ರಾಷ್ಟ್ರೀಯ

’70 ವರ್ಷಗಳಲ್ಲಿ ಕಾಂಗ್ರೆಸ್​ ಮಾಡದ ಕೆಲಸವನ್ನು 5 ವರ್ಷದಲ್ಲಿ ಹೇಗೆ ಮಾಡಲಿ?: ಮೋದಿ

Pinterest LinkedIn Tumblr


ಪಾಟ್ನಾ​ (ಬಿಹಾರ): ನೀಡಿರುವ ಭರವಸೆಗಳನ್ನು ಈಡೇರಿಸಲು ಮತ್ತೊಂದು ಅವಧಿಗೆ ಅವಕಾಶ ನೀಡುವಂತೆ ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಲ್ಲಿ ಮನವಿ ಮಾಡಿದರು.

ಎನ್​ಡಿಎ ಮೈತ್ರಿಕೂಟದ ಮಿತ್ರಪಕ್ಷವಾಗಿರುವ ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್​ ನೇತೃತ್ವದ ಜೆಡಿಯುನ ಮೈತ್ರಿ ಅಭ್ಯರ್ಥಿ ಪರ ಜಮೂಯ್​ನಲ್ಲಿ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಎಲ್ಲ ಕೆಲಸಗಳು ಮುಗಿದಿವೆ ಎಂದು ನಾನು ಹೇಳುವುದಿಲ್ಲ. 70 ವರ್ಷದಿಂದ ಇದನ್ನು ಹೇಳಿಕೊಳ್ಳಲು ಅವರಿಗೆ (ಕಾಂಗ್ರೆಸ್​) ಸಾಧ್ಯವಾಗಿಲ್ಲ. ಇನ್ನು ಕೇವಲ ಐದು ವರ್ಷದಲ್ಲಿ ನಾನೇಗೆ ಇದನ್ನು ಹೇಳಲಿ. ತುಂಬಾ ಕೆಲಸಗಳನ್ನು ಮಾಡಿಯಾಗಿದೆ. ಮಾಡುವುದು ಇನ್ನೂ ತುಂಬಾ ಇದೆ. ಅದಕ್ಕೆ ನಿಮ್ಮ ಆಶೀರ್ವಾದ ಬೇಕು ಎಂದು ಕೇಳಿದರು.

ಬಿಹಾರದ ಮೀಸಲು ಕ್ಷೇತ್ರವಾದ ಜಮೂಯ್​ನಲ್ಲಿ ಏಪ್ರಿಲ್​ 11ರಂದು ಮೊದಲ ಹಂತದಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ.

ತಮ್ಮ ಭಾಷಣದುದ್ದಕ್ಕೂ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ಮುಂದುವರೆಸಿದ ಪ್ರಧಾನಿ ಮೋದಿ, ಕಾಂಗ್ರೆಸ್​ ಪಕ್ಷವೂ ನಮ್ಮ ಧೈರ್ಯಶಾಲಿ ಸೈನಿಕರನ್ನು ಸಮರ್ಥನೆ ಮಾಡಿಕೊಳ್ಳುವ ಬದಲಿಗೆ ಪಾಕಿಸ್ತಾನವನ್ನು ಬೆಂಬಲಿಸುತ್ತಿದೆ. ಜಗತ್ತಿನ ಎಲ್ಲ ಜನರು ನಿಮ್ಮ ಚೌಕೀದಾರನನ್ನು ಆಶೀರ್ವದಿಸುತ್ತಾರೆ. ಆದರೆ, ದೇಶದ ಒಳಗಿನ ಕೆಲವರು ನನ್ನ ಉದ್ದೇಶವನ್ನೇ ಪ್ರಶ್ನೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಹಿಂದುಳಿದ ವರ್ಗದವರಿಗೆ ನೀಡಲಾಗಿರುವ ಮೀಸಲಾತಿಯನ್ನು ತೆಗೆದುಹಾಕಲಿದೆ ಎಂಬ ಗಾಳಿಸುದ್ದಿಗೆ ಪ್ರತ್ಯುತ್ತರ ನೀಡಿರುವ ಪ್ರಧಾನಿ ಮೋದಿ, ಹಿಂದುಳಿದ ವರ್ಗಗಳಿಗೆ ನೀಡಲಾಗಿರುವ ಮೀಸಲಾತಿಯನ್ನು ಎಂದಿಗೂ ಯಾರೊಬ್ಬರು ಮುಟ್ಟಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇನ್ನು ಇದಕ್ಕೂ ಮುನ್ನ ಗಯಾದಲ್ಲಿ ನಡೆದ ಪ್ರಚಾರ ಸಮಾವೇಶದಲ್ಲಿ ಬೃಹತ್​ ಸಂಖ್ಯೆಯಲ್ಲಿ ಜನರು ಸೇರಿದ್ದರು. ಆದರೆ, ಸರಿಯಾದ ವ್ಯವಸ್ಥೆ ಮಾಡದ ಕಾರಣ ಜನರು ಪರದಾಡುವಂತಾಯಿತು. ನಂತರ ರೊಚ್ಚಿಗೆದ್ದ ಸಭಿಕರು ಕುರ್ಚಿಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದರು.

Comments are closed.