ರಾಷ್ಟ್ರೀಯ

ಒಂದಷ್ಟು ಹಿಂಸಾಚಾರ, ಮತಯಂತ್ರ ದೋಷ, ಮೊದಲ ಹಂತದ ಮತದಾನ ಮುಕ್ತಾಯ

Pinterest LinkedIn Tumblr


ನವದೆಹಲಿ: ಏಳು ಹಂತಗಳ ಲೋಕಸಭೆ ಚುನಾವಣೆಯಲ್ಲಿ ಇವತ್ತು ಮೊದಲ ಹಂತದ ಮತದಾನ ಮುಕ್ತಾಯವಾಗಿದೆ. 20 ರಾಜ್ಯಗಳ 91 ಲೋಕಸಭಾ ಕ್ಷೇತ್ರಗಳಲ್ಲಿ ಇವತ್ತು ಮತದಾನ ಆಗಿದೆ. ಹಾಗೂ ಆಂಧ್ರ ಸೇರಿದಂತೆ 4 ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳೂ ಇವತ್ತೇ ನಡೆದಿವೆ. ಕೆಲ ಹಿಂಸಾಚಾರಗಳನ್ನ ಹೊರತುಪಡಿಸಿ ಮತದಾನ ಬಹುತೇಕ ಶಾಂತಿಯುತವಾಗಿತ್ತೆಂದು ಚುನಾವಣಾ ಆಯೋಗ ಹೇಳಿದೆ. ಇವತ್ತು ಒಟ್ಟು ಸರಾಸರಿ 60-65% ಮತದಾನ ಆಗಿರುವ ಅಂದಾಜು ಇದೆ. ಮತದಾನದ ವಿವರ ನಾಳೆ ಬೆಳಗ್ಗೆಗೆ ಸ್ಪಷ್ಟವಾಗಬಹುದು.

ಬಹಳ ಸೂಕ್ಷ್ಮವೆಂದು ಪರಿಗಣಿಸಲಾಗಿದ್ದ ಜಮ್ಮು-ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಅಧಿಕ ಮತದಾನವಾಗಿದೆ. ಛತ್ತೀಸ್​ಗಡ, ಮಹಾರಾಷ್ಟ್ರ ಹಾಗೂ ಆಂಧ್ರದ ನಕ್ಸಲ್ ಪೀಡಿತ ಪ್ರದೇಶಗಳಲ್ಲೂ ಹೆಚ್ಚು ಮತದಾನ ಆಗಿರುವುದು ಗಮನಾರ್ಹವಾಗಿದೆ. ಆಂಧ್ರ ಪ್ರದೇಶದಲ್ಲಿ ಕೆಲವೆಡೆ ಹಿಂಸಾಚಾರ ನಡೆದು ಇಬ್ಬರು ವ್ಯಕ್ತಿಗಳು ಹತ್ಯೆಯಾಗಿದ್ದಾರೆ. ಉಳಿದಂತೆ ಆಂಧ್ರದಲ್ಲಿ ಒಂದಷ್ಟು ಇವಿಎಂ ದೋಷದ ಪ್ರಕರಣಗಳು ಬಿಟ್ಟು ಉಳಿದಂತೆ ಮತದಾನ ಶಾಂತಿಯುತವಾಗಿ ನಡೆದಿದೆ.

ಸಂಜೆ 6ಗಂಟೆಗೆ ಬಂದ ಮಾಹಿತಿ ಪ್ರಕಾರ ಶೇಕಡಾವಾರು ಮತದಾನದ ವಿವರ:

