06
ನವದೆಹಲಿ: ಪಕ್ಷದಲ್ಲಿರುವ 75 ವರ್ಷ ಮೀರಿದವರಿಗೆ ಲೋಕಸಭೆ ಟಿಕೆಟ್ ನೀಡಬಾರದು ಎಂಬ ತೀರ್ಮಾನವನ್ನು ಬಿಜೆಪಿ ಕೈಗೊಂಡಿದೆ. ಇದೇ ಕಾರಣಕ್ಕಾಗಿ ಬಿಜೆಪಿಯ ಮುತ್ಸದ್ಧಿ ಹಾಗೂ ಹಿರಿಯ ರಾಜಕಾರಣಿಗಳಾದ ಎಲ್.ಕೆ ಅಡ್ವಾಣಿ ಹಾಗೂ ಮುರಳಿ ಮನೋಹರ ಜೋಷಿ ಅವರಿಗೆ ಪಕ್ಷದ ಟಿಕೆಟ್ ಕೈತಪ್ಪಿದವು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಹೇಳಿದರು.
‘ದಿ ವೀಕ್’ ಮ್ಯಾಗಜೀನ್‌ಗೆ ಗುರುವಾರ ಸಂದರ್ಶನ ನೀಡಿದ ಶಾ ಅವರು, 75 ವರ್ಷ ಮೇಲ್ಪಟ್ಟಯಾವುದೇ ನಾಯಕರಿಗೆ ಪಕ್ಷ ಟಿಕೆಟ್ ನೀಡಿಲ್ಲ, ಇದು ಪಕ್ಷದ ನಿರ್ಧಾರ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ‘ನಾನು ನೇರವಾಗಿ ಜನರಿಂದ ಆಯ್ಕೆಯಾಗಿ ಸಂಸತ್ತು ಪ್ರವೇಶ ಮಾಡಬೇಕೆಂಬ ಆಕಾಂಕ್ಷೆ ಹೊಂದಿದ್ದೇನೆ. ಅದೇ ಕಾರಣಕ್ಕಾಗಿ ರಾಜ್ಯಸಭೆ ಸದಸ್ಯರಾಗಿರುವ ಹೊರತಾಗಿಯೂ, ಲೋಕಸಭಾ ಚುನಾವಣಾ ಅಖಾಡಕ್ಕೆ ಧುಮುಕಿರುವುದಾಗಿ,’ ತಿಳಿಸಿದರು. ಆದರೆ, ಒಂದು ವೇಳೆ ಬಿಜೆಪಿ ಅಧಿಕಾರ ಉಳಿಸಿಕೊಂಡಲ್ಲಿ ಸಚಿವ ಸ್ಥಾನ ಅಲಂಕರಿಸುವಿರಾ ಎಂಬ ಪ್ರಶ್ನೆಗೆ, ರಾಜ್ಯಸಭಾ ಸದಸ್ಯರಾಗಿಯೂ ಸಚಿವರಾಗಬಹುದು ಎಂದು ಹೇಳಿ ಜಾರಿಕೊಂಡರು.
ಈ ವೇಳೆ ಬಾಲಾಕೋಟ್ ದಾಳಿ ಸಾಕ್ಷ್ಯ ಕೇಳುವ ಮೂಲಕ ಪ್ರತಿಪಕ್ಷಗಳು ಸೇನೆಯನ್ನು ಅವಮಾನಿಸುತ್ತಿವೆ. ಕೇವಲ ತಮ್ಮ ಮತ ಬ್ಯಾಂಕ್‌ಗಾಗಿ ಪ್ರತಿಪಕ್ಷಗಳು ಈ ಪ್ರಮಾಣದ ಕೀಳುಮಟ್ಟಕ್ಕೆ ಇಳಿಯಬಾರದು ಎಂದು ಶಾ ಕಿಡಿಕಾರಿದರು. ಬಿಜೆಪಿ ಕೆಲ ಹಾಲಿ ಸಂಸದರು ವಿರೋಧಿ ಅಲೆ ಎದುರಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿ, ಎಲ್ಲ ಕ್ಷೇತ್ರಗಳಲ್ಲಿಯೂ ಮೋದಿ ಅವರೇ ಚುನಾವಣೆ ಎದುರಿಸುತ್ತಿದ್ದಾರೆಯೇ ಹೊರತು ಅಭ್ಯರ್ಥಿಗಳಲ್ಲ ಎಂದು ಹೇಳಿದರು.
ರಾಮ ಮಂದಿರ ಹಾಗೂ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿ ಬಗ್ಗೆ ಮಾತನಾಡಿದ ಶಾ, ಈ ಅಂಶಗಳ ಅನುಷ್ಠಾನಕ್ಕೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪೂರ್ಣ ಬಹುಮತದ ಅಗತ್ಯವಿದೆ. ಜೊತೆಗೆ, ರಾಮ ಮಂದಿರ ವಿಚಾರವು ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿದೆ. ತೀರ್ಪಿಗಾಗಿ ನಾವು ಕಾಯುತ್ತಿದ್ದೇವೆ. ಆದರೆ, ಅದೇ ಜಾಗದಲ್ಲಿ ಅತೀ ಶೀಘ್ರವೇ ಭವ್ಯವಾದ ದೇಗುಲ ನಿರ್ಮಾಣ ನಮ್ಮ ಗುರಿಯಾಗಿದೆ ಎಂದರು.
Comments are closed.