ರಾಷ್ಟ್ರೀಯ

ಗುರು ಆಡ್ವಾಣಿ ಮುಖಕ್ಕೆ 56 ಇಂಚಿನ ‘ಬಾಕ್ಸರ್ ಪ್ರಧಾನಿ’ಯಿಂದ ಮೊದಲ ಪಂಚ್: ರಾಹುಲ್

Pinterest LinkedIn Tumblr
Rahul Gandhi

ಭಿವಾನಿ: ಬಾಕ್ಸರ್​ಗಳ ನಾಡಿನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ನರೇಂದ್ರ ಮೋದಿ ಅವರಿಗೆ ಮಾತಿನ ಪಂಚ್ ಕೊಟ್ಟರು. ನಿರುದ್ಯೋಗದ ವಿರುದ್ಧ ಹೋರಾಡುತ್ತೇನೆಂದು ಅಂಗಳಕ್ಕೆ ಇಳಿದು ತನ್ನ ‘ಕೋಚ್’ ಎಲ್.ಕೆ. ಆಡ್ವಾಣಿಯ ಮುಖಕ್ಕೇ ಮೊದಲ ಪಂಚ್ ಕೊಟ್ಟರೆಂದು ಮೋದಿ ವಿರುದ್ಧ ರಾಹುಲ್ ವ್ಯಂಗ್ಯವಾಡಿದರು. ಯಾರೊಂದಿಗೆ ಹೋರಾಡುತ್ತೇನೆಂದು ಅರಿಯದ ಈ ಬಾಕ್ಸರ್ ಕಳೆದ 5 ವರ್ಷದಲ್ಲಿ ಭಾರತದ ಬಡವರು, ದುರ್ಬಲರು ಮತ್ತು ರೈತರ ಮೇಲೆ ಪ್ರಹಾರ ಮಾಡಿದ್ದಾರೆ ಎಂದು ರಾಹುಲ್ ಅಣಕವಾಡಿದರು.

ಹರಿಯಾಣ ರಾಜ್ಯದ ಭಿವಾನಿಯು ದೇಶದ ಬಾಕ್ಸಿಂಗ್ ರಾಜಧಾನಿ ಎನಿಸಿದೆ. ಇಲ್ಲಿ ವಿಜೇಂದರ್ ಸಿಂಗ್ ಸೇರಿದಂತೆ ಹಲವು ಖ್ಯಾತನಾಮ ಬಾಕ್ಸರ್​ಗಳು ದೇಶದ ಕೀರ್ಪಿಪತಾಕೆ ಹಾರಿಸಿದ್ದಾರೆ. ಇಲ್ಲಿ ಚುನಾವಣಾ ಭಾಷಣ ಮಾಡಿದ ರಾಹುಲ್ ಗಾಂಧಿ ಪಕ್ಕಾ ಬಾಕ್ಸರ್ ಭಾಷೆಯಲ್ಲಿ ಮೋದಿ ಮತ್ತು ಬಿಜೆಪಿಗೆ ಪಂಚಿಂಗ್ ಡೈಲಾಗ್ ಹರಿಸಿದರು. ಆಡ್ವಾಣಿ ಮತ್ತಿತರರ ಹಿರಿಯ ಮುಖಂಡರನ್ನು ಕಡೆಗಣಿಸಿದ ವಿಚಾರವನ್ನೂ ಬಾಕ್ಸಿಂಗ್ ಭಾಷೆಯಲ್ಲಿ ಕುಟುಕಿದರು.

“56 ಇಂಚಿನ ಎದೆ ಇದೆ ಎಂದು ಹೇಳಿಕೊಳ್ಳುವ ಬಾಕ್ಸರ್ ನರೇಂದ್ರ ಮೋದಿ ನಿರುದ್ಯೋಗ, ರೈತರ ಸಮಸ್ಯೆ, ಭ್ರಷ್ಟಾಚರ ಮತ್ತಿತರರ ಸಮಸ್ಯೆಗಳ ವಿರುದ್ಧ ಹೋರಾಡಲು ರಿಂಗ್​ಗೆ ಕಾಲಿಟ್ಟರು. ಕಳೆದ 5 ವರ್ಷದಲ್ಲಿ ಈ ಬಾಕ್ಸರ್ ಭಾರತದ ಬಡವರು, ದುರ್ಬಲ ವರ್ಗದವರು, ರೈತರನ್ನು ಹೊಡೆದಿದ್ದಾರೆ. ಈ ಬಾಕ್ಸರ್​ಗೆ ತಾನು ಯಾರೊಂದಿಗೆ ಹೋರಾಡುತ್ತಿದ್ದೀನೆಂದು ಅರಿವಿಗೆ ಬಂದಿಲ್ಲ” ಎಂದು ರಾಹುಲ್ ಗಾಂಧಿ ಟೀಕಿಸಿದರು.

