ರಾಷ್ಟ್ರೀಯ

ಕಾಂಗ್ರೆಸ್ ಸೇರಿದರೂ ಶತ್ರುಘ್ನ ಸಿನ್ಹ ಆರೆಸ್ಸೆಸ್ ಬುದ್ಧಿ ಬಿಟ್ಟಿಲ್ಲ: ಕಾಂಗ್ರೆಸ್ ಅಭ್ಯರ್ಥಿ

Pinterest LinkedIn Tumblr


ಲಕ್ನೋ: ಬಿಜೆಪಿಯಲ್ಲಿದ್ದಾಗ ಸರಕಾರದ ವಿರುದ್ಧ ಟೀಕೆಗಳನ್ನು ಮಾಡುತ್ತಾ ಸದಾ ಸುದ್ದಿಯಲ್ಲಿರುತ್ತಿದ್ದ ಶತ್ರುಘ್ನ ಸಿನ್ಹಾ ಈಗ ಕಾಂಗ್ರೆಸ್ ಪಕ್ಷ ಸೇರಿದರೂ ವಿವಾದಗಳಿಂದ ದೂರವಿಲ್ಲ. ಅವರು ಬಿಹಾರದ ಪಾಟ್ನಾ ಸಾಹಿಬ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದರೆ, ಅವರ ಪತ್ನಿ ಪೂನಂ ಸಿನ್ಹಾ ಅವರು ಉತ್ತರ ಪ್ರದೇಶದ ಲಕ್ನೋ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್ಸಿಗರಾದರೂ ಅವರು ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿರುವ ತಮ್ಮ ಪತ್ನಿಯ ಪರವಾಗಿ ಅವರು ಪ್ರಚಾರ ಮಾಡುತ್ತಿರುವುದು ಟೀಕೆಗೆ ಗುರಿಯಾಗಿದೆ. ರಾಜಕೀಯ ಬೇರೆ, ವೈಯಕ್ತಿಕ ವಿಚಾರ ಬೇರೆ. ತಾನು ರಾಜಕೀಯ ನಾಯಕನಾಗಿಯಲ್ಲ, ಒಬ್ಬ ಪತಿಯಾಗಿ ಪೂನಂ ಸಿನ್ಹಾ ಪರವಾಗಿ ಪ್ರಚಾರ ಮಾಡುತ್ತಿರುವುದರಲ್ಲಿ ತಪ್ಪೇನು ಎಂಬುದು ನಟ ಶತ್ರುಘ್ನ ಅವರ ಪ್ರಶ್ನೆ.

ಆದರೆ, ಇದೀಗ ಲಕ್ನೋ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಆಚಾರ್ಯ ಪ್ರಮೋದ್ ಅವರು ಶತ್ರುಘ್ನ ವಿರುದ್ಧ ತಿರುಗಿಬಿದ್ದಿದ್ದಾರೆ. ಶತ್ರುಘ್ನ ಅವರು ಬಿಜೆಪಿ ತೊರೆದರೂ ಆರೆಸ್ಸೆಸ್ ಮಾನಸಿಕತೆಯಿಂದ ಹೊರಬಂದಿಲ್ಲ ಎಂದು ಅವರು ಗುಡುಗಿದ್ದಾರೆ.

“ಶತ್ರುಘ್ನ ಸಿನ್ಹ ಅವರು ಕಾಂಗ್ರೆಸ್ ಪಕ್ಷವನ್ನು ಸೇರಿದ್ದರೂ ಆರೆಸ್ಸೆಸ್​ನಿಂದ ಇನ್ನೂ ನಿವೃತ್ತರಾಗಿಲ್ಲ ಎಂಬುದು ಅವರ ನಡವಳಿಕೆಯಿಂದ ಗೊತ್ತಾಗುತ್ತದೆ” ಎಂದು ಆಚಾರ್ಯ ಪ್ರಮೋದ್ ಟೀಕಿಸಿದ್ದಾರೆ.

ಲಕ್ನೋ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದ್ದು, ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ಸ್ಪರ್ಧಿಸಿದ್ದಾರೆ. ಇಲ್ಲಿ ಎಸ್​ಪಿ-ಬಿಎಸ್​ಪಿ-ಆರ್​ಎಲ್​ಡಿ ಮಹಾಘಟಬಂಧನ್ ಅಭ್ಯರ್ಥಿಯಾಗಿ ಪೂನಂ ಸಿನ್ಹ ಅವರು ಬಿಜೆಪಿಯ ಭದ್ರಕೋಟೆ ಭೇದಿಸಲು ಸಜ್ಜಾಗಿದ್ಧಾರೆ. ಕಾಂಗ್ರೆಸ್ ಪಕ್ಷದ ಸ್ಪರ್ಧೆಯೊಂದಿಗೆ ಇಲ್ಲಿ ತ್ರಿಕೋನ ಹಣಾಹಣಿ ನಡೆಯುತ್ತಿದೆ. ಐದನೇ ಹಂತದ ಚುನಾವಣೆ ಇರುವ ಮೇ 6ರಂದು ಈ ಕ್ಷೇತ್ರದಲ್ಲಿ ಮತದಾನವಾಗಲಿದೆ.

Comments are closed.