ರಾಷ್ಟ್ರೀಯ

ಬಹುತೇಕ ಸೈಕ್ಲೋನ್​ಗಳಿಗೆ ಹೆಣ್ಣಿನ ಹೆಸರಿಡುವುದೇಕೆ?

Pinterest LinkedIn Tumblr
Cyclone

ನವದೆಹಲಿ: ದೇಶದಲ್ಲೀಗ ಫನಿ ಸೈಕ್ಲೋನ್​ನದ್ದೇ ಸುದ್ದಿ. ಈ ಚಂಡಮಾರುತ ಒರಿಸ್ಸಾ, ತಮಿಳುನಾಡು, ಕೇರಳದಲ್ಲಿ ಹೆಚ್ಚು ಜೋರಾಗಿ ಅಬ್ಬರಿಸಲು ಸಿದ್ಧವಾಗಿದೆ. ಇಂದು ಒರಿಸ್ಸಾದ ಕರಾವಳಿ ಭಾಗಕ್ಕೆ ಫನಿ ಚಂಡಮಾರುತ ಅಪ್ಪಳಿಸಲಿದೆ. ಈ ವೇಳೆ ಭಾರೀ ಬಿರುಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹಾಗೇ, ಒರಿಸ್ಸಾದ ಕೆಲವು ಜಿಲ್ಲೆಗಳು, ಆಂಧ್ರಪ್ರದೇಶ, ಪಶ್ಚಿಮ ಬಂಗಾಳದ ಭಾಗಗಳಲ್ಲಿ ಹೆಚ್ಚು ಎಚ್ಚರ ವಹಿಸುವಂತೆ ಸೂಚಿಸಲಾಗಿದೆ.

ಕುತೂಹಲಕಾರಿ ಸಂಗತಿಯೇನೆಂದರೆ ಹೀಗೆ ಭಾರತದ ಪೂರ್ವ ಭಾಗಕ್ಕೆ ಅಪ್ಪಳಿಸಲಿರುವ ಈ ಚಂಡಮಾರುತಕ್ಕೆ ಬಾಂಗ್ಲಾದೇಶ ಫನಿ ಎಂದು ಹೆಸರನ್ನಿಟ್ಟಿದೆ. ಚಂಡಮಾರುತಗಳಿಗೆ ಹೆಸರನ್ನಿಡುವ ಸಂಪ್ರದಾಯ ಯುರೋಪ್​ ಮತ್ತು ಅಮೆರಿಕದಲ್ಲಿ ಶುರುವಾಯಿತು. ಈ ಎರಡೂ ದೇಶಗಳ ನಡುವಿನ ಅಟ್ಲಾಂಟಿಕ್ ಸಮುದ್ರ ಮತ್ತು ನ್ಯಾಷನಲ್ ಹರಿಕೇನ್ ಸೆಂಟರ್ ಆಫ್ ಮಿಯಾಮಿ ಚಂಡಮಾರುತಗಳಿಗೆ ಹೆಸರನ್ನಿಡಲಾರಂಭಿಸಿದವು. ಅದಕ್ಕೂ ಮೊದಲು ಚಂಡಮಾರುತ ಎಂಬುದಷ್ಟೇ ಎಲ್ಲದಕ್ಕೂ ಸಾರ್ವತ್ರಿಕ ಹೆಸರಾಗಿತ್ತು.

2017ರ ಆರಂಭದಲ್ಲಿ ಶ್ರೀಲಂಕಾದಲ್ಲಿ ಬೀಸಿದ ಚಂಡಮಾರುತಕ್ಕೆ ಮಾರುತ ಎಂಬ ಹೆಸರಿಡಲಾಗಿತ್ತು. ಅದಾದ ನಂತರ ಥೈಲ್ಯಾಂಡ್​ನ ಕರಾವಳಿ ಭಾಗಕ್ಕೆ ಮೋರ ಎಂಬ ಚಂಡಮಾರುತ ಅಪ್ಪಳಿಸಿತು. 2017ರ ಅಂತ್ಯದೊಳಗೆ ಬಾಂಗ್ಲಾದೇಶದಲ್ಲಿ ಊಕಿ ಎಂಬ ಚಂಡಮಾರುತ ಕಾಣಿಸಿಕೊಂಡಿತು. 2016ರಲ್ಲಿ ಚೆನ್ನೈನಲ್ಲಿ ಭಾರೀ ಪ್ರಮಾಣದ ವಾರ್ದಾ ಎಂಬ ಚಂಡಮಾರುತ ಕಾಣಿಸಿಕೊಂಡಿತ್ತು. ಈ ಚಂಡಮಾರುತಕ್ಕೆ ಪಾಕಿಸ್ತಾನ ಹೆಸರಿಟ್ಟಿದರಿಂದ ಆ ಕಾಲದಲ್ಲಿ ಭಾರೀ ಚರ್ಚೆಗೊಳಗಾಗಿತ್ತು. ವಾರ್ದಾ ಎಂದರೆ ಕೆಂಪು ಗುಲಾಬಿ. ಕಳೆದ ವರ್ಷ ಅಕ್ಟೋಬರ್​ನಲ್ಲಿ ಅಪ್ಪಳಿಸಿದ್ದ ತಿತ್ಲಿ ಚಂಡಮಾರುತಕ್ಕೆ ಕೂಡ ಆ ಹೆಸರಿಟ್ಟಿದ್ದು ಪಾಕಿಸ್ತಾನವೇ.

