆ. ರಾಷ್ಟ್ರಪಿತರನ್ನು ಕೊಂದವರು ದೇಶಭಕ್ತರಾದರೆ, ಮಹಾತ್ಮ ಗಾಂಧಿ ದೇಶದ್ರೋಹಿಯಾದಂತಾಗುತ್ತದಾ ಎಂದು ಜಮ್ಮುಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಪ್ರಶ್ನಿಸಿದ್ದಾರೆ.

ಮಧ್ಯಪ್ರದೇಶದ ಕಾಂಗ್ರೆಸ್ ಮುಖಂಡ ಹಾಗೂ ಭೋಪಾಲ್ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ಅವರು ಮಾತನಾಡುತ್ತಾ, ಪ್ರಗ್ಯಾ ಹೇಳಿಕೆಯು ದೇಶಪ್ರೇಮವಲ್ಲ, ಅದು ದೇಶದ್ರೋಹ ಎಂದು ಬಣ್ಣಿಸಿದ್ದಾರೆ. ಹಾಗೆಯೇ, ಆಕೆಯ ಹೇಳಿಕೆಗೆ ಮೋದಿ ಮತ್ತು ಅಮಿತ್ ಶಾ ದೇಶದ ಕ್ಷಮೆ ಕೋರಬೇಕು ಎಂದೂ ಆಗ್ರಹಿಸಿದ್ದಾರೆ.

ತಮ್ಮ ಹೇಳಿಕೆಗೆ ಸ್ವಪಕ್ಷದಿಂದಲೇ ಖಂಡನೆ ವ್ಯಕ್ತವಾದ ಬೆನ್ನಲ್ಲೇ ಸಾಧ್ವಿ ಪ್ರಗ್ಯಾ ಸಿಂಗ್ ಅವರು ಮಧ್ಯಪ್ರದೇಶ ಘಟಕದ ಬಿಜೆಪಿಗೆ ಕ್ಷಮೆ ಯಾಚಿಸಿ ವಿವಾದಕ್ಕೆ ಥೇಪೆ ಹಚ್ಚುವ ಕೆಲಸ ಮಾಡಿದ್ದಾರೆ.

“ನನ್ನ ಸಂಘಟನೆಯ ಮೇಲೆ ನನಗೆ ನಂಬಿಕೆ ಇದೆ. ನನ್ನ ಪಕ್ಷದ ಅಭಿಪ್ರಾಯವೇ ನನ್ನ ಅಭಿಪ್ರಾಯ” ಎಂದು ಸಾಧ್ವಿ ಪ್ರಗ್ಯಾ ಸ್ಪಷ್ಟನೆ ನೀಡಿದರಾದರೂ ಬಹಿರಂಗ ಕ್ಷಮೆ ಕೋರಲಿಲ್ಲ.

ಇದೇ ವೇಳೆ, ಕೇಂದ್ರ ಚುನಾವಣಾ ಆಯೋಗವು ಈ ಪ್ರಕರಣದಲ್ಲಿ ವರದಿ ನೀಡುವಂತೆ ಮಧ್ಯಪ್ರದೇಶದ ಚುನಾವಣಾಧಿಕಾರಿಗೆ ಸೂಚನೆ ನೀಡಿದೆ. ಇನ್ನು, ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲನಾಥ್ ಅವರು ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದಾರೆ.

ಸಾಧ್ವಿ ವಿವಾದಗಳು:

ಸಾಧ್ವಿ ಪ್ರಗ್ಯಾ ಸಿಂಗ್ ಅವರು ಈ ಹಿಂದೆ ಹಲವು ಬಾರಿ ವಿವಾದಾತ್ಮಕ ಹೇಳಿಕೆಗಳನ್ನ ನೀಡಿದ್ದಾರೆ. ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾದ ಬಳಿಕವೂ ಅವರು ವಿವಾದಗಳಿಂದ ಮುಕ್ತರಾಗಿಲ್ಲ. 2008ರ ಮುಂಬೈ ಉಗ್ರ ದಾಳಿ ಘಟನೆಯ ಹುತಾತ್ಮ ಪೊಲೀಸ್ ಅಧಿಕಾರಿ ಹೇಮಂತ್ ಕರ್ಕರೆ ವಿರುದ್ಧ ಅವರು ಕೆಂಡಕಾರಿದ್ದರು. ತಮ್ಮ ಶಾಪದಿಂದಾಗಿ ಅವರು ಸತ್ತರೆಂದು ಹೇಳಿಕೆ ಕೊಟ್ಟಿದ್ದರು.

ಇನ್ನು ನಾಥುರಾಮ್ ಗೋಡ್ಸೆ ಅವರನ್ನು ಪ್ರಗ್ಯಾ ಈ ಮುಂಚೆಯೂ ಅನೇಕ ಬಾರಿ ಸಮರ್ಥನೆ ಮಾಡಿಕೊಂಡಿದ್ದರು. ಗ್ಲಾಲಿಯರ್ ನಗರದಲ್ಲಿರುವ ತಮ್ಮ ಕಚೇರಿಯಲ್ಲಿ ಗೋಡ್ಸೆ ಫೋಟೋ ತೂಗು ಹಾಕಿದ್ದರು.

Comments are closed.