ರಾಷ್ಟ್ರೀಯ

ಚುನಾವಣೆ ಕಣದಿಂದ ಹಿಂದೆ ಸರಿದ ಉಮಾಭಾರತಿ ಬಿಜೆಪಿ ಉಪಾಧ್ಯಕ್ಷೆಯಾಗಿ ನೇಮಕ

Pinterest LinkedIn Tumblr


ಹೊಸದಿಲ್ಲಿ: ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಾರೆ ಎಂದು ಘೋಷಿಸಿದ ಬೆನ್ನಲ್ಲೇ ಕೇಂದ್ರ ಸಚಿವೆ ಉಮಾ ಭಾರತಿ ಪಕ್ಷದ ಉಪಾಧ್ಯಕ್ಷೆಯಾಗಿ ನೇಮಕವಾಗಿದ್ದಾರೆ.

ಚುನಾವಣೆಗೆ ನಿಲ್ಲಲಾರೆ ಎಂದಿರುವ ಉಮಾಭಾರತಿ ಅವರು ಪಕ್ಷಕ್ಕಾಗಿ ಕೆಲಸ ಮಾಡುವುದಾಗಿ ಹೇಳಿದ್ದರು. ಬಿಜೆಪಿ ಅಧ್ಯಕ್ಷರು ಅವರನ್ನು ಪಕ್ಷದ ಉಪಾಧ್ಯಕ್ಷರನ್ನಾಗಿ ನೇಮಿಸಿದ್ದಾರೆ ಎಂದು ಕೇಂದ್ರ ಸಚಿವ ಜೆ ಪಿ ನಡ್ಡಾ ತಿಳಿಸಿದ್ದಾರೆ.

ಮತ್ತೀಗ ಪಕ್ಷ ತಮಗೆ ವಹಿಸಿರುವ ಹೊಸ ಹೊಣೆಗಾರಿಕೆಯನ್ನು ಒಪ್ಪಿಕೊಂಡಿರುವ ಅವರು ಪಕ್ಷ ನನ್ನ ಭಾವನೆಗಳಿಗೆ ಗೌರವ ಕೊಟ್ಟಿದ್ದಕ್ಕೆ ಸಂತೋಷವಾಗಿದೆ. ಅಮಿತ್ ಶಾ ಅಡಿಯಲ್ಲಿ ನಾನು ಸಮರ್ಥ ಮತ್ತು ದಕ್ಷ ಕಾರ್ಯಕರ್ತೆಯಾಗಿ ಕೆಲಸ ಮಾಡಲು ಪ್ರಯತ್ನಿಸುತ್ತೇನೆ. ಚುನಾವಣೆವರೆಗೆ ಪ್ರಚಾರದಲ್ಲಿ ಪಾಲ್ಗೊಳ್ಳುತ್ತೇನೆ ಬಳಿಕ ಗಂಗಾನದಿ ಸ್ವಚ್ಛತೆಗೆ ಸಂಬಂಧಿಸಿದಂತೆ ಪಕ್ಷ ವಹಿಸುವ ಕೆಲಸದ ಕಡೆ ಗಮನ ಕೊಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ, ಈ ಬಗ್ಗೆ ಅಧಿಕೃತ ಘೋಷಣೆ ಮಾಡಿ ಎಂದವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಲ್ಲಿ ಮನವಿ ಮಾಡಿರುವುದಾಗಿ ಬಿಜೆಪಿ ನಾಯಕಿ ಕೆಲ ದಿನಗಳ ಹಿಂದೆ ಟ್ವೀಟ್ ಮಾಡಿದ್ದರು. ಆದರೆ ರಾಜಕೀಯದಿಂದ ನಾನೆಂದಿಗೂ ಸನ್ಯಾಸ ತೆಗೆದುಕೊಳ್ಳುವುದಿಲ್ಲ. ಕೊನೆಯುಸಿರಿರುವವರೆಗೆ ರಾಜಕೀಯದಿಂದ ನಿವೃತ್ತಿ ಪಡೆದುಕೊಳ್ಳುವುದಿಲ್ಲ. ಬಡ ಜನರ ಹಕ್ಕು, ಅಧಿಕಾರಕ್ಕಾಗಿ ಕೆಲಸ ಮಾಡುತ್ತೇನೆ. ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಯಾವುದೇ ಜವಾಬ್ದಾರಿ ನೀಡಿದರೂ ನಾನು ವಹಿಸಿಕೊಳ್ಳಲು ಸಿದ್ಧ ಎಂದವರು ಹೇಳಿದ್ದರು.

ಪ್ರಸಕ್ತ ಆಡಳಿತದಲ್ಲಿರುವ ಮೋದಿ ಸರಕಾರದಲ್ಲಿ ಉಮಾ ಭಾರತಿ ಕೇಂದ್ರ ಸಚಿವೆಯಾಗಿದ್ದು ಉತ್ತರ ಪ್ರದೇಶಧ ಝಾನ್ಸಿ ಕ್ಷೇತ್ರದ ಸಂಸದರಾಗಿದ್ದಾರೆ.

ಉತ್ತರ ಪ್ರದೇಶದ ಹಲವು ಸಂಸದರಿಗೆ ಈ ಬಾರಿ ಬಿಜೆಪಿ ಟಿಕೆಟ್ ‌ನೀಡುವುದಿಲ್ಲ ಎಂಬ ಮಾತು ಸಹ ಕೇಳಿ ಬಂದಿತ್ತು. ಕೆಲವು ಮೂಲಗಳ ಪ್ರಕಾರ ಉಮ ಭಾರತಿ ಅವರಿಗೂ ಟಿಕೆಟ್ ನೀಡದಿರುವುದೆಂದು ನಿರ್ಣಯವಾಗಿತ್ತು. ಹೀಗಾಗಿ ಅವರಾಗಿಯೇ ಈ ಘೋಷಣೆ ಮಾಡಿದ್ದಾರೆ ಎಂದು ಸುದ್ದಿ ಹರಿದಾಡುತ್ತಿತ್ತು.

ಚುನಾವಣೆಗಿಳಿಯುವ ಆಸಕ್ತಿ ಇಲ್ಲವೆಂದ ಸುಷ್ಮಾ ಸ್ವರಾಜ್

ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಕೂಡ ಅನಾರೋಗ್ಯದ ಹಿನ್ನೆಲೆಯಲ್ಲಿ ಚುನಾವಣೆಯಿಂದ ಹಿಂದೆ ಸರಿಯುತ್ತಿರುವುದಾಗಿ ಘೋಷಿಸಿದ್ದಾರೆ.

ಬಿಜೆಪಿ ಶನಿವಾರ ಮಧ್ಯಪ್ರದೇಶದಲ್ಲಿ ಕಣಕ್ಕಿಳಿಸುತ್ತಿರುವ 15 ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಆದರೆ ಸುಷ್ಮಾ ಸ್ವರಾಜ್ ಪ್ರತಿನಿಧಿಸುತ್ತಿರುವ ವಿದಿಶಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಿಸಿಲ್ಲ.

Comments are closed.