ರಾಷ್ಟ್ರೀಯ

ಬಿಜೆಪಿ ಮೋದಿ, ಅಮಿತ್ ಶಾ ಪಕ್ಷ ಆಗಲ್ಲ: ನಿತಿನ್ ಗಡ್ಕರಿ

Pinterest LinkedIn Tumblr


ನವದೆಹಲಿ: ಬಿಜೆಪಿ ಪಕ್ಷ ಸಂಪೂರ್ಣವಾಗಿ ನರೇಂದ್ರ ಮೋದಿ ಅವರ ಹಿಡಿತದಲ್ಲಿದೆ ಎಂಬ ಆರೋಪವನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ತಳ್ಳಿಹಾಕಿದರು. ಪಿಟಿಐ ಸುದ್ದಿಸಂಸ್ಥೆಯೊಂದಿಗಿನ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಕೇಂದ್ರ ಜಲಸಂಪನ್ಮೂಲ ಸಚಿವರೂ ಆದ ಗಡ್ಕರಿ ಅವರು ಬಿಜೆಪಿ ಯಾವತ್ತೂ ವ್ಯಕ್ತಿ ಕೇಂದ್ರಿತ ಪಕ್ಷವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.

“ಬಿಜೆಪಿ ಈ ಮುಂಚೆ ಅಟಲ್ ಅಥವಾ ಆಡ್ವಾಣಿ ಅವರ ಪಕ್ಷವಾಗಿರಲಿಲ್ಲ, ಅಥವಾ ಈಗ ಅಮಿತ್ ಶಾ ಅಥವಾ ನರೇಂದ್ರ ಮೋದಿ ಅವರ ಪಕ್ಷವಾಗಿ ಉಳಿಯುವುದಿಲ್ಲ” ಎಂದು ನಿತಿನ್ ಗಡ್ಕರಿ ಸ್ಪಷ್ಟಪಡಿಸಿದರು.

ಸಿದ್ದಾಂತದ ಆಧಾರದ ಮೇಲೆ ನಿಂತಿರುವ ಬಿಜೆಪಿಯು ಮೋದಿ ಕೇಂದ್ರಿತವಾಗಿದೆ ಎಂಬುದು ತಪ್ಪು. ಬಿಜೆಪಿ ಮತ್ತು ನರೇಂದ್ರ ಮೋದಿ ಮಧ್ಯೆ ಪರಸ್ಪರ ಪೂರಕ ಸಂಬಂಧವಿದೆ ಎಂದು ವಿಶ್ಲೇಷಿಸಿದರು.

“ಬಿಜೆಪಿ ಯಾವತ್ತೂ ಕೂಡ ವ್ಯಕ್ತಿ ಕೇಂದ್ರಿತ ಪಕ್ಷವಾಗುವುದಿಲ್ಲ. ಬಿಜೆಪಿಯಲ್ಲಿ ಕೌಟುಂಬಿಕ ಆಡಳಿತ ಇರಲು ಸಾಧ್ಯವಿಲ್ಲ. ಪಕ್ಷವು ಮೋದಿ ಕೇಂದ್ರಿತವಾಗಿದೆ ಎನ್ನುವುದು ತಪ್ಪು. ಪಕ್ಷದ ಸಂಸದೀಯ ಮಂಡಳಿಯಿಂದಲೇ ಎಲ್ಲಾ ನಿರ್ಧಾರಗಳಾಗುತ್ತವೆ” ಎಂದೂ ನಿತಿನ್ ಗಡ್ಕರಿ ಅನುಮಾನ ದೂರ ಮಾಡಲು ಯತ್ನಿಸಿದರು.

ಮೋದಿ ಮೇಲೆಯೇ ಹೆಚ್ಚು ಗಮನ ಕೊಡಲಾಗುತ್ತಿರುವ ಬಗ್ಗೆ ಸ್ಪಷ್ಟನೆ ಕೊಟ್ಟ ನಿತಿನ್ ಗಡ್ಕರಿ, “ಒಂದು ವೇಳೆ ಪಕ್ಷವು ಪ್ರಬಲವಾಗಿ, ಅದರ ನಾಯಕ ದುರ್ಬಲವಾಗಿದ್ದರೆ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಅದೇ ರೀತಿ ನಾಯಕ ದುರ್ಬಲನಾಗಿ ಪಕ್ಷ ಬಲವಾಗಿದ್ದರೂ ಗೆಲುವು ಸಾಧ್ಯವಿಲ್ಲ. ಹಾಗೆಯೇ, ಜನಪ್ರಿಯ ನಾಯಕನೊಬ್ಬ ಮುನ್ನೆಲೆಯಲ್ಲಿ ಕಾಣಿಸಿಕೊಳ್ಳುವುದು ಸಹಜವೇ” ಎಂದು ವಿಶ್ಲೇಷಿಸಿದರು.

ಮೋದಿ ಸರಕಾರವು ಸೋಲಿನ ಭೀತಿಯಲ್ಲಿ ತನ್ನ ಸಾಧನೆಯ ಬದಲು ರಾಷ್ಟ್ರೀಯತೆಯನ್ನು ಮುಂದಿಡುತ್ತಿದೆ ಎಂಬ ಆರೋಪವನ್ನು ಈ ವೇಳೆ ಗಡ್ಕರಿ ತಳ್ಳಿಹಾಕಿದರು.

“ರಾಷ್ಟ್ರೀಯತೆ ನಮ್ಮ ಆತ್ಮವಾಗಿದೆ. ಒಳ್ಳೆಯ ಆಡಳಿತ ಮತ್ತು ಅಭಿವೃದ್ಧಿ ನಮ್ಮ ಗುರಿ. ಬಡವರಿಗೆ ರೋಟಿ, ಕಪಡ ಮತ್ತು ಮಕಾನ್(ಆಹಾರ, ಬಟ್ಟೆ ಮತ್ತು ಮನೆ) ಒದಗಿಸುವುದು ನಮ್ಮ ಧ್ಯೇಯ…. ಬಿಜೆಪಿಯ ಅಭಿವೃದ್ಧಿ ಅಜೆಂಡಾದ ಹಾದಿ ತಪ್ಪಿಸಲು ವಿಪಕ್ಷಗಳು ಜಾತೀಯತೆ ಮತ್ತು ಕೋಮುವಾದದ ವಿಷ ಬೀಜ ಬಿತ್ತಲು ಯತ್ನಿಸಿದೆ. ಆದರೆ, ಜನರು ನಮ್ಮ ಪರವಾಗಿದ್ದು, ಪೂರ್ಣ ಬಹುಮತದೊಂದಿಗೆ ನಾವು ಸರಕಾರ ರಚಿಸುತ್ತೇವೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ, ಹಡಗು ಮತ್ತು ಜನ ಸಂಪನ್ಮೂಲ ಖಾತೆ, ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ ಖಾತೆಯ ಸಚಿವರಾಗಿರುವ ನಿತಿನ್ ಗಡ್ಕರಿ ಅವರು ನಾಗಪುರ ಲೋಕಸಭಾ ಕ್ಷೇತ್ರದಿಂದ ಈ ಬಾರಿಯೂ ಸ್ಪರ್ಧಿಸಿದ್ದಾರೆ. ಮೋದಿ ಸರಕಾರದಲ್ಲಿ ಅತ್ಯಂತ ಅನುಭವ ಇರುವ ಮಂತ್ರಿಗಳ ಪೈಕಿ ಗಡ್ಕರಿ ಕೂಡ ಒಬ್ಬರು.

Comments are closed.