ರಾಷ್ಟ್ರೀಯ

ನಮ್ಮ ಅಪ್ಪನಿಗೆ ಟಿಕೆಟ್​​ ನೀಡಲು ಕೇಜ್ರಿವಾಲ್​​ 6 ಕೋಟಿ ಪಡೆದಿದ್ದಾರೆ; ಆಪ್​​ ಮುಖಂಡ ಆರೋಪ

Pinterest LinkedIn Tumblr


ನವದೆಹಲಿ: 6ನೇ ಹಂತದ ಮತದಾನಕ್ಕೆ ಒಂದು ದಿನ ಬಾಕಿ ಇರುವಾಗಲೇ ದೆಹಲಿ ಸಿಎಂ ಅರವಿಂದ್​​ ಕೇಜ್ರಿವಾಲ್​​ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ. ತನ್ನ ತಂದೆಗೆ ಪಶ್ಚಿಮ ದೆಹಲಿ ಲೋಕಸಭಾ ಟಿಕೆಟ್ ನೀಡಲು ಸಿಎಂ ಕೇಜ್ರಿವಾಲ್​​ 6 ಕೋಟಿ ಹಣ ಪಡೆದಿದ್ಧಾರೆ ಎಂದು ಆಪ್​​ ಪಕ್ಷದ ಮುಖಂಡ ಪುತ್ರ ಉದಯ್ ಜಖರ್ ಎಂಬುವರು ಆರೋಪಿಸಿದ್ದಾರೆ.

ಸಿಎಂ ಅರವಿಂದ್​​ ಕೇಜ್ರಿವಾಲ್​​ ಮೇಲೆ ಆರೋಪ ಎಸಗಿದ ಉದಯ್ ಜಖಡ್ ಅವರು ಆಪ್​​ ಪಕ್ಷದ ಬಲಬೀರ್ ಸಿಂಗ್ ಜಖರ್ ಪುತ್ರ. ಮೂರು ತಿಂಗಳ ಹಿಂದೆಯೇ ನನ್ನ ತಂದೆ ಪಕ್ಷಕ್ಕೆ ಸೇರ್ಪಡೆಯಾದರು. ಇಲ್ಲಿನ ಪಶ್ಚಿಮ ದೆಹಲಿ ಲೋಕಸಭಾ ಟಿಕೆಟ್‌ ಪಡೆಯಲು ನನ್ನ ತಂದೆ ಕೇಜ್ರಿವಾಲ್ ಅವರಿಗೆ 6 ಕೋಟಿ ಹಣ ನೀಡಿದ್ಧಾರೆ. ಈ ಬಗ್ಗೆ ನನ್ನ ಬಳಿ ಸಾಕ್ಷಿಯಿದೆ ಎಂದು ಉದಯ್ ಹೇಳಿಕೊಂಡಿದ್ದಾರೆ.

ಮಗನ ಆರೋಪಕ್ಕೆ ಬಲಬೀರ್ ಪ್ರತಿಕ್ರಿಯಿಸಿದ್ಧಾರೆ. ಈ ವೇಳೆ ಉದಯ್​​ ಹಲವು ದಿನಗಳಿಂದ ನನ್ನ ಜತೆಗಿಲ್ಲ. ಅಭ್ಯರ್ಥಿ ಆಯ್ಕೆ ಬಗ್ಗೆ ಯಾವುದೇ ರೀತಿ ಚರ್ಚೆ ನನ್ನ ಮಗನೊಂದಿಗೆ ನಡೆದಿಲ್ಲ. ಹಾಗಾಗಿ ಈ ವಿಚಾರಕ್ಕೆ ಅಷ್ಟು ಮನ್ನಣೆ ನೀಡುವ ಅಗತ್ಯವಿಲ್ಲ ಎಂದಿದ್ಧಾರೆ.

ಇನ್ನು ಆಪ್​​ ಪಕ್ಷವೂ ತನ್ನ ಕೊನೆಯ ಅಭ್ಯರ್ಥಿಯಾಗಿ ಬಲಬೀರ್ ಅವರನ್ನು ಮಾರ್ಚ್ 17ರಂದು ಘೋಷಿಸಿತ್ತು. ಮಾರ್ಚ್‌ 2ರಂದು ಉಳಿದ ಆರು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿತ್ತು. ಇದೀಗ ಈ ಬೆನ್ನಲ್ಲೇ ದೆಹಲಿಯ ಬಿಜೆಪಿ ಅಭ್ಯರ್ಥಿ ಪ್ರವೀಣ್ ಖಂಡೆವಾಲಾ ಪ್ರತಿಕ್ರಿಯಿಸಿದ್ದಾರೆ. ಇದೊಂದು ಗಂಭೀರ ವಿಚಾರ. ಈ ಬಗ್ಗೆ ಚುನಾವಣಾ ಆಯೋಗ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಕೇಜ್ರಿವಾಲ್, ಗೋಪಾಲ ರೈ, ಬಲಬೀರ್ ಈ ಮೂವರಿಗೂ ನೋಟಿಸ್ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ನಾಳಿನ ಮತದಾನದಲ್ಲಿ ಬಹುತೇಕದ ಕಣ್ಣು ದೆಹಲಿಯ ಮೇಲಿದೆ. ‘ದೆಹಲಿ ಗೆದ್ದವರು ದೇಶ ಆಳುತ್ತಾರೆ’ ಎಂಬ ನಂಬಿಕೆ ಇರುವುದರಿಂದ ದೆಹಲಿಯ ಚುನಾವಣೆಯ ಮೇಲೆ ಎಲ್ಲರ ಕಣ್ಣೂ ನೆಟ್ಟಿದೆ. ಗೌತಮ್ ಗಂಭೀರ್, ಶೀಲಾ ದೀಕ್ಷಿತ್, ಬಾಕ್ಸರ್ ವಿಜಯೇಂದರ್ ಸಿಂಗ್, ಕೇಂದ್ರ ಮಂತ್ರಿ ಹರ್ಷ ವರ್ಧನ್, ಎಎಪಿಯ ಆತಿಶಿ ಇನ್ನೂ ಹಲವು ಖ್ಯಾತ ನಾಮರ ರಾಜಕೀಯ ಭವಿಷ್ಯ ನಾಳೆ ಇವಿಎಂಗಳಲ್ಲಿ ಭದ್ರವಾಗಲಿದೆ.

Comments are closed.