ಈ ಬಾರಿ ಮಳೆಗಾಲ ತಡವಾಗಿ ಆರಂಭವಾಗಲಿದ್ದು, ಜೂನ್ 6ರಂದು ಕೇರಳಕ್ಕೆ ಮಾನ್ಸೂನ್ ಕಾಲಿಡಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಳೆ ತರಲಿರುವ ನೈರುತ್ಯ ಮಾನ್ಸೂನ್ ಮಾರುತಗಳು ಜೂನ್ 1ರಿಂದ ಸಾಮಾನ್ಯವಾಗಿ ಕೇರಳ ಮೂಲಕ ದೇಶಕ್ಕೆ ಆಗಮಿಸುತ್ತದೆ. ಆದರೆ, ಈ ಬಾರಿ ಆರು ದಿನ ತಡವಾಗಿ ಮಾನ್ಸೂನ್ ದೇವರ ನಾಡಿಗೆ ಕಾಲಿಡಲಿದ್ದು, ಸೆಪ್ಟೆಂಬರ್ನಲ್ಲಿ ರಾಜಸ್ಥಾನದ ಮೂಲಕ ಮಳೆಗಾಲ ನಿರ್ಗಮಿಸಲಿದೆ.
ಮಳೆ ಆಗಮನ ಕುರಿತು ನಿನ್ನೆ ಸುದ್ದಿ ನೀಡಿದ್ದ ಖಾಸಗಿ ಹವಾಮಾನ ಏಜೆನ್ಸಿ ಸ್ಕೈಮ್ಯಾಟ್ ದಕ್ಷಿಣ ಕರಾವಳಿ ಮೂಲಕ ಜೂನ್ 4ರಿಂದ ಕೇರಳದಲ್ಲಿ ಮುಂಗಾರು ಆರಂಭವಾಗಲಿದ್ದು, ಈ ಬಾರಿ ಸಾಮಾನ್ಯ ಮಳೆಯಾಗಲಿದೆ ಎಂದು ತಿಳಿಸಿತು.
ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಮಳೆಗಾಲ ತಡವಾಗಿ ಆರಂಭವಾಗಲಿದೆ. ಇನ್ನು ಅಂಡಮಾನ್ ಮತ್ತು ನಿಕೋಬರ್ ದ್ವೀಪಗಳಲ್ಲಿ ಸಾಮಾನ್ಯವಾಗಿ ಮೇ 15ರಿಂದ 20ರ ಒಳಗೆ ಮಾನ್ಸೂನ್ ಆರಂಭವಾದರೆ, ಕೇರಳದಲ್ಲಿ ಮೇ ಕಡೆಯವಾರ ಮಳೆಗಾಲ ಶುರುವಾಗಲಿದೆ.
ಕೇರಳಕ್ಕೆ ತಡವಾಗಿ ಆಗಮಿಸಲಿರುವ ಮಾನ್ಸೂನ್ ದೇಶದ ಉಳಿದೆಲ್ಲಾ ಕಡೆಯೂ ಮಳೆ ವಿಳಂಬಕ್ಕೆ ಕಾರಣವಾಗಲಿದೆ. ಕಳೆದ ಬಾರಿ ಮೇ 29ರಂದು ಕೇರಳದಲ್ಲಿ ಮಳೆಗಾಲ ಆರಂಭವಾಗಿತ್ತು.
ತಡವಾಗಿ ಶುರುವಾಗಲಿರುವ ಮಳೆಗಾಲದಿಂದಾಗಿ ಒಟ್ಟಾರೆ ಮಳೆಯ ಪ್ರಮಾಣದ ಮೇಲೆ ಪರಿಣಾಮ ಬೀರುವುದಿಲ್ಲ. ಆದರೂ, ಈ ಬಾರಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.