
ಕೋಲ್ಕತಾ: ಕಳೆದ ವರ್ಷದಂದು ಬಿಜೆಪಿಯವರು ತನ್ನ ಕೊಲೆಗೆ ಸುಪಾರಿ ಕೊಟ್ಟಿದ್ದಾರೆಂದು ಆಪಾದಿಸಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇವತ್ತು ಮತ್ತೆ ಆ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಬಿಜೆಪಿಯವರು ತನ್ನನ್ನು ಯಾವಾಗ ಬೇಕಾದರೂ ಕೊಲೆ ಮಾಡಬಹುದು. ಕೊಲೆ ಮಾಡಿ ಅದನ್ನು ಅಪಘಾತ ಎಂಬಂತೆ ಬಿಂಬಿಸಬಹುದು ಎಂದು ಟಿಎಂಸಿ ಮುಖ್ಯಸ್ಥೆಯೂ ಆದ ಅವರು ಗಂಭೀರ ಆರೋಪ ಮಾಡಿದ್ದಾರೆ.
ಪೂರ್ವ ಮಿಡ್ನಾಪೂರ್ ಕ್ಷೇತ್ರದ ನಿಂಟೋರಿಯಲ್ಲಿ ನಡೆದ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಮಮತಾ ಬ್ಯಾನರ್ಜಿ, “ಅವರು ಯಾವತ್ತು ಬೇಕಾದರೂ ನನ್ನ ಕೊಲೆ ಮಾಡಬಹುದು. ಕೊಲೆ ನಂತರ ಅದು ಅಪಘಾತವೆಂದು ಹೇಳಿಕೊಳ್ಳಬಹುದು. ಇದರಿಂದ ನನಗೆ ಯಾವ ಭಯವೂ ಇಲ್ಲ. ಒಂದು ವೇಳೆ ನನ್ನ ಹತ್ಯೆಯಾದರೆ ನನ್ನ ತಾಯಿ, ತಾಯ್ನೆಲ ಮತ್ತು ನಾಡಿನ ಜನರು ತಿರುಗಿಬೀಳುತ್ತಾರೆ ಎಂದೂ ಎಚ್ಚರಿಕೆ ನೀಡಿದ್ದಾರೆ.
ನರೇಂದ್ರ ಮೋದಿ ಅವರನ್ನು ತಾನು ಕಂಡ ಅತ್ಯಂತ ಅಪಾಯಕಾರಿ ಪ್ರಧಾನಿ ಎಂದು ಮಮತಾ ಟೀಕಿಸಿದ್ದಾರೆ:
“ಮೋದಿಬಾಬು ಮೊಹಮ್ಮದ್ ಬಿನ್ ತುಘಲಕ್ ಅವರ ಅಜ್ಜ. ನನ್ನ ರಾಜಕೀಯ ಜೀವನದಲ್ಲಿ ಕಂಡ ಅತ್ಯಂತ ಅಪಾಯಕಾರಿ ಪ್ರಧಾನಿ ಅವರು. ನಾನು ರಾಜೀವ್ ಗಾಂಧಿ, ಪಿ.ವಿ. ನರಸಿಂಹ ರಾವ್, ಮನಮೋಹನ್ ಸಿಂಗ್ ಅವರನ್ನು ನೋಡಿದ್ದೇನೆ. ಆದರೆ, ಇಂಥ ‘ಭದ್ರಲೋಕ್’(ಸನ್ಮಾನ್ಯ) ಪ್ರಧಾನಿಯನ್ನು ನಾನೆಂದೂ ಕಂಡಿದ್ದಿಲ್ಲ” ಎಂದು ಬಂಗಾಳ ಸಿಎಂ ವ್ಯಗ್ರರಾಗಿದ್ದಾರೆ.
ಮಮತಾ ಅವರು ಮೋದಿ ಅವರನ್ನು ಭದ್ರಲೋಕ್ ಎಂದು ವ್ಯಂಗ್ಯವಾಗಿ ಕುಟುಕಿದ್ದಾರೆ. ಇನ್ನೂ ಮುಂದುವರಿದ ಅವರು ಎನ್ಆರ್ಸಿ ಯೋಜನೆ ಹೆಸರಲ್ಲಿ ತಮ್ಮನ್ನೆಲ್ಲಾ ಹೊರಗೆ ಹಾಕಲು ಬಿಜೆಪಿಯವರು ಚಿತಾವಣಿ ನಡೆಸುತ್ತಿದ್ದು ಆ ಪಕ್ಷಕ್ಕೆ ತಾವ್ಯಾರೂ ಮತ ಹಾಕಬೇಡಿ ಎಂದು ಕರೆ ನೀಡಿದ್ದಾರೆ.
