ಗಲ್ಫ್

ಮೋದಿಗೆ ಯುಎಇ ಅತ್ಯುನ್ನತ ನಾಗರಿಕ ಪುರಸ್ಕಾರ ‘ಝಾಯೆದ್ ಮೆಡಲ್’

Pinterest LinkedIn Tumblr


ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸಂಯುಕ್ತ ಅರಬ್‌ ಸಂಸ್ಥಾನದ (ಯುಎಇ) ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಝಾಯೆದ್ ಮೆಡಲ್’ ಗೌರವಕ್ಕೆ ಪಾತ್ರರಾಗಿದ್ದಾರೆ. ಎರಡೂ ದೇಶಗಳ ನಡುವಿನ ಬಾಂಧವ್ಯಕ್ಕೆ ವೃದ್ಧಿಗೆ ಮೋದಿ ವಹಿಸಿದ ಪ್ರಮುಖ ಪಾತ್ರಕ್ಕಾಗಿ ಈ ಅತ್ಯುನ್ನನ ಪುರಸ್ಕಾರ ನೀಡಿರುವುದಾಗಿ ಯುಎಇ ಸರಕಾರ ತಿಳಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಯುಎಇ ಅಧ್ಯಕ್ಷ ಶೇಖ್‌ ಖಲೀಫಾ ಬಿನ್‌ ಜಾಯೆದ್‌ ಅಲ್‌ ನಹ್ಯಾನ್‌, “ನಾವು ಭಾರತದೊಂದಿಗೆ ಐತಿಹಾಸಿಕ ಮತ್ತು ಸಮಗ್ರವಾದ ಕಾರ್ಯತಂತ್ರದ ಸಂಬಂಧಗಳನ್ನು ಹೊಂದಿದ್ದೇವೆ. ನಮ್ಮ ಆತ್ಮೀಯ ಗೆಳೆಯರಾದ ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ನಡುವಿನ ಸಂಬಂಧಗಳನ್ನು ವೃದ್ಧಿಸುವಲ್ಲಿ ಗಮನಾರ್ಹ ಪಾತ್ರ ವಹಿಸಿದ್ದಾರೆ. ಅವರ ಈ ಪ್ರಯತ್ನಕ್ಕಾಗಿ ಯುಎಇ ಅಧ್ಯಕ್ಷರು ಝಾಯೆದ್ ಮೆಡಲ್ ನೀಡಿ ಗೌರವಿಸುತ್ತಿದ್ದಾರೆ” ಎಂದಿದ್ದಾರೆ.

ಈ ಅತ್ಯುನ್ನತ ಪುರಸ್ಕಾರವನ್ನು ವಿಶೇಷವಾಗಿ ರಾಜರು, ಅಧ್ಯಕ್ಷರು ಹಾಗೂ ರಾಜ್ಯದ ಮುಖ್ಯಸ್ಥರಿಗೆ ಪ್ರದಾನ ಮಾಡಲಾಗುತ್ತದೆ. ಇಂತಹ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಮೋದಿ ಭಾಜನರಾಗಿರುವುದು ವಿಶೇಷ. ಈ ಹಿಂದೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಯುಕೆ ರಾಣಿ ಎಜಿಜಬೆತ್ 2 ಅವರಿಗೆ ನೀಡಲಾಗಿದೆ.

2015ರಲ್ಲಿ ಮೋದಿ ಅವರು ಯುಎಇಗೆ ಭೇಟಿ ನೀಡಿದ ಬಳಿಕ ಎರಡೂ ದೇಶಗಳ ನಡುವೆ ಸಂಬಂಧ ವೃದ್ಧಿಗೊಂಡಿತ್ತು. 2017ರಲ್ಲಿ ಗಣರಾಜ್ಯೋತ್ಸವ ಪರೇಡ್ ಮುಖ್ಯ ಅತಿಥಿಯಾಗಿ ಯುಎಇ ಯುವರಾಜ ಭೇಟಿ ನೀಡಿದ್ದರು. ಮೋದಿ ಎರಡು ಸಲ ಭೇಟಿ ನೀಡಿರುವ ದೇಶಗಳಲ್ಲಿ ಯುಎಇ ದೇಶ ಸಹ ಒಂದಾಗಿದೆ.

ಯುಎಇ ಮೂಲಕ ಭಾರತಕ್ಕೆ ಶೇ.8ರಷ್ಟು ಇಂಧನ ಆಮದಾಗುತ್ತದೆ. ಭಾರತಕ್ಕೆ ಕಚ್ಚಾ ತೈಲವನ್ನು ಪೂರೈಸುವ ಐದನೇ ಅತಿ ದೊಡ್ಡ ದೇಶ ಯುಎಇ. ಗುರುಗ್ರಾಮದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಅಂತಾರಾಷ್ಟ್ರೀಯ ಸೌರ ಒಕ್ಕೂಟದಲ್ಲೂ (ಐಎಸ್‍ಎ) ಯುಎಇ ಭಾಗಿಯಾಗಿದೆ.

Comments are closed.