ರಾಷ್ಟ್ರೀಯ

‘ಚೌಕಿದಾರ್​ ಚೋರ್​ ಹೈ’; ನ್ಯಾಯಾಲಯದ ಹೆಸರು ಬಳಕೆ ಮಾಡಿದ್ದಕ್ಕಾಗಿ ಕ್ಷಮೆಯಾಚಿಸಿದ ರಾಹುಲ್​ ಗಾಂಧಿ

Pinterest LinkedIn Tumblr

ನವದೆಹಲಿ: “ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಚೌಕಿದಾರ್​ ಚೋರ್​ ಹೈ’ ಎಂದು ಸುಪ್ರೀಂಕೋರ್ಟೇ ಹೇಳಿದೆ,” ಎನ್ನುವ ಮೂಲಕ ನ್ಯಾಯಾಲಯದ ಹೆಸರು ಬಳಕೆ ಮಾಡಿದ್ದಕ್ಕಾಗಿ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಸರ್ವೋಚ್ಚ ನ್ಯಾಯಾಲಯಕ್ಕೆ ಕ್ಷಮೆಯಾಚಿಸಿದ್ದಾರೆ.

‘ಚೌಕಿದಾರ್​ ಚೋರ್​ ಹೈ’ ಎಂದು ಸುಪ್ರೀಂ ಕೋರ್ಟ್​ ತಿಳಿಸಿದೆ ಎಂದು ಚುನಾವಣಾ ಪ್ರಚಾರದ ವೇಳೆ ಆರೋಪ ಮಾಡಿದ್ದ ರಾಹುಲ್​ ಗಾಂಧಿಗೆ ಸುಪ್ರೀಂ ಕೋರ್ಟ್​ ವಿವರಣೆ ಕೇಳಿತ್ತು. ಈ ಸಂಬಂಧ ಇಂದು ನ್ಯಾಯಾಲಯದ ಮುಂದೆ ಹಾಜರಾದ ರಾಹುಲ್​ ಗಾಂಧಿ, ‘ಈ ರೀತಿ ಪದ ಬಳಕೆ ಮಾಡಬಾರದಾಗಿತ್ತು. ನ್ಯಾಯಾಲಯ ಈ ರೀತಿ ಎಲ್ಲಿಯೂ ಹೇಳಿಲ್ಲ. ಚುನಾವಣಾ ಕಾವಿನ ಬಿಸಿಯಲ್ಲಿ ಭಾಷಣ ಮಾಡುವಾಗ ಈ ಪ್ರಮಾದ ಆಗಿದೆ ಎಂದು ಅವರು ತಿಳಿಸಿದ್ದಾರೆ. ಇದೇ ವೇಳೆ ನನ್ನ ಹೇಳಿಕೆಯನ್ನು ವಿಪಕ್ಷಗಳು ತಪ್ಪಾಗಿ ಅರ್ಥೈಸಿ ಬಳಕೆ ಮಾಡಿದೆ’ ಎಂದೂ ಅವರು ಆರೋಪಿಸಿದ್ದಾರೆ.

ರಾಹುಲ್​ ಗಾಂಧಿ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸುವಾಗ ದೇಶದ ಸರ್ವೋಚ್ಚ ನ್ಯಾಯಾಲಯದ ಮೇಲೂ ಆರೋಪ ಮಾಡುತ್ತಿದ್ದಾರೆ ಎಂದು ಮಧ್ಯ ಪ್ರದೇಶ ಸಂಸದೆ ಮೀನಾಕ್ಷಿ ಲೇಖಿ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದ್ದರು. ಈ ಅರ್ಜಿ ಅನ್ವಯ ದೂರು ದಾಖಲಿಸಿಕೊಂಡಿದ್ದ ನ್ಯಾಯಾಲಯ ಈ ಕುರಿತು ವಿವರಣೆ ನೀಡುವಂತೆ ರಾಹುಲ್​ ಗಾಂಧಿಗೆ ಸೂಚನೆ ನೀಡಿತು.

ಏ.10 ರಂದು ರಫೇಲ್ ಒಪ್ಪಂದದ ಕುರಿತ ತೀರ್ಪು ಮರುಪರಿಶೀಲನೆ ಅರ್ಜಿಯನ್ನು ಕೈಗೆತ್ತಿಕೊಂಡಿದ್ದ ಸುಪ್ರೀಂ ಕೇಂದ್ರ ಸರಕಾರದ ಆಕ್ಷೇಪವನ್ನು ವಜಾಗೊಳಿಸಿ ಅರ್ಜಿ ಮರುಪರಿಶೀಲನೆಗೆ ಆದೇಶಿಸಿತ್ತು. ಈ ಬಗ್ಗೆ ಉತ್ತರ ಪ್ರದೇಶದ ಆಮೇಥಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಭಾಷಣ ಮಾಡಿದ ರಾಹುಲ್​ ಗಾಂಧಿ, “ಚೌಕಿದಾರ್ ಚೋರ್ ಹೈ” ಎಂದು ಸ್ವತಃ ಸುಪ್ರೀಂ ಒಪ್ಪಿಕೊಂಡಿದೆ. ಸುಪ್ರೀಂಕೋರ್ಟ್​ ನ್ಯಾಯದ ಬಗ್ಗೆ ಇಂದು ಮಾತನಾಡಿದೆ. ಈ ದಿನ ನಾವು ಸಂತಸ ಪಡಬೇಕು ಎಂದಿದ್ದರು.

ರಾಹುಲ್​ ಗಾಂಧಿಯ ಈ ಮಾತುಗಳನ್ನು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಂಡ ಬಿಜೆಪಿ ಈ ಕುರಿತು ಸುಪ್ರೀಂ ಕೋರ್ಟ್​ ಮೆಟ್ಟಿಲೇರಿತ್ತು.

Comments are closed.