
ಚೆನ್ನೈ: ಫನಿ ಚಂಡಮಾರುತ ಇಂದು ಮತ್ತಷ್ಟು ಬಲಗೊಳ್ಳುವ ಸಾಧ್ಯತೆ ಇದ್ದು ಭಾರೀ ಮಾರುತಗಳು ಬೀಸುವ ಸಾಧ್ಯತೆ ಇದೆ. ಹಾಗಾಗಿ, ತಮಿಳುನಾಡಿನಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಈ ಚಂಡಮಾರುತ ಕೇಂದ್ರೀಕೃತವಾಗಿದೆ. ಚೆನ್ನೈನಿಂದ ಸುಮಾರು 1,000 ಕಿ.ಮೀ ದೂರದಲ್ಲಿ ಈ ಚಂಡಮಾರುತ ಇದೆ. ಮುಂದಿನ 12 ಗಂಟೆಗಳ ಕಾಲ ತಮಿಳುನಾಡಿನಲ್ಲಿ ಭಾರೀ ಬಿರುಗಾಳಿ ಬೀಸುವ ಸಾಧ್ಯತೆ ಇದೆ. ನಂತರ ಈ ಮಾರುತಗಳು ವಾಯುವ್ಯ ದಿಕ್ಕಿಗೆ ಸಾಗಲಿದೆ.
ನಾಳೆ, ಸೋಮವಾರ ಸಂಜೆ ವೇಳೆಗೆ ತಮಿಳುನಾಡು ಹಾಗೂ ಆಂಧ್ರ ಕರಾವಳಿ ತೀರಕ್ಕೆ ಫನಿ ಚಂಡಮಾರುತ ಅಪ್ಪಳಿಸಲಿದೆ. ಹಾಗಾಗಿ, ಮುಂದಿನ 24-36 ಗಂಟೆಗಳ ಕಾಲ ತಮಿಳುನಾಡಿನಲ್ಲಿ ಭಾರೀ ಮಳೆ ಆಗುವ ಸಾಧ್ಯತೆ ಇದೆ. ಇದರ ಪ್ರಭಾವ ಕರ್ನಾಟಕದ ಮೇಲೂ ಆಗಲಿದ್ದು, ಬೆಂಗಳೂರು ಸೇರಿ ಕೆಲವೆಡೆ ಮಳೆ ಆಗುವ ಸಾಧ್ಯತೆ ಇದೆ. ಸದ್ಯ ಬೆಂಗಳೂರು ಸೇರಿ ಅನೇಕ ಕಡೆ ಮೋಡ ಕವಿದ ವಾತಾವರಣ ಸೃಷ್ಟಿಯಾಗಿದೆ.
ಒಂದೊಮ್ಮೆ ಚಂಡಮಾರುತ ಹೆಚ್ಚಿನ ಶಕ್ತಿ ಪಡೆದುಕೊಂಡರೆ ತಮಿಳುನಾಡಿನಲ್ಲಿ ಭಾರೀ ಹಾನಿ ಉಂಟು ಮಾಡಬಹುದು. ಹಾಗಾಗಿ ರಾಜ್ಯಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಅಗತ್ಯವಿರುವ ಮುಂಜಾಗೃತ ಕ್ರಮ ಕೈಗೊಳ್ಳಲಾಗಿದೆ. ಮೀನುಗಾರರಿಗೆ ಸಮುದ್ರಕ್ಕೆ ತೆರಳದಂತೆ ಎಚ್ಚರಿಸಲಾಗಿದೆ. ಭೂಮಿ ಕುಸಿಯುವ ಸಾಧ್ಯತೆಗಳು ಇರುವುದರಿಂದ ರಾತ್ರಿ ವೇಳೆ ಸಂಚಾರ ಬೇಡ ಎಂದು ಇಲಾಖೆ ಎಚ್ಚರಿಸಿದೆ.
Comments are closed.