2018ರ ಮೇ 11ರಂದು ಟಿವಿ ವಾಹಿನಿಯೊಂದರ ಸಂದರ್ಶನದ ವೇಳೆಯೂ ಮಮತಾ ಬ್ಯಾನರ್ಜಿ ಅವರು ಕೊಲೆ ಸಾಧ್ಯತೆಯನ್ನು ಶಂಕಿಸಿದ್ದರು. ಒಂದು ವೇಳೆ ತನ್ನ ಕೊಲೆಯಾದರೆ ತನ್ನ ಪಕ್ಷದ ಉತ್ತರಾಧಿಕಾರಿ ಯಾರಾಗಬೇಕೆಂದು ರಾಜಕೀಯ ಮರಣಶಾಹಿ ಬರೆದಿರಿಸಿರುವುದಾಗಿಯೂ ಅವರು ಹೇಳಿದ್ದರು.
“ರಾಜಕೀಯ ಪಕ್ಷವೊಂದು ನನ್ನ ಕೊಲೆಗೆ ಹಣ ಕೊಟ್ಟಿರುವ ಮಾಹಿತಿ ನನಗೆ ಸಿಕ್ಕಿದೆ. ನಾನು ವಾಸಿಸುವ ಕಾಲಿಘಾಟ್ ಪ್ರದೇಶದಲ್ಲಿ ಅವರು ಈಗಾಗಲೇ ಸ್ಥಳ ಪರಿಶೀಲನೆ ಮಾಡಿ ಹೋಗಿದ್ದಾರೆ. ಇದು ಗಂಭೀರ ವಿಚಾರವಾಗಿದ್ದು ಪೊಲೀಸರಿಗೂ ಇದರ ಅರಿವಿದೆ. ಇದರ ಸುಳಿವು ಆಧರಿಸಿ ತನಿಖೆ ನಡೆಸುತ್ತಿರುವ ಪೊಲೀಸರು ನನಗೆ ವಾಸಸ್ಥಳ ಬದಲಿಸುವಂತೆ ಸಲಹೆ ನೀಡಿದ್ದಾರೆ. ಆದರೆ, ನಾನು ಬೇರೆ ಸ್ಥಳಕ್ಕೆ ಹೋಗುವುದಿಲ್ಲ. ಜನರಿಂದ ನನ್ನನ್ನು ದೂರ ಮಾಡಬಯಸುವ ಮಂದಿ ಇದ್ದಾರೆ. ನಾನು ಇಂಥ ಬೆದರಿಕೆಗಳಿಗೆಲ್ಲಾ ಜಗ್ಗುವುದಿಲ್ಲ” ಎಂದು ಪ್ರಾದೇಶಿಕ ಟಿವಿ ವಾಹಿನಿಯ ಸಂದರ್ಶನದಲ್ಲಿ ಮಮತಾ ಬ್ಯಾನರ್ಜಿ ತಿಳಿಸಿದ್ದರು.
ತನ್ನ ನಂತರ ತೃಣಮೂಲ ಪಕ್ಷದಲ್ಲಿ ಯಾರು ನಾಯಕತ್ವ ವಹಿಸುತ್ತಾರೆ ಎಂಬುದನ್ನು ಸ್ಪಷ್ಟಪಡಿಸದ ಮಮತಾ ಬ್ಯಾನರ್ಜಿ, “ನಾಯಕನನ್ನು ನಿರ್ಧರಿಸುವುದು ಬಂಗಾಳದ ಜನರೇ ಹೊರತು ನಾನಲ್ಲ. ನಾಯಕತ್ವದ ನಿರ್ಧಾರ ತೆಗೆದುಕೊಳ್ಳಲು ನಾನ್ಯಾರು?” ಎಂದವರು ಹೇಳಿದ್ದರು.
Comments are closed.