ಸಿಂಧಿ: ವಾರಾಣಸಿಯಲ್ಲಿ ನಾಮಪತ್ರ ಸಲ್ಲಿಕೆ ಬಳಿಕ ಮಧ್ಯಪ್ರದೇಶದಲ್ಲಿ ರೋಡ್ ಶೋ ನಡೆಸಿದ ಪ್ರಧಾನಿ ನರೇಂದ್ರ ಮೋದಿ, “ನಾನೇನಾದರೂ ತಪ್ಪು ಮಾಡಿದರೆ, ಐಟಿ ಅಧಿಕಾರಿಗಳು ನನ್ನ ಮನೆ ಮೇಲೂ ದಾಳಿ ಮಾಡಲಿ,” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುವ ಮೂಲಕ ಕೇಂದ್ರ ಸರ್ಕಾರ ಐಟಿ ಬಳಸಿಕೊಂಡು ವಿರೋಧ ಪಕ್ಷಗಳ ನಾಯಕ ಮನೆ ಮೇಲೆ ದಾಳಿ ನಡೆಸುತ್ತಿದೆ ಎಂಬ ವಿರೋಧ ಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ನಾಯಕರ ಮನೆ ಮೇಲೆ ದಾಳಿಗಳು ಆಗುತ್ತಿವೆ ಎಂದು ಅವರು ಏಕೆ ಪ್ರಶ್ನಿಸುತ್ತಾರೆ. ನಾವು ಕಾಂಗ್ರೆಸ್ ನಾಯಕರು, ನಮ್ಮ ಮೇಲೆ ಅಷ್ಟೇ ಏಕೆ ದಾಳಿಗಳು ಆಗುತ್ತವೆ ಎಂದು ಕೇಳುತ್ತಾರೆ. ದೇಶದ ಕಾನೂನು ಎಲ್ಲರಿಗೂ ಒಂದೇ ಸಮಾನ. ಎಲ್ಲರೂ ಕಾನೂನನ್ನು ಪಾಲಿಸಬೇಕು. ಒಂದು ವೇಳೆ ನಾನು ತಪ್ಪು ಮಾಡಿದರೂ, ಆದಾಯ ತೆರಿಗೆ ಇಲಾಖೆ ಮೋದಿ ಮನೆ ಮೇಲೂ ದಾಳಿ ಮಾಡಬೇಕು. ಕಾನೂನಿನ ಮುಂದೆ ಎಲ್ಲರು ಒಂದೇ ಎಂದರು.
ರಾಹುಲ್ ಗಾಂಧಿ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಲು ಮಧ್ಯಪ್ರದೇಶ ಸಿಎಂ ಕಮಲನಾಥ್ ಮನೆಯಲ್ಲಿಟ್ಟಿದ್ದ ಹಣವನ್ನು ವಶಕ್ಕೆ ಪಡೆಯಲಾಗಿದೆ. ತುಘಲಕ್ ರೋಡ್ ಚುನಾವಣಾ ಹಗರಣದ ಹಣವನ್ನು ನಾಮ್ದಾರ್(ರಾಹುಲ್ ಗಾಂಧಿ) ತಮ್ಮ ಚುನಾವಣೆಗೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ದೆಹಲಿಯಿಂದ ಭೂಪಾಲ್ವರೆಗೆ ಭ್ರಷ್ಟಚಾರ ನಡೆಯುತ್ತಿದೆ. ನಿಮ್ಮ ಚೌಕಿದಾರ, ನಾಮ್ದಾರ್ಗಿಂದ ಬುದ್ದಿವಂತ ಹಾಗೂ ನಿಯತ್ತು ಹೊಂದಿದ್ದಾರೆ ಎಂದರು.
ಚುನಾವಣೆಗೆ ಮುನ್ನ ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ನಾಯಕರು ಹಾಗೂ ಆಪ್ತರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದರು. ಈ ದಾಳಿಯನ್ನು ಖಂಡಿಸಿ ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿದಂತೆ ಮೈತ್ರಿ ಸರ್ಕಾರದ ನಾಯಕರು ಐಟಿ ಇಲಾಖೆ ಮುಂದೆ ಪ್ರತಿಭಟನೆ ಮಾಡಿದ್ದರು.