“ಬಾಕ್ಸಿಂಗ್ ರಿಂಗ್​ನಲ್ಲಿ ನರೇಂದ್ರ ಮೋದಿ ಅವರ ಕೋಚ್ ಆಡ್ವಾಣಿ, ಹಾಗೂ ನಿತಿನ್ ಗಡ್ಕರಿ ಮೊದಲಾದ ಸಹಆಟಗಾರರು ಇದ್ದರು. ಅಂಗಣಕ್ಕೆ ಕಾಲಿಡುತ್ತಲೇ ಮೋದಿ ಮೊದಲ ಪಂಚ್ ಕೊಟ್ಟಿದ್ದು ಆಡ್ವಾಣಿ ಮುಖಕ್ಕೆ. ಅದಾದ ಬಳಿಕ ನೋಟ್ ಬ್ಯಾನ್ ಮತ್ತು ಗಬ್ಬರ್ ಸಿಂಗ್ ಟ್ಯಾಕ್ಸ್ ತಂದು ಸಣ್ಣಪುಟ್ಟ ಅಂಗಡಿ ಮಾಲೀಕರ ವ್ಯವಹಾರ ಮುಗಿಸಿದರು… ಇಷ್ಟಕ್ಕೆ ಸುಮ್ಮನಾಗದ ಬಾಕ್ಸರ್ ಪಿಎಂ ಅವರು ಸಾಲ ಮನ್ನಾ, ಬೆಂಬಲ ಬೆಲೆಯ ನಿರೀಕ್ಷೆಯಲ್ಲಿದ್ದ ರೈತರ ಮೇಲೂ ಪ್ರಹಾರ ನಡೆಸಿದರು” ಎಂದು ಪ್ರಧಾನಿ ಮೇಲೆ ರಾಹುಲ್ ವಾಕ್​ಪ್ರಹಾರ ನಡೆಸಿದರು.

“ಈಗ ಜನರಿಂದ ತಿರಸ್ಕೃತಗೊಂಡ ಬಾಕ್ಸರ್ ಅಂಗಣದಲ್ಲಿ ಮಲಗಿಕೊಂಡೇ ಗಾಳಿಯಲ್ಲಿ ಕೈ ಗುದ್ದುತ್ತಿದ್ಧಾರೆ” ಎಂದು ರಾಹುಲ್ ಗಾಂಧಿ ಹೇಳುವ ಮೂಲಕ ಈ ಬಾರಿ ಮೋದಿಗೆ ಚುನಾವಣೆಯಲ್ಲಿ ಸೋಲಾಗುತ್ತದೆ ಎಂದು ಭವಿಷ್ಯ ನುಡಿದರು.

ಇದರ ಜೊತೆಗೆ ರಾಹುಲ್ ಗಾಂಧಿ ಅವರು ರಫೇಲ್ ಹಗರಣವನ್ನು ಪ್ರಸ್ತಾಪಿಸಿ ಮೋದಿ ಸರಕಾರವನ್ನು ಝಾಡಿಸಿದರು. ಹಾಗೂ ಕಾಂಗ್ರೆಸ್ ಪಕ್ಷದ ಟ್ರಂಪ್ ಕಾರ್ಡ್ ಆದ ನ್ಯಾಯ್ ಯೋಜನೆಯ ಲಾಭಗಳ ಬಗ್ಗೆ ಜನರಿಗೆ ತಿಳಿಸಿಕೊಡುವ ಪ್ರಯತ್ನ ಮಾಡಿದರು. ಹಾಗೆಯೇ, ಮೋದಿಯಂತೆ ಮನ್ ಕೀ ಬಾತ್ ಹೇಳಲು ತಾನು ಬಂದಿಲ್ಲ. ಜನರ ಮನ್ ಕೀ ಬಾತ್ ಕೇಳಲು ಬಂದಿರುವುದಾಗಿ ರಾಹುಲ್ ಡೈಲಾಗ್ ಹೊಡೆದರು.‘

Comments are closed.