ನವದೆಹಲಿ: ಪುಲ್ವಾಮ ಉಗ್ರ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತವು ಪಾಕಿಸ್ತಾನದ ಗಡಿಭಾಗದಲ್ಲಿದ್ದ ಜೈಷ್ ಉಗ್ರರ ನೆಲೆಗಳ ಮೇಲೆ ನಡೆಸಿದ ವೈಮಾನಿಕ ದಾಳಿ ಪಾಕಿಸ್ತಾನದ ನಿದ್ದೆಗೆಡಿಸಿತ್ತು. ಬಾಲಕೋಟ್ಗೆ ಭಾರತೀಯ ವಿಮಾನಗಳು ನುಗ್ಗಿ ದಾಳಿ ನಡೆಸಿದ ಮರುದಿನವೇ ಪಾಕಿಸ್ತಾನ ಕೂಡ ಪ್ರತಿದಾಳಿ ನಡೆಸಿತ್ತು. ಆದರೆ, ಭಾರತದ ಮಿಲಿಟರಿ ನೆಲೆಗಳನ್ನು ಗುರಿ ಮಾಡಿಕೊಂಡ ಪಾಕ್ ನಡೆಸಿದ್ದ ವೈಮಾನಿಕ ದಾಳಿ ವಿಫಲವಾತ್ತಿದ್ದೆಂದು ಎಎನ್ಐ ಸುದ್ದಿ ಸಂಸ್ಥೆಯ ವರದಿಯೊಂದು ಹೇಳಿದೆ. ಸರಕಾರದ ಮೂಲಗಳಿಂದ ಮಾಹಿತಿ ಪಡೆದು ವರದಿ ಮಾಡಿರುವ ಎಎನ್ಐ, ಫೆ. 27ರಂದು ನಡೆದ ದಾಳಿಯಲ್ಲಿ ಅಮೆರಿಕದ ಎಫ್-16, ಫ್ರಾನ್ಸ್ನ ಮಿರೇಜ್-3 ಹಾಗೂ ಚೀನಾದ ಜೆಎಫ್-17 ಸೇರಿದಂತೆ ಒಟ್ಟು 20 ವಿಮಾನಗಳನ್ನ ಬಳಕೆ ಮಾಡಿತ್ತೆಂದು ತಿಳಿಸಿದೆ.
ಈ 20 ವಿಮಾನಗಳು ಭಾರತದ 3 ಸೇನಾ ನೆಲೆಗಳ ಮೇಲೆ 1 ಸಾವಿರ ಕಿಲೋ ತೂಕದ 11 ಬಾಂಬ್ಗಳನ್ನು ಹಾಕಲು ಯತ್ನಿಸಿದ್ದವು. ಆದರೆ, ಭಾರತದ ವಿಮಾನಗಳು ಪ್ರತಿದಾಳಿ ನಡೆಸತೊಡಗಿದಾಗ ಗಾಬರಿಯಲ್ಲಿ ಪಾಕ್ ವಿಮಾನಗಳ ಗುರಿ ತಪ್ಪಿವೆ. ಉದ್ದೇಶಿತ ಗುರಿಗಿಂತ ಸ್ವಲ್ಪ ದೂರದ ಸ್ಥಳದಲ್ಲಿ ಈ ಬಾಂಬ್ಗಳು ಬಿದ್ದವು ಎಂದು ಎಎನ್ಐ ಸುದ್ದಿ ಸಂಸ್ಥೆಯ ವರದಿಯಲ್ಲಿ ತಿಳಿಸಲಾಗಿದೆ.
ಅಂದು, ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಈ ಪ್ರತಿದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿ, ತಮ್ಮದು ಸೇನಾ ನೆಲೆಗಳ ಮೇಲೆ ದಾಳಿ ಮಾಡುವ ಉದ್ದೇಶವಿರಲಿಲ್ಲ. ಭಾರತಕ್ಕೆ ಎಚ್ಚರಿಕೆಯ ಸಂದೇಶ ರವಾನಿಸುವುದು ಉದ್ದೇಶವಾಗಿತ್ತು. ಸೇನಾ ನೆಲೆಗಳ ಆಚೆ ನಿರ್ಜನ ಸ್ಥಳವನ್ನು ಗುರುತಿಸಿ ಅಲ್ಲಿ ಬಾಂಬ್ ದಾಳಿ ನಡೆಸಲು ಯೋಜಿಸಿದ್ದೆವು. ಅದರಂತೆ ಆ ಉದ್ದೇಶ ನೆರವೇರಿದೆ ಎಂದು ಸ್ಪಷ್ಟೀಕರಣ ನೀಡಿದ್ದರು.
ಆದರೆ, ಪಾಕ್ ಯುದ್ಧವಿಮಾನಗಳು ಭಾರತದ ಮಿಲಿಟರಿ ನೆಲೆಗಳನ್ನೇ ಟಾರ್ಗೆಟ್ ಮಾಡಿದ್ದವೆಂಬುದು ಭಾರತದ ವಾದ. ಈ ದಾಳಿಯಲ್ಲಿ ಪಾಕಿಸ್ತಾನವು ಎಫ್-16 ಯುದ್ಧ ವಿಮಾನ ಬಳಕೆ ಮಾಡಿದೆ. ಪಾಕಿಸ್ತಾನಕ್ಕೆ ಸೆರೆಸಿಕ್ಕಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ದಮಾನ್ ಅವರು ತಮ್ಮ ಮಿಗ್-21 ಯುದ್ಧವಿಮಾನದ ಮೂಲಕ ಆರ್-73 ಕ್ಷಿಪಣಿಯನ್ನು ಪ್ರಯೋಗಿಸಿ ಎಫ್-16 ಯುದ್ಧವಿಮಾನವನ್ನು ಹೊಡೆದುಹಾಕಿದರೆಂದು ಭಾರತ ಹೇಳುತ್ತಿದೆ. ಆದರೆ, ಇದನ್ನು ಪಾಕಿಸ್ತಾನ ಮೊದಲಿಂದಲೂ ಅಲ್ಲಗಳೆಯುತ್ತಾ ಬಂದಿದೆ. ಚೀನಾ-ಪಾಕ್ ಜಂಟಿ ನಿರ್ಮಿತ ಜೆಎಫ್-17 ಯುದ್ಧವಿಮಾನವು ಭಾರತದ ಮಿಗ್-21 ವಿಮಾನವನ್ನು ಹೊಡೆದುರುಳಿಸಿತೆಂಬುದು ಪಾಕ್ ವಾದ.
ಇದೇ ವೇಳೆ, ಪೂಂಚ್ ಸೆಕ್ಟರ್ ಸಮೀಪ ಪಾಕಿಸ್ತಾನ ಹಾಕಿರುವ ಬಾಂಬ್ಗಳನ್ನ ಹಾಗೂ ಕೆಲ ಅವಶೇಷಗಳನ್ನ ಭಾರತೀಯ ಸೇನಾಧಿಕಾರಿಗಳ ತಂಡವೊಂದು ಅಧ್ಯಯನ ಮಾಡುತ್ತಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಶೀಘ್ರದಲ್ಲೇ ಸಿಗುವ ನಿರೀಕ್ಷೆ ಇದೆ.
Comments are closed.