ನವದೆಹಲಿ: ಆಮ್ ಆದ್ಮಿ ಪಕ್ಷದ ದೆಹಲಿ ಪೂರ್ವ ಕ್ಷೇತ್ರದ ಅಭ್ಯರ್ಥಿ ಅತಿಶಿ ಅವರು ತಮ್ಮ ಎದುರಾಳಿ ಬಿಜೆಪಿಯ ಗೌತಮ್ ಗಂಭೀರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. “ಎದುರಾಳಿ ನನ್ನ ಬಗ್ಗೆ ಅಸಭ್ಯ ಪದಗಳನ್ನು ಬಳಸಿ, ನಿಂದಿಸಿ, ತನ್ನ ನೈತಿಕತೆಯನ್ನು ಪ್ರಶ್ನೆ ಮಾಡಿ ಲಕ್ಷಾಂತರ ಕರಪತ್ರಗಳನ್ನು ಹಂಚಿದ್ದಾರೆ,” ಎಂದು ಆರೋಪಿಸಿದ್ದಾರೆ.
ಹಂಚಲಾಗಿರುವ ಕರಪತ್ರವನ್ನು ಸುದ್ದಿಗೋಷ್ಠಿಯಲ್ಲಿ ಅತಿಶಿ ಓದಿದರು. ಕಣ್ಣೀರು ಸುರಿಸುತ್ತಲೇ ಕರಪತ್ರ ಓದಿದ ಅತಿಶಿ ಓದುವ ಮಧ್ಯೆ ಎರಡು ಬಾರಿ ನೋವನ್ನು ವ್ಯಕ್ತಪಡಿಸಿದರು. ಇಂತಹ ಪುರುಷರು ಗೆದ್ದು ಬಂದರೆ ಮಹಿಳೆಯರು ಸುರಕ್ಷಿತವಾಗಿ ಇರುವುದಾದರೂ ಹೇಗೆ ಎಂದು ಅತಿಶಿ ಇದೇ ವೇಳೆ ಪ್ರಶ್ನೆ ಮಾಡಿದರು.
ಕರಪತ್ರದಲ್ಲಿ “ಅತಿಶಿ ಒಬ್ಬಳು ವೇಶ್ಯೆ, ದನದ ಮಾಂಸ ತಿನ್ನುವವಳು, ಮಿಶ್ರ ತಳಿಗೆ ಅತ್ಯುತ್ತಮ ಉದಾಹರಣೆ,” ಎಂದು ಅತಿಕೆಟ್ಟ ಪದಪುಂಜಗಳನ್ನು ಬಳಸಿ, ಅತಿಶಿಯನ್ನು ನಿಂದಿಸಲಾಗಿದೆ. ಅಲ್ಲದೇ, ಪತ್ರದಲ್ಲಿ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಅತಿಶಿ ನಡುವೆ ಲೈಂಗಿಕ ಸಂಪರ್ಕವಿದೆ ಎಂದು ಆರೋಪ ಮಾಡಲಾಗಿದೆ. ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಮನೀಶ್ ಸಿಸೋಡಿಯಾ ಮಾತನಾಡಿ, “ತೀರಾ ಅಶ್ಲೀಲ ಪದಗಳನ್ನು ಕರಪತ್ರದಲ್ಲಿ ಬರೆಯಲಾಗಿದೆ. ಇದನ್ನು ಓದಲು ಪ್ರತಿಯೊಬ್ಬರಿಗೂ ನಾಚಿಕೆಯಾಗುತ್ತದೆ.,” ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅತಿಶಿ ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಈ ಮೊದಲು ಅವರು ಶಿಕ್ಷಣ ಸಚಿವಾಲಯದ ಸಲಹೆಗಾರರಾಗಿ ಕೆಲಸ ಮಾಡಿದ್ದರು.
ಅಷ್ಟೇ ಅಲ್ಲದೇ, ಈ ಒಂದು ಪುಟದ ಪತ್ರದಲ್ಲಿ ದೆಹಲಿ ಸಿಎಂ ಕೇಜ್ರಿವಾಲ್ ಮತ್ತು ಸಿಸೋಡಿಯಾ ಇಬ್ಬರನ್ನೂ ಅಶ್ಲೀಲವಾಗಿ ನಿಂದಿಸಲಾಗಿದೆ. ಇವರು ಕಾನೂನುಬಾಹಿರ ದಂಪತಿಗೆ ಹುಟ್ಟಿದ ಪರಿಶಿಷ್ಟ ಜಾತಿಗೆ ಸೇರಿದವರು ಎಂದು ಜರಿಯಲಾಗಿದೆ.
