ರಾಷ್ಟ್ರೀಯ

ಶ್ರೀಲಂಕಾ: 8ನೇ ಬಾಂಬ್​​ ಸ್ಪೋಟ; ಸಾವಿನ ಸಂಖ್ಯೆ 200ಕ್ಕೆ ಏರಿಕೆ!

Pinterest LinkedIn Tumblr


ನವದೆಹಲಿ: ಶ್ರೀಲಂಕಾ ಕೊಲಂಬೋದಲ್ಲಿ 8ನೇ ಬಾಂಬ್ ಸ್ಫೋಟವಾಗಿದೆ. ಇಲ್ಲಿಯವರೆಗೂ ಸುಮಾರು 8 ಕಡೆ ಬಾಂಬ್ ಸ್ಫೋಟ ಸಂಭವಿಸಿದ್ದು, ಸಾವಿನ ಪ್ರಮಾಣ 207 ಮುಟ್ಟಿದೆ. ಹಾಗಾಗಿ ಶ್ರೀಲಂಕಾ ಸರ್ಕಾರ ದೇಶಾದ್ಯಂತ ಕರ್ಫ್ಯೂ ಜಾರಿಗೊಳಿಸಿ ಆದೇಶ ಹೊರಡಿಸಿದೆ. ಸಂಜೆ 6 ರಿಂದ ನಾಳೆ ಬೆಳಗ್ಗೆ 6 ಗಂಟೆವರೆಗೆ ಕರ್ಫ್ಯೂ ಜಾರಿಯಲ್ಲಿದ್ದು, ಸದ್ಯ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಇಂದು ಭಾನುವಾರ ಬೆಳಗ್ಗೆ 8:45ರ ಸುಮಾರಿಗೆ ಶ್ರೀಲಂಕಾ ರಾಜಧಾನಿ ಕೊಲಂಬೋದಲ್ಲಿ 6 ಬಾಂಬುಗಳು ಸ್ಪೋಟಗೊಂಡವು. ಕೆಲ ಹೊತ್ತಿನ ಬಳಿಕ ಮತ್ತೆರಡು ಬಾಂಬ್ ಸ್ಫೋಟಗೊಂಡವೆನ್ನಲಾಗಿದೆ. ಈಸ್ಟರ್ ದಿನ ಪ್ರಾರ್ಥನೆ ನಡೆಯುತ್ತಿರುವಾಗ ಚರ್ಚ್‌ನಲ್ಲಿ ಮೊದಲು ಬಾಂಬ್ ಸ್ಫೋಟವಾಯಿತು. ಒಟ್ಟು ಮೂರು ಚರ್ಚ್​ಗಳು ಹಾಗೂ ಮೂರು ಹೈಟೆಕ್ ಹೋಟೆಲ್​ಗಳಲ್ಲಿ ಸ್ಫೋಟಗಳು ಸಂಭವಿಸಿವೆ. ಈ ಉಗ್ರ ಕೃತ್ಯದಲ್ಲಿ 400ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಸಾವಿನ ಪ್ರಮಾಣ ಸಾಕಷ್ಟು ಏರುವ ಭೀತಿ ಇದೆ.

ಶಾಂಗ್ರಿಲಾ ಹೋಟೆಲ್​ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕಾಸರಗೋಡಿನ ನಿವಾಸಿ 58 ವರ್ಷದ ಪಿ.ಎಸ್. ರಸೀನಾ ಅವರು ಸಾವನ್ನಪ್ಪಿರುವುದು ತಿಳಿದುಬಂದಿದೆ. ಕೇರಳದ ಸಿಎಂ ಕಚೇರಿ ಕೂಡ ಈ ವಿಚಾರವನ್ನು ಖಚಿತಪಡಿಸಿದೆ ಎಂದು ನ್ಯೂಸ್18 ಮಲಯಾಳಂ ವಾಹಿನಿ ವರದಿ ಮಾಡಿದೆ.

ಸರಣಿ ಬಾಂಬ್ ಸ್ಫೋಟದಿಂದಾಗಿ ಸಾವಿನ ಸಂಖ್ಯೆ ಸತತವಾಗಿ ಏರುತ್ತಲೇ ಇದೆ. ಇಲ್ಲಿ ನಡೆದ ಸರಣಿ ಬಾಂಬ್ ಸ್ಫೋಟವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಸಹ ಖಂಡಿಸಿದ್ದಾರೆ. ಅಲ್ಲದೇ ನಮ್ಮ ದೇಶದಲ್ಲಿ ಇಂತಹ ಘಟನೆಗೆ ಯಾವುದೇ ಅವಕಾಶವಿಲ್ಲ ಎಂದು ಹೇಳಿದ್ಧಾರೆ.

ಈಸ್ಟರ್ ಪ್ರಾರ್ಥನೆಯಲ್ಲಿ ತೊಡಗಿದ್ದವರಿಗೆ ಇಂದು ಬೆಳಗ್ಗೆಯೇ ಆಘಾತ ಎದುರಾಗಿದೆ. ಇಲ್ಲಿನ ಚರ್ಚ್, ಹೋಟೆಲ್ ಗಳಲ್ಲಿ ಸರಣಿ ಬಾಂಬ್ ಸ್ಫೋಟವಾಗಿದ್ದು, ನೂರಾರು ಜನ ಸಾವನ್ನಪ್ಪಿದ್ದಾರೆ. ಈ ದಾಳಿಯ ಹಿಂದೆ ಉಗ್ರರ ಕೈವಾಡವಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ಮೃತ ಕುಟುಂಬಸ್ಥರ ಆಕ್ರಂದನ ಮನಮುಟ್ಟಿದೆ.

ಮತ್ತೊಂದೆಡೆ ಅಲ್ಲಿನ ಶಾಂಗ್ರಿಲಾ ಹೋಟೆಲ್ ಹಾಗೂ ಕಿಂಗ್ಸ್ ಬರಿ ಹೋಟೆಲ್ ನಲ್ಲಿ ಸ್ಫೋಟವಾಗಿವೆ. ಕೊಲಂಬೋ ಕೊಚಿಕಡೆಯ ಸೈಂಟ್ ಅಂಥೋನಿ ಚರ್ಚ್ ನಲ್ಲಿ ಸ್ಫೋಟ ಸಂಭವಿಸಿದ ದೃಶ್ಯಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೆಯಾಗುತ್ತಿವೆ. ಸ್ಫೋಟಗೊಂಡ ಸ್ಥಳದಿಂದ ನೆರವಿಗಾಗಿ ಕೋರಲಾಗಿದೆ ಎಂದು ತಿಳಿಸಲಾಗಿದೆ

Comments are closed.