ರಾಷ್ಟ್ರೀಯ

ಸ್ನೇಹಿತನನ್ನೇ ಹತ್ಯೆಗೈದು ವಾಟ್ಸ್‌ಆ್ಯಪ್‌ನಲ್ಲಿ ಮೃತದೇಹದ ಫೋಟೋ ಹಾಕಿದ !

Pinterest LinkedIn Tumblr

ಚೆನ್ನೈ: ಕುಡಿದ ಮತ್ತಲ್ಲಿ ಸ್ನೇಹಿತನನ್ನೇ ಹತ್ಯೆಗೈದು ವಾಟ್ಸ್‌ಆ್ಯಪ್‌ನಲ್ಲಿ ಮೃತದೇಹದ ಫೋಟೋಗಳನ್ನು ಅಪ್‌ಲೋಡ್‌ ಮಾಡಿದ ಘಟನೆ ತಮಿಳುನಾಡಿನ ಪುದುಚೆರಿಯಲ್ಲಿ ನಡೆದಿದೆ.

32 ವರ್ಷದ ಆರೋಪಿ ಸ್ನೇಹಿತರ ಜತೆ ಮದ್ಯ ಸೇವನೆ ಮಾಡುತ್ತಿದ್ದಾಗ ಗದ್ದಲದಲ್ಲಿ ಸ್ನೇಹಿತನ ಹತ್ಯೆ ಮಾಡಿದ್ದಾನೆ. ನಂತರ ಹತ್ಯೆಯಾದವನ ಮೃತದೇಹದ ಫೋಟೋ ಕ್ಲಿಕ್‌ ಮಾಡಿ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಶೇರ್‌ ಮಾಡಿದ್ದಾನೆ. ಹಿಂದಿನ ವೈಷಮ್ಯವೇ ಕೊಲೆಗೆ ಕಾರಣ ಎನ್ನಲಾಗಿದೆ. ಇವರ ನಡುವೆ ಪ್ರೀತಿಯ ವಿಚಾರಕ್ಕೆ ಸಂಬಂಧಿಸಿ ಜಗಳ ನಡೆದಿತ್ತು ಎನ್ನಲಾಗಿದೆ.

ಹತ್ಯೆ ವಿಚಾರವಾಗಿ ಗುರುವಾರ ಬೆಳಗ್ಗೆ ನಂದಮ್‌ಬಕ್ಕಮ್‌ ಪೊಲೀಸ್‌ ಠಾಣೆಗೆ ವಾಟ್ಸ್‌ಆ್ಯಪ್‌ ಮೂಲಕ ಸಂದೇಶ ರವಾನೆಯಾಗಿದೆ. ಓರ್ವನ ಹತ್ಯೆಯಾಗಿದ್ದು, ಆತನ ಮೃತದೇಹವನ್ನು ಸೇನಾ ಕ್ವಾರ್ಟರ್ಸ್‌ ಸಮೀಪದ ಪೊದೆಗಳ ನಡುವೆ ಹೂಳಲಾಗಿದೆ ಎಂಬ ಸಂದೇಶ ಪೊಲೀಸರಿಗೆ ಸಿಕ್ಕಿದೆ. ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಆ ಸ್ಥಳದಲ್ಲಿ ಶೋಧ ನಡೆಸಿದಾಗ ಮೃತ ದೇಹ ಪತ್ತೆಯಾಗಿದೆ.

ಈ ಸ್ಥಳದಲ್ಲಿ ಗಾಂಜಾ ಸೇರಿದಂತೆ ಮಾದಕ ದ್ರವ್ಯಗಳನ್ನು ಸೇವಿಸುತ್ತಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಮೃತ ದೇಹದ ಗುರುತು ಪತ್ತೆಯಾಗಿದ್ದು, ಆತನ ನಾಲ್ವರು ಸ್ನೇಹಿತರಿಗೆ ಪೊಲೀಸರು ಬಲೆ ಬೀಸಿದ್ದಾರೆ.

Comments are closed.