ರಾಷ್ಟ್ರೀಯ

ಎಂಟು ಸಾವಿರ ಮಂದಿ ಬರೆದ ಪರೀಕ್ಷೆಯಲ್ಲಿ ಒಬ್ಬರೂ ಪಾಸ್ ಆಗಲಿಲ್ಲ !

Pinterest LinkedIn Tumblr

ಪಣಜಿ: ಎಂಟು ಸಾವಿರ ಮಂದಿ ಪರೀಕ್ಷೆ ಬರೆದರು. ಆದರೆ ಒಬ್ಬರೂ ಪಾಸಾಗಲಿಲ್ಲ. ಇದ್ಯಾವುದೋ ಅಕಾಡೆಮಿಕ್ ಪರೀಕ್ಷೆ ಅಂದ್ಕೋಬೇಡಿ. ಇವರೆಲ್ಲಾ ಬರೆದದ್ದು ಸ್ಪರ್ಧಾತ್ಮಕ ಪರೀಕ್ಷೆ. ಗೋವಾ ಸರಕಾರ ಕಳೆದ ವರ್ಷ ಅಕ್ಟೋಬರ್‌ನಲ್ಲಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಅಕೌಂಟೆಂಟ್‍ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿತ್ತು. ಇದಕ್ಕೆ ಸಂಬಂಧಿಸಿದ ಪರೀಕ್ಷೆಯನ್ನು ಈ ವರ್ಷ ಜನವರಿ 7ರಂದು ನಿರ್ವಹಿಸಿತ್ತು. 80 ಹುದ್ದೆಗಳಿಗೆ 8000 ಮಂದಿ ಅರ್ಜಿ ಸಲ್ಲಿಸಿದ್ದರು. ಎಲ್ಲರೂ ಪರೀಕ್ಷೆ ಬರೆದರು. ಆದರೆ ವಿಶೇಷ ಎಂದರೆ ಒಬ್ಬರೂ ಅರ್ಹತೆ ಸಾಧಿಸಿಲ್ಲ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗೋವಾ ಸರಕಾರ ಪದವಿ ಅರ್ಹತೆಯನ್ನು ನಿರ್ಧರಿಸಿತ್ತು. ಇದರಿಂದ ಒಂದೊಂದು ಹುದ್ದೆಗೆ ಸುಮಾರು 100 ಮಂದಿವರೆಗೂ ಸ್ಪರ್ಧಿಸಿದ್ದರು. ನೂರು ಅಂಕಗಳಿಗೆ ನಡೆದ ಪರೀಕ್ಷೆಯಲ್ಲಿ ಶೇ.50ರಷ್ಟು ಅಂಕ ಗಳಿಸಿದವರು ಸಂದರ್ಶನ ಸುತ್ತಿಗೆ ಅರ್ಹರಾಗುವಂತೆ ನಿಗದಿಪಡಿಸಲಾಗಿತ್ತು. ಜನವರಿ 7ರಂದು ನಡೆದ ಈ ಪರೀಕ್ಷೆಯ ಫಲಿತಾಂಶ ಇತ್ತೀಚೆಗೆ ಬಿಡುಗಡೆಯಾಗಿದೆ. ಎಂಟು ಸಾವಿರ ಮಂದಿಯಲ್ಲಿ ಒಬ್ಬರೂ ಅರ್ಹತೆ ಸಾಧಿಸಿಲ್ಲ ಎಂದು ಸಂಬಂಧಿತ ಅಧಿಕಾರಿಗಳು ತಿಳಿಸಿದ್ದಾರೆ.

ಐದು ಗಂಟೆಗಳ ಕಾಲ ನಡೆದ ಪರೀಕ್ಷೆಯಲ್ಲಿ ಇಂಗ್ಲಿಷ್, ಸಾಮಾನ್ಯ ಜ್ಞಾನ, ಅಕೌಂಟ್ಸ್‌ಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗಿತ್ತು. ಇಂಗ್ಲಿಷ್, ಜಿಕೆಯಲ್ಲಿ ಸ್ವಲ್ಪ ಉತ್ತಮ ಅಂಕಗಳನ್ನು ಗಳಿಸಿದ್ದರೂ ಅಕೌಂಟ್ಸ್‌ನಲ್ಲಿ ಮಾತ್ರ ತುಂಬಾ ಕಡಿಮೆ ಅಂಕಗಳನ್ನು ಗಳಿಸಿದ್ದಾರೆ ಎಂದು ಅಧಿಕಾರಿಗಳು ವಿವರ ನೀಡಿದ್ದಾರೆ.

ಈ ಬಗ್ಗೆ ಆಮ್‌ಆದ್ಮಿ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಪಡ್ಗಾಂಕರ್ ಮಾತನಾಡುತ್ತಾ, “ಗೋವಾ ವಿಶ್ವವಿದ್ಯಾಲಯಕ್ಕೆ ಹಾಗೂ ಅದರ ಸಂಬಂಧಿತ ಕಾಲೇಜುಗಳಿಗೆ ಇದು ತುಂಬಾ ಮುಜುಗರಕ್ಕೆ ಈಡು ಮಾಡುವ ಸಂಗತಿ. ಕಳೆದ ಅಕ್ಟೋಬರ್‌ನಲ್ಲಿ ಅಧಿಸೂಚನೆ ನೀಡಿ ಜನವರಿಯಲ್ಲಿ ಪರೀಕ್ಷೆ ನಡೆಸಲಾಯಿತು. ತುಂಬಾ ತಡವಾಗಿದ್ದಕ್ಕೇ ಈ ರೀತಿ ಆಗಿದೆ. ಅದರ ಫಲಿತಾಂಶವನ್ನು ಪ್ರಕಟಿಸಲು ಎಂಟು ತಿಂಗಳು ಬೇಕಾಯಿತು. ಇದೆಲ್ಲಾ ಸರಕಾರದ ನಿರ್ಲಕ್ಷ್ಯಕ್ಕೆ ಕನ್ನಡಿ” ಎಂದು ಆರೋಪಿಸಿದ್ದಾರೆ.

Comments are closed.