ರಾಷ್ಟ್ರೀಯ

ಶೋಪಿಯಾನ್ ನಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಹಿಜ್ಬುಲ್ ಕಮಾಂಡರ್ ಲತೀಫ್ ಟೈಗರ್ ಸೇರಿ 3 ಉಗ್ರರು ಹತ

Pinterest LinkedIn Tumblr

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಬಾಲ ಬಿಚ್ಚಲು ಯತ್ನಿಸಿದ ಉಗ್ರಗಾಮಿಗಳನ್ನು ಭಾರತೀಯ ಸೇನೆ ಹೆಡೆಮುರಿ ಕಟ್ಟಿದ್ದು, ಗುರುವಾರ ಶೋಪಿಯಾನ್ ನಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಹಿಜ್ಬುಲ್ ಕಮಾಂಡರ್ ಲತೀಫ್ ಟೈಗರ್ ಸಹಿತ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ.

ಶೋಪಿಯಾನ್ ನ ಇಮಾಮ್ ಸಾಹಿಬ್ ಗ್ರಾಮದಲ್ಲಿ ಉಗ್ರರು ಅಡಗಿರುವ ಕುರಿತು ಖಚಿತ ಮಾಹಿತಿ ಪಡೆದ ಸೇನಾಪಡೆಗಳು ಕೂಡಲೇ ಸ್ಥಳವನ್ನು ಸುತ್ತುವರೆದವು. ಈ ವೇಳೆ ಮನೆಯೊಂದರಲ್ಲಿ ಅಡಗಿಕುಳಿತ್ತಿದ್ದ ಉಗ್ರರು ಏಕಾಏಕಿ ಗುಂಡಿನ ಸುರಿಮಳೆ ಗರೆದರು. ಇದೇ ಸಂದರ್ಭದಲ್ಲಿ ಸೇನೆ ನಡೆಸಿದ ಪ್ರತಿದಾಳಿಯಲ್ಲಿ ಮೂವರು ಉಗ್ರಗಾಮಿಗಳು ಹತರಾಗಿದ್ದಾರೆ. ಮೃತ ಉಗ್ರರಲ್ಲಿ ಓರ್ವ ಉಗ್ರ ಹಿಜ್ಬುಲ್ ಕಮಾಂಡರ್ ಲತೀಫ್ ಟೈಗರ್ ಎಂದು ಗುರುತಿಸಲಾಗಿದ್ದು, ಈತ ಉಗ್ರ ಬುರ್ಹಾನ್ ವಾನಿ ಆಪ್ತ. ಮತ್ತು ಈತ ಆವಂತಿಪೋರ ನಿವಾಸಿ ಎಂದು ತಿಳಿದುಬಂದಿದೆ. ಇನ್ನು ಇಬ್ಬರು ಉಗ್ರ ಕುರಿತು ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದೆ.

ಇನ್ನು ಬುರ್ಹಾನ್ ವಾನಿ ಹತ್ಯೆ ಬಳಿಕ ಸೃಷ್ಟಿಯಾಗಿದ್ದ 12 ಸದಸ್ಯರ ಬುರ್ಹಾನ್ ಬ್ರಿಗೇಡ್ ಇದೀಗ ಸಂಪೂರ್ಣ ನಾಶವಾಗಿದ್ದು, ಇಂದು ಹತ್ಯೆಯಾದ ಲತೀಫ್ ಟೈಗರ್ ಸಂಘಟನೆಯ 12 ಸದಸ್ಯನಂತೆ. ಈ ಹಿಂದೆ ಬುರ್ಹಾನ್ ಬ್ರಿಗೇಡ್ ನ 10 ಮಂದಿ ಉಗ್ರರನ್ನು ಸೇನೆ ವಿವಿಧ ಕಾರ್ಯಾಚರಣೆಗಳಲ್ಲಿ ಹೊಡೆದುರುಳಿಸಿತ್ತು. 2016ರಲ್ಲಿ ಉಗ್ರ ತಾರಿಖ್ ಪಂಡಿತ್ ಬಂಧನಕ್ಕೀಡಾಗಿದ್ದ.

ಇಮಾಮ್ ಸಾಹಿಬ್ ಗ್ರಾಮದ ಸುತ್ತಮುತ್ತ ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಲಾಗಿದ್ದು, ಎನ್ ಕೌಂಟರ್ ನಲ್ಲಿ ಓರ್ವ ಯೋಧನಿಗೂ ಕೂಡ ಗಾಯವಾಗಿದೆ ಎಂದು ತಿಳಿದುಬಂದಿದೆ.

Comments are closed.