ರಾಷ್ಟ್ರೀಯ

ಸಮಾಜವಾದಿ ಪಕ್ಷದ ತಾರಾ ಪ್ರಚಾರಕರಾಗಿದ್ದ ಜಯಪ್ರದ ಬಿಜೆಪಿ ಸೇರ್ಪಡೆ; ಆಜಂ ಖಾನ್ ವಿರುದ್ಧ ಸ್ಪರ್ಧಿಸುವ ಸಾಧ್ಯತೆ

Pinterest LinkedIn Tumblr

ನವದೆಹಲಿ: ಸಮಾಜವಾದಿ ಪಕ್ಷದ ತಾರಾ ಪ್ರಚಾರಕರಾಗಿದ್ದ ಜಯಪ್ರದ ಸಮಾಜವಾದಿ ಪಕ್ಷ ತೊರೆದು ಮಾ.26 ರಂದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

ನವದೆಹಲಿಯ ಪಕ್ಷದ ಮುಖ್ಯ ಕಚೇರಿಯಲ್ಲಿ ಬಿಜೆಪಿ ಸೇರ್ಪಡೆಗೊಂಡ ಜಯಪ್ರದ ಪ್ರಧಾನಿ ಮೋದಿ ನಾಯಕತ್ವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

“ಸಿನಿಮಾ ಆಗಲೀ ರಾಜಕೀಯವಾಗಲಿ ನಾನು ನನ್ನ ಜೀವನವನ್ನು ಬದ್ಧತೆಯಿಂದ ಸಮರ್ಪಿಸಿದ್ದೇನೆ. ದೇಶ ಯಾರ ಕೈಲಿ ಸುರಕ್ಷಿತವಾಗಿದೆ ಎಂದು ಭಾವಿಸಲಾಗುತ್ತದೆಯೋ ಅಂತಹ ಧೈರ್ಯಶಾಲಿ ನಾಯಕನ ಜೊತೆಗೆ ಕೆಲಸ ಮಾಡುತ್ತಿದ್ದೇನೆ. ಇದಕ್ಕಾಗಿ ಅವಕಾಶ ನೀಡಿದ ಅಮಿತ್ ಶಾ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಜಯಪ್ರದ ಪಕ್ಷ ಸೇರ್ಪಡೆ ನಂತರ ಹೇಳಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಜಯಪ್ರದ ಉತ್ತರ ಪ್ರದೇಶದ ರಾಮ್ ಪುರದಿಂದ ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್ ವಿರುದ್ಧ ಸ್ಪರ್ಧಿಸುವ ಸಾಧ್ಯತೆ ಇದೆ. 2004 ಹಾಗೂ 2009 ರಲ್ಲಿ ಜಯಪ್ರದ ರಾಮ್ ಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ತಮ್ಮನ್ನು ತೆಲುಗು ದೇಶಂ ಪಕ್ಷದಿಂದ ಸಮಾಜವಾದಿ ಪಕ್ಷಕ್ಕೆ ಕರೆತಂದಿದ್ದ ಆಜಂ ಖಾನ್ ವಿರುದ್ಧವೇ ಜಯಪ್ರದ ತಿರುಗಿಬಿದ್ದಿದ್ದರು. 2009 ರ ಲೋಕಸಭಾ ಚುನಾವಣೆಯಲ್ಲಿ ಆಜಂ ಖಾನ್ ಬೆಂಬಲಿಗರು ಜಯಪ್ರದಾ ವಿರುದ್ಧ ಪ್ರಚಾರ ಮಾಡಿದ್ದರು. ಈ ಚುನಾವಣೆ ವೇಳೆಯಲ್ಲೇ ಆಜಂ ಖಾನ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಜಯಪ್ರದ, ಆಜಂ ಖಾನ್ ಹಾಗೂ ಅವರ ಬೆಂಬಲಿಗರು ತಮ್ಮ ಫೋಟೊಗಳನ್ನು ಅಶ್ಲೀಲ ರೀತಿಯಲ್ಲಿ ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ ಎಂದು ಆರೋಪಿಸಿದ್ದರು. 2018 ರಲ್ಲಿ ಆಜಂ ಖಾನ್ ರನ್ನು ಜಯಪ್ರದ ಪದ್ಮಾವತ್ ಚಿತ್ರದ ಖಿಲ್ಜಿ ಪಾತ್ರಕ್ಕೆ ಹೋಲಿಕೆ ಮಾಡಿದ್ದರು.

Comments are closed.