ರಾಷ್ಟ್ರೀಯ

ಲೋಕಸಭಾ ಚುನಾವಣೆಯಲ್ಲಿ ಸಾವಿರಾರು ಕೋಟಿ ಬೆಟ್ಟಿಂಗ್​​

Pinterest LinkedIn Tumblr


ನವದೆಹಲಿ: ಸಾರ್ವತ್ರಿಕ ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಇನ್ನೇನು ಎರಡು ವಾರಗಳು ಮಾತ್ರ ಬಾಕಿಯಿದೆ. ಅತ್ತ ಯಾವ ಪಕ್ಷಕ್ಕೆ ಎಷ್ಟು ಸೀಟು ಬರಲಿದೆ? ಎಂಬ ಚರ್ಚೆ ನಡೆಯುತ್ತಿದ್ದರೇ, ಇತ್ತ ಬೆಟ್ಟಿಂಗ್ ಕೂಡ ಜೋರಾಗಿಯೇ ನಡೆಯುತ್ತಿದೆ. ಸದ್ಯ ದೇಶಾದ್ಯಂತ ಸಟ್ಟಾ ಬಜಾರ್‌ನಲ್ಲಿನ ಟ್ರೆಂಡ್ ಗಮನಿಸಿದರೆ, ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೇ ಬರಲಿದೆ. ಬಿಜೆಪಿ ನೇತೃತ್ವದ ಎನ್​​​ಡಿಎಗೆ 185-220 ಸ್ಥಾನಗಳನ್ನು ನೀಡಿದ್ದರೆ, ಕಾಂಗ್ರೆಸ್‌ ನೇತೃತ್ವದ ಯುಪಿಎಗೆ 160-180 ಸ್ಥಾನಗಳು ದೊರೆಯಲಿವೆ ಎಂಬುದು ಬುಕ್ಕಿಗಳ ಲೆಕ್ಕಾಚಾರವಾಗಿದೆ.

ಸಟ್ಟಾ ಬಜಾರ್​​​ ಅಂಕಿ ಅಂಶಗಳ ಪ್ರಕಾರ ಸುಮಾರು ಲೋಕಸಭಾ ಚುನಾವಣೆ ಮೇಲೆ 12,000 ಕೋಟಿ ಬೆಟ್ಟಿಂಗ್​​ ಕಟ್ಟಲಾಗಿದೆ. ಒಂದೆಡೆ ಬಿಜೆಪಿಗೆ ರಾಷ್ಟ್ರೀಯತೆ, ಸರ್ಜಿಕಲ್​​ ಸ್ಟ್ರೈಕ್​​, ದೇಶದ ಅಭಿವೃದ್ದಿ ವಿಚಾರದಲ್ಲಿ ಜನ ವೋಟ್​​ ಮಾಡುತ್ತಾರೆ ಎಂದು ಭಾವಿಸಿ ಬೆಟ್ಟಿಂಗ್​​ಗೆ ಮುಂದಾಗಿದ್ದರೇ, ಇನ್ನೊಂದೆಡೆ ಕಾಂಗ್ರೆಸ್ಸಿಗೆ ನ್ಯಾಯ್​​ ಯೋಜನೆ, ರಫೇಲ್​​​ ವಿಚಾರ ಮುನ್ನೆಲೆಗೆ ತಂದಿದ್ದಕ್ಕೆ ಜನ ಮತ ಹಾಕುತ್ತಾರೆ ಎಂದು ಬುಕ್ಕಿಗಳು ಬೆಟ್ಟಿಂಗ್​​​ ಕಟ್ಟುತ್ತಿದ್ದಾರೆ.

ಯಾವುದಾದರೂ ಒಂದು ರಾಷ್ಟ್ರೀಯ ಪಕ್ಷಕ್ಕೆ ಸಂಪೂರ್ಣ ಬಹುಮತ ಸಿಗಲಿದೆ ಎಂದು ಕೆಲವು ಬುಕ್ಕಿಗಳು ಯೋಚಿಸಿದರೇ, ಮಹಾಘಟ್​ಬಂಧನ್​​ ಕಾರಣಕ್ಕೆ ದೇಶದಲ್ಲಿ ಅತಂತ್ರ ಫಲಿತಾಂಶ ಉಂಟಾಗಬಹುದು ಎಂದು ಹೇಳುವ ಬುಕ್ಕಿಗಳಿದ್ದಾರೆ. ಅದೇ ಆಧಾರದ ಮೇಲೆಯೂ ಒಂದಷ್ಟು ಜನ ಬೆಟ್ಟಿಂಗ್​​​ ಕಟ್ಟುತ್ತಿದ್ಧಾರೆ.

ಸದ್ಯ ಸಟ್ಟಾ ಬಜಾರ್​​ನಲ್ಲಿ ಬಿಜೆಪಿ ಪರವಾಗಿಯೇ ಹೆಚ್ಚು ಜನ ಬೆಟ್ಟಿಂಗ್​​ ಕಟ್ಟುತ್ತಿದ್ಧಾರೆ. ಬಜಾರ್​​ನಲ್ಲಿ ಬಿಜೆಪಿ 11 ರೂ, ಕಾಂಗ್ರೆಸ್​​ ನೇತೃತ್ವದ ಯುಪಿಎಗೆ 33 ರೂ ನೀಡಲಾಗುತ್ತಿದೆ. ಬೆಟ್ಟಿಂಗ್​​ ತಜ್ಞರ ಪ್ರಕಾರ ಮಾರ್ಕೆಟ್​​ನಲ್ಲಿ ಬಿಜೆಪಿಗೆ 2 ರೂ ದೊರೆಯುತ್ತಿದೆ. ಕಾಂಗ್ರೆಸ್ಸಿಗೆ ಕೇವಲ 1.5 ರೂ ನೀಡಲಾಗುತ್ತಿದೆ.

