ರಾಷ್ಟ್ರೀಯ

ಕೋರ್ಟ್​ ಕಟಕಟೆ ಏರಿದ ಗೋಮಾತೆ: ವಿಚಿತ್ರ ಸನ್ನಿವೇಶಕ್ಕೆ ಸಾಕ್ಷಿಯಾದ ರಾಜಸ್ಥಾನದ ಜೋಧ್​ಪುರ ನ್ಯಾಯಾಲಯ

Pinterest LinkedIn Tumblr


ಜೋಧ್​ಪುರ: ರಾಜಸ್ಥಾನದ ಜೋಧ್​ಪುರ ನ್ಯಾಯಾಲಯ ಶನಿವಾರ ವಿಚಿತ್ರವಾದ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಯಾವುದೇ ಅಪರಾಧ ಪ್ರಕರಣದಲ್ಲಿ ಕೇವಲ ಮನುಷ್ಯರನ್ನು ಮಾತ್ರ ಕೋರ್ಟ್​ಗೆ ಹಾಜರುಪಡಿಸಲಾಗುತ್ತಿತ್ತು. ಆದರೆ, ಶನಿವಾರ ಹಸುವೊಂದನ್ನು ಹಾಜರುಪಡಿಸಿ, ಅದನ್ನು ನ್ಯಾಯಾಂಗದ ವಶದಲ್ಲೇ ಇರಿಸಿಕೊಳ್ಳಲಾಯಿತು!

ಇದು ಯಾವುದೋ ಒಂದು ಚಲನಚಿತ್ರದ ಕಥೆಯಂತೆ ಕಾಣಿಸಬಹುದು. ಆದರೆ, ಇದು ನಿಜ. ಹಸುವೊಂದರ ಮಾಲೀಕತ್ವದ ಬಗ್ಗೆ ಇಬ್ಬರ ನಡುವೆ ಭಾರಿ ವಿವಾದ ಏರ್ಪಟ್ಟಿತ್ತು. ಈ ಹಸುವಿಗಾಗಿ ಅವರಿಬ್ಬರೂ ಪರಸ್ಪರ ಬಡಿದಾಡಿಕೊಳ್ಳುತ್ತಿದ್ದರು. ಪೈಪೋಟಿ ಮೇರೆಗೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸುತ್ತಿದ್ದರು.

ಹಾಗೆ ದೂರು ದಾಖಲಿಸಿಕೊಳ್ಳುತ್ತಿದ್ದ ಪೊಲೀಸರು ಇಬ್ಬರನ್ನೂ ಸಮಾಧಾನಪಡಿಸಿ, ವಾಪಸು ಕಳುಹಿಸುತ್ತಿದ್ದರು. ಆದರೆ, ಕೆಲದಿನಗಳ ಹಿಂದೆ ಇವರಿಬ್ಬರೂ ಮತ್ತೆ ಜಗಳ ಮಾಡಿಕೊಂಡು ಪರಸ್ಪರರ ವಿರುದ್ಧ ದೂರು ದಾಖಲಿಸಿದ್ದರಿಂದ ಬೇಸತ್ತ ಪೊಲೀಸರು, ಪ್ರಕರಣವನ್ನು ಕೋರ್ಟ್​ ಮೂಲಕವೇ ಬಗೆಹರಿಸಿಕೊಳ್ಳಲಿ ಎಂದು ಹೇಳಿ ಎಫ್​ಐಆರ್​ ದಾಖಲಿಸಿ, ಕೋರ್ಟ್​ ವಿಚಾರಣೆಗೆ ಒಪ್ಪಿಸಿದರು.

ಇದೀಗ ವಿಚಾರಣೆ ಆರಂಭಿಸಿರುವ ಜೋಧ್​ಪುರದ ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶರು, ವಿವಾದಕ್ಕೆ ಕಾರಣವಾದ ಹಸುವನ್ನು ಕೋರ್ಟ್​ಗೆ ಹಾಜರುಪಡಿಸುವಂತೆ ಸೂಚಿಸಿದರು. ಅದರಂತೆ ಪೊಲೀಸರು ಹಸುವನ್ನು ಕೋರ್ಟ್​ಗೆ ಹಾಜರುಪಡಿಸಿದರು. ಅದರ ದೈಹಿಕ ಚಹರೆಯನ್ನು ಗುರುತು ಹಾಕಿಕೊಂಡ ನ್ಯಾಯಾಧೀಶರು, ವಿವಾದ ಇತ್ಯರ್ಥವಾಗುವವರೆಗೂ ಹಸುವನ್ನು ನ್ಯಾಯಾಂಗ​ ವಶದಲ್ಲೇ ಇರಿಸಿಕೊಳ್ಳಲು ಆದೇಶಿಸಿದ್ದಾರೆ. ಏ.15ಕ್ಕೆ ಮುಂದಿನ ವಿಚಾರಣೆ ನಿಗದಿಯಾಗಿದೆ.

Comments are closed.