ಶ್ರೀಲಂಕಾ ಸರ್ಕಾರ ಚಂಡಮಾರುತವೊಂದಕ್ಕೆ ಶ್ರೀಲಂಕಾ ದೇಶದ ರಾಜ ಮಹಾಸೇನನ ಹೆಸರಿಟ್ಟಿದ್ದು ವಿವಾದಕ್ಕೆ ಕಾರಣವಾಗಿತ್ತು. ಮಹಾಸೇನ ರಾಜ ಶಾಂತಿ ಮತ್ತು ಸಮೃದ್ಧಿಯ ಸಂಕೇತವಾಗಿದ್ದ. ಹೀಗಾಗಿ, ಶ್ರೀಲಂಕನ್ನೀಯರು ಚಂಡಮಾರುತಕ್ಕೆ ಆ ರಾಜನ ಹೆಸರಿಟ್ಟಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು.

ಸೂಕ್ಷ್ಮವಾಗಿ ಗಮನಿಸಿದರೆ ಬಹುತೇಕ ಚಂಡಮಾರುತಗಳಿಗೆ ಮಹಿಳೆಯರ ಹೆಸರನ್ನಿಡಲಾಗುತ್ತದೆ. ಇದು ಕೂಡ ವಿವಾದಕ್ಕೆ ಎಡೆಮಾಡಿಕೊಟ್ಟ ಉದಾಹರನೆಗಳು ಸಾಕಷ್ಟಿವೆ. 60ರ ದಶಕದಲ್ಲಿ ಹವಾಮಾನ ಇಲಾಖೆ ಎಲ್ಲ ಚಂಡಮಾರುತಗಳಿಗೂ ಮಹಿಳೆಯರ ಹೆಸರನ್ನಿಡುತ್ತಿತ್ತು. ಇದರಿಂದ ಮಹಿಳಾ ಸಂಘಟನೆಗಳಿಂದ ತೀವ್ರ ವಿರೋಧವನ್ನೂ ಎದುರಿಸಬೇಕಾಯಿತು. ಹೀಗಾಗಿ, ಕ್ರಮೇಣ ಮಹಿಳೆಯರ ಹೆಸರಿನ ಬದಲಾಗಿ ಬೇರೆ ಹೆಸರುಗಳನ್ನಿಡುವ ಸಂಪ್ರದಾಯ ಶುರುವಾಯಿತು. ಆದರೆ, ಇಂದಿಗೂ ಮಹಿಳೆಯರ ಹೆಸರಿರುವ ಚಂಡಮಾರುತಗಳು ಇದ್ದೇ ಇವೆ.

ಅಂದಹಾಗೆ, ಚಂಡಮಾರುತಗಳಿಗೆ ಈ ರೀತಿ ಮಹಿಳೆಯರ ಹೆಸರನ್ನು ಇಡುತ್ತಿದ್ದುದು ಯಾಕೆಂಬುದಕ್ಕೆ ಕೂಡ ಕಾರಣಗಳಿವೆ. ಚಂಡಮಾರುತಗಳ ಅನಿರೀಕ್ಷಿತ ಅಬ್ಬರದ ಕಾರಣಕ್ಕೆ ಈ ರೀತಿ ಮಹಿಳೆಯರ ಹೆಸರನ್ನಿಡಲಾಗುತ್ತಿತ್ತು ಎಂದು ಪತ್ರಿಕೆಯೊಂದು ಪ್ರಕಟಿಸಿತ್ತು. ಯಾವ ಚಂಡಮಾರುತಗಳು ಮಹಿಳೆಯರ ಹೆಸರಿನಲ್ಲಿರುತ್ತವೆಯೋ ಅವು ಬೇರೆ ಸೈಕ್ಲೋನ್​ಗಳಿಗಿಂತ ವಿನಾಶಕಾರಿ ಮತ್ತು ಉಗ್ರರೂಪದ್ದಾಗಿರುತ್ತವೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಇದೀಗ ದೇಶದೆಲ್ಲೆಡೆ ಆತಂಕ ಸೃಷ್ಟಿಸಿರುವ ಫನಿ ಚಂಡಮಾರುತ ಕೂಡ ಮಹಿಳೆಯ ಹೆಸರಿನದ್ದೇ ಆಗಿದೆ ಎಂಬುದು ಗಮನಾರ್ಹ.

Comments are closed.