ಉತ್ತರ ಪ್ರದೇಶ: 63.69
ಉತ್ತರಾಖಂಡ್: 57.85
ಛತ್ತೀಸ್​ಗಡ: 67

ಬಿಹಾರ: 50
ಮಹಾರಾಷ್ಟ್ರ: 56
ಪಶ್ಚಿಮ ಬಂಗಾಳ: 81
ಆಂಧ್ರ ಪ್ರದೇಶ: 73
ಒಡಿಶಾ: 68
ಜಮ್ಮು ಕಾಶ್ಮೀರ: 55
ಅರುಣಾಚಲ: 66
ಮೇಘಾಲಯ: 67.16
ಮಣಿಪುರ: 80.1
ಅಸ್ಸಾಮ್: 67.4
ತೆಲಂಗಾಣ: 63
ನಾಗಾಲೆಂಡ್: 78
ಸಿಕ್ಕಿಮ್: 75
ಮಿಜೋರಾಮ್: 62.59
ತ್ರಿಪುರಾ: 81.23
ಅಂಡಮಾನ್ ನಿಕೋಬಾರ್: 70.67
ಲಕ್ಷದ್ವೀಪ: 66

ಈ ಮೇಲಿನ ಮತದಾನದ ಪ್ರಮಾಣವನ್ನು ಸಂಜೆ 4-6ರ ಅವಧಿಯಲ್ಲಿ ಬಂದ ಮಾಹಿತಿಯನ್ನ ಆಧರಿಸಿ ನೀಡಲಾಗಿದೆ. ಚುನಾವಣಾ ಆಯೋಗದಿಂದ ಇನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ. ಮತದಾನದ ಪ್ರಮಾಣ ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ.

ಆಂಧ್ರದಲ್ಲಿ ಹಿಂಸಾಚಾರ:

ವಿಧಾನಸಭೆ ಮತ್ತು ಲೋಕಸಭೆ ಎರಡೂ ಚುನಾವಣೆಯನ್ನ ಕಂಡ ಆಂಧ್ರ ಪ್ರದೇಶದಲ್ಲಿ ಕೆಲ ಕಡೆ ಹಿಂಸಾಚಾರಗಳಾಗಿ ಇಬ್ಬರು ಸಾವನ್ನಪ್ಪಿದರು. ಅನಂತಪುರಂ ಜಿಲ್ಲೆಯ ತಾಡಪತ್ರಿ ವಿಧಾನಸಭಾ ಕ್ಷೇತ್ರದ ವೀರಪುರಮ್ ಗ್ರಾಮದಲ್ಲಿ ನಡೆದ ಘರ್ಷಣೆಯಲ್ಲಿ ಟಿಡಿಪಿಯ ಒಬ್ಬ ಕಾರ್ಯಕರ್ತ ಹಾಗೂ ವೈಎಸ್ಸಾರ್ ಕಾಂಗ್ರೆಸ್ ಪಕ್ಷದ ಒಬ್ಬ ಕಾರ್ಯಕರ್ತ ಮೃತಪಟ್ಟರು. ಹಿಂಸಾಚಾರಕ್ಕೆ ವೈಎಸ್ಸಾರ್ ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಆರೋಪಿಸಿದರು. ಮತಯಂತ್ರ ಕಸಿದುಕೊಳ್ಳಲು ಟಿಡಿಪಿ ಯತ್ನಿಸಿದಾಗ ಅದನ್ನು ತಾವು ತಡೆದದ್ದಕ್ಕೆ ಹಲ್ಲೆ ಮಾಡಿದ್ದಾರೆ ಎಂದು ವೈಎಸ್ಸಾರ್ ಪಕ್ಷ ಪ್ರತ್ಯಾರೋಪ ಮಾಡಿದೆ.