ಕೇಂದ್ರ ಚುನಾವಣಾ ಆಯೋಗ ಲೋಕಸಭಾ ಚುನಾವಣೆಗೆ ದಿನಾಂಕ ಘೋಷಿಸುವ ಮುನ್ನ ಬಿಜೆಪಿಗೆ 250 ಸೀಟು ಸಿಗಲಿದೆ ಎಂದು ಹೇಳಲಾಗಿತ್ತು. ಆದರೀಗ, ಸರ್ಜಿಕಲ್​​ ಸ್ಟ್ರೈಕ್​​​ನಿಂದ ಕೇಸರಿ ಪಕ್ಷಕ್ಕೆ ಯಾವುದೇ ಲಾಭವಾಗಿಲ್ಲ. ಹಾಗಾಗಿ ಕಡಿಮೆ ಸೀಟು ಗೆಲ್ಲಬಹುದು ಎನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ. ಹಾಗೆಯೇ ಯುಪಿಎ, ಮಹಾಘಟ್​ಬಂಧನ್​​ ಅಥವಾ ತೃತೀಯ ರಂಗ ಬಹುಷಃ 250 ಸೀಟು ಗೆಲ್ಲಬಹುದು ಎನ್ನಲಾಗುತ್ತಿದೆ.

ಸೂರತ್​​, ಮುಂಬೈ, ಕೋಲ್ಕತ್ತಾ, ದೆಹಲಿಯಲ್ಲಿ ಬುಕ್ಕಿಗಳು ಕಾಂಗ್ರೆಸ್​​ ಮತ್ತು ಬಿಜೆಪಿಗಿಂತ ಹೆಚ್ಚು ಸೀಟು ಮಹಾಘಟ್​​ಬಂಧನ್​​​ ಸ್ವೀಪ್​​ ಮಾಡಲಿದೆ ಎಂದು ಬೆಟ್ಟಿಂಗ್​​ ಆಡುತ್ತಿದ್ಧಾರೆ. ಹಾಗೆಯೇ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್​ ಶಾ ತವರು ಗುಜರಾತ್​​ನಲ್ಲಿ ಮಾತ್ರ ಕೇಸರಿ ಪಕ್ಷಕ್ಕೆ ಕಹಿ ಸುದ್ದಿಯೇ ಸಿಕ್ಕಿದೆ. ಇವರ ಪ್ರಕಾರ ಬಿಜೆಪಿ ಕನಿಷ್ಠ 6 ಕ್ಷೇತ್ರಗಳಲ್ಲಿ ಗುಜರಾತ್​​ನಲ್ಲಿ ಸೋಲಲಿದೆ ಎಂದು ಊಹೆ ಮಾಡಿದ್ದಾರೆ.

ಗುಜರಾತ್​​ನಲ್ಲಿ ಬಿಜೆಪಿ 22, ಕಾಂಗ್ರೆಸ್​​​ 4 ಸೀಟು ಗೆಲ್ಲಲಿದೆ ಎಂದು ದೆಹಲಿ ಸಟ್ಟಾ ಬಜಾರ್ ಹೇಳುತ್ತಿದೆ. ಸೂರತ್​​​ ಮತ್ತು ಮುಂಬೈ ಮಾತ್ರ ಈ ವಿಚಾರದಲ್ಲಿ ಬೇರೆಯದ್ದೇ ಅಭಿಪ್ರಾಯ ಹೊಂದಿದೆ.

​ಪ್ರತೀ ಚುನಾವಣೆಯಲ್ಲಿಯೂ ಇಲ್ಲಿನ ಸಟ್ಟಾ ಮಾರುಕಟ್ಟೆಯಲ್ಲಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತದೆ. ಫೋನ್‌ನಲ್ಲಿ, ವೆಬ್ ಸೈಟ್‌ನಲ್ಲಿ, ಆನ್‌ಲೈನ್ ಮೊಬೈಲ್ ಆ್ಯಪ್‌ಗಳಲ್ಲಿಯೂ ಸಟ್ಟಾ ಬಾಜಿ ನಡೆಯುತ್ತಿರುತ್ತದೆ. ಹೀಗಾಗಿ ಬುಕ್ಕಿಗಳನ್ನು ಮತ್ತು ಪಂಥ ಕಟ್ಟುವವರನ್ನು ಹಿಡಿಯುವುದು ಪೊಲೀಸರಿಗೆ ದೊಡ್ಡ ತಲೆನೋವಿನ ಕೆಲಸ. ಬಹುಶಃ ಈ ಕಾರಣಕ್ಕಾಗಿಯೇ ಇದುವರೆಗೆ ಚುನಾವಣಾ ಬೆಟ್ಟಿಂಗ್ ದಂಧೆಯ ದೊಡ್ಡಮಟ್ಟದ ಯಾವುದೇ ಗ್ಯಾಂಗನ್ನು ಪೊಲೀಸರಿಗೆ ಬಂಧಿಸಲಾಗಿಲ್ಲ.

Comments are closed.