ಸಿಸೋಡಿಯಾ ಮಾತನಾಡಿ, ಈ ಕರಪತ್ರದಲ್ಲಿ ಬಿಜೆಪಿ ಮತ್ತು ಗೌತಮ್ ಗಂಭೀರ್ ಕೈವಾಡ ಇದೆ ಎಂಬುದಕ್ಕೆ ಈ ಪತ್ರದ ಕೊನೇ ಸಾಲುಗಳೇ ಸಾಕ್ಷಿ. ದೆಹಲಿಯಲ್ಲಿ ಕಾಂಗ್ರೆಸ್ ಮತ್ತು ಎಎಪಿ ಕೈ ಜೋಡಿಸಿದರೂ ಒಂದೇ ಒಂದು ಸ್ಥಾನವನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಬರೆಯಲಾಗಿದೆ. ಹೀಗಾಗಿ ಈ ಕರಪತ್ರದ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಆರೋಪಿಸಿದರು.
“ಗೌತಮ್ ಗಂಭೀರ್ ಇಷ್ಟೊಂದು ಕೀಳುಮಟ್ಟಕ್ಕೆ ಇಳಿಯುತ್ತಾರೆ ಎಂದು ನಾವು ನಿರೀಕ್ಷಿಸಿರಲಿಲ್ಲ. ಇಂತಹ ವ್ಯಕ್ತಿಗಳಿಗೆ ಮತ ಹಾಕಿ ಇವರಿಂದ ಮಹಿಳೆಯರು ರಕ್ಷಣೆ ಬಯಸುವುದಾದರೂ ಹೇಗೆ. ಅತಿಶಿ ನೀವು ಧೈರ್ಯವಾಗಿರಿ. ಇದು ನಿಮಗೆ ಎಷ್ಟು ಕಷ್ಟವಾಗುತ್ತಿದೆ ಎಂಬುದನ್ನು ನಾನು ಬಲ್ಲೆ. ಇಂತಹವರ ವಿರುದ್ಧ ನಾವು ಹೋರಾಡಲೇಬೇಕು,” ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಅತಿಶಿ ಅವರ ಆರೋಪಕ್ಕೆ ಟ್ವಿಟರ್ನಲ್ಲಿ ಪ್ರತಿಕ್ರಿಯೆ ನೀಡಿರುವ ಗೌತಮ್ ಗಂಭೀರ್, ಅರವಿಂದ್ ಕೇಜ್ರಿವಾಲ್ ಮತ್ತು ಅತಿಶಿ ಅವರು ಈ ಆರೋಪವನ್ನು ಸಾಬೀತು ಮಾಡಿದರೆ ಈ ಕ್ಷಣವೇ ನಾನು ನನ್ನ ಸ್ಪರ್ಧೆಯಿಂದ ಹಿಂದೆ ಸರಿಯುತ್ತೇನೆ. ಸಾಬೀತು ಮಾಡಲಾಗದಿದ್ದರೆ ನೀವು ರಾಜಕೀಯದಿಂದ ಹೊರಗುಳಿಯುವಿರಾ? ಎಂದು ಪ್ರಶ್ನೆ ಮಾಡಿ, ಸವಾಲು ಹಾಕಿದ್ದಾರೆ.
ಈ ಆರೋಪವನ್ನು ನಿರಾಕರಿಸಿರುವ ಬಿಜೆಪಿಯ ಮಮತಾ ಕಾಳೆ, ನಿಜಕ್ಕೂ ಇದೊಂದು ಆಧಾರರಹಿತ ಆರೋಪ. ಸುಳ್ಳು ಹೇಳಲು ಮತ್ತು ರಾಜಕೀಯ ಮಾಡುವುದಕ್ಕೆ ಎಎಪಿಗೆ ದೊಡ್ಡ ಇತಿಹಾಸವೇ ಇದೆ ಎಂದು ವ್ಯಂಗ್ಯವಾಡಿದ್ದಾರೆ.
ಅತಿಶಿ ಮತ್ತು ಗೌತಮ್ ಗಂಭೀರ್ ಇಬ್ಬರೂ ಸ್ಪರ್ಧಿಸಿರುವ ಕ್ಷೇತ್ರಕ್ಕೆ ಇದೇ ತಿಂಗಳ 12ರಂದು 6ನೇ ಹಂತದಲ್ಲಿ ಮತದಾನ ನಡೆಯಲಿದೆ. ಇದೇ ಕ್ಷೇತ್ರದಿಂದ ಅರವಿಂದರ್ ಸಿಂಗ್ ಲವ್ಲಿ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿದ್ದಾರೆ.