ಮಹಾರಾಷ್ಟ್ರದ ನಕ್ಸಲ್ ಪೀಡಿತ ಗಡಚಿರೋಲಿಯ ವಾಘೆಜರಿ ಎಂಬಲ್ಲಿ ನಕ್ಸಲರು ಎಲ್​ಇಡಿ ಬಾಂಬ್ ಬ್ಲಾಸ್ಟ್ ಮಾಡಿದರು. ಆದರೆ, ಅದೃಷ್ಟಕ್ಕೆ ಯಾವುದೇ ಪ್ರಾಣಹಾನಿ ಆಗಲಿಲ್ಲ. ಛತ್ತೀಸ್​ಗಡ ಬಸ್ತಾರ್​ನಲ್ಲೂ ನಕ್ಸಲರು ಬಾಂಬ್ ಸ್ಫೋಟ ಮಾಡಿದರಾದರೂ ಪ್ರಾಣ ಹಾನಿಯಾಗಲಿಲ್ಲ. ಈ ರಾಜ್ಯದಲ್ಲಿ ಪೊಲೀಸರು ನಾಲ್ಕೈದು ನಕ್ಸಲ್ ಗೆರಿಲ್ಲಾಗಳನ್ನ ಬಂಧಿಸುವಲ್ಲಿ ಯಶಸ್ವಿಯಾದರು. ಅಸ್ಸಾಮ್​ನ ಪ್ರದೇಶವೊಂದರಲ್ಲೂ ಪೊಲೀಸರು ಸಜೀವ ಐಇಡಿ ಬಾಂಬ್ ಪತ್ತೆ ಹಚ್ಚಿ ನಿಷ್ಕ್ರಿಯಗೊಳಿಸಿದುರ.

ಇವಿಎಂ ದೋಷ:

ಪ್ರತೀ ಚುನಾವಣೆಯಂತೆ ಈ ಬಾರಿಯೂ ಸಾಕಷ್ಟು ಕಡೆ ಮತಯಂತ್ರದಲ್ಲಿ ದೋಷ ಕಂಡುಬಂದಿದೆ. ಅನೇಕ ಕಡೆ ಎವಿಎಂ ದೋಷದಿಂದಾಗಿ ತಡವಾಗಿ ಮತದಾನ ಆರಂಭವಾಯಿತು. ಕೆಲ ಕಡೆ ಮತದಾನವನ್ನು ಮುಂದೂಡಲಾಯಿತು. ಇವಿಎಂ ವಿರುದ್ಧ ಚಂದ್ರಬಾಬು ನಾಯ್ಡು, ಅರವಿಂದ್ ಕೇಜ್ರಿವಾಲ್ ಮೊದಲಾದವರು ಇವತ್ತು ತಮ್ಮ ಅಸಮಾಧಾನ ಹೊರಹಾಕಿದರು.

ಇದರ ಜೊತೆಗೆ, ದೇಶದ ವಿವಿಧೆಡೆ ಮತದಾರರ ಪಟ್ಟಿಯಲ್ಲಿ ಅನೇಕರ ಹೆಸರು ಕೈಬಿಟ್ಟ ಬಗ್ಗೆ ಅಪಸ್ವರಗಳು ಕೇಳಿಬಂದವು. ಬಿಜೆಪಿ ವಿರೋಧಿ ಮತಗಳನ್ನ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ವಿಪಕ್ಷಗಳು ಆರೋಪಿಸುತ್ತಿವೆ. ಹಾಗೆಯೇ, ಅನೇಕ ಕಡೆ ಮತದಾನ ಮಾಡಿದವರ ಬೆರಳಿಗೆ ಹಾಕಲಾಗುವ ಶಾಹಿ ಬಗ್ಗೆಯೂ ಟೀಕೆ ಬಂದಿದೆ. ಬೆರಳಿಗೆ ಹಾಕಿದ ಇಂಕನ್ನು ಅಳಿಸಬಹುದು ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಪ್ರತ್ಯಕ್ಷವಾಗಿ ತೋರಿಸಿದ್ದರು. ಇವೆಲ್ಲದರ ಮಧ್ಯೆ ಯಾವುದೇ ಪ್ರಮುಖ ಅವಘಡಗಳಿಲ್ಲದೆ ಮೊದಲ ಹಂತದ ಮತದಾನ ಮುಕ್ತಾಯವಾಗಿದೆ.

ಎರಡನೇ ಹಂತದ ಮತದಾನವು ಏಪ್ರಿಲ್ 18ರಂದು ನಡೆಯಲಿದೆ. ಇದರಲ್ಲಿ ಕರ್ನಾಟಕದ 13 ಕ್ಷೇತ್ರಗಳೂ ಸೇರಿವೆ.

Comments are closed.