ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರವೇ ಪುಲ್ವಾಮಾ ಉಗ್ರ ದಾಳಿಯ ಪ್ಲಾನ್ ಮಾಡಿತ್ತು ಎಂದು ಸಮಾಜವಾದಿ ಪಕ್ಷದ ನಾಯಕ ರಾಮ್ ಗೋಪಾಲ್ ಯಾದವ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮತಗಳಿಗೋಸ್ಕರ ಭಾರತೀಯ ಯೋಧರು ತಮ್ಮ ಜೀವವನ್ನೇ ತ್ಯಾಗ ಮಾಡಿರುವುದು ತನಗೆ ತೀವ್ರ ಬೇಸರ ತಂದಿದೆ. ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಭದ್ರತಾ ನಿರ್ಬಂಧಗಳಿಲ್ಲದಿರುವುದು ಹೇಗೆ ಸಾಧ್ಯ ಎಂದು ಸಮಾಜವಾದಿ ಪಕ್ಷದ ನಾಯಕ ಪ್ರಶ್ನೆ ಮಾಡಿದ್ದಾರೆ.
ಪ್ಯಾರಾಮಿಲಿಟರಿ ಪಡೆಯ ಹಿರಿಯ ಅಧಿಕಾರಿಗಳು ವಿಮಾನದಲ್ಲಿ ಅಥವಾ ಶಸ್ತ್ರಸಜ್ಜಿತ ವಾಹನಗಳಲ್ಲಿ ಪ್ರಯಾಣ ಮಾಡಬೇಕೆಂದು ಕೇಂದ್ರ ಸರ್ಕಾರವನ್ನು ಮನವಿ ಮಾಡಿಕೊಂಡರೂ ಸಹ ಸಾಮಾನ್ಯ ಬಸ್ ಗಳಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗಿತ್ತು ಎಂದು ರಾಮ್ ಗೋಪಾಲ್ ಯಾದವ್ ಆರೋಪಿಸಿದ್ದಾರೆ.
ಈ ಸರ್ಕಾರ ಬದಲಾದ ಬಳಿಕ ಈ ಬಗ್ಗೆ ತನಿಖೆ ನಡೆಸಲಾಗುವುದು. ಆಗ ಸತ್ಯ ಹೊರಬರುತ್ತದೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಪುಲ್ವಾಮಾ ದಾಳಿ ಕುರಿತಂತೆ ರಾಜಕೀಯ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಕೆಸರೆರೆಚಾಟದಲ್ಲಿ ತೊಡಗಿವೆ.
ಫೆಬ್ರವರಿ 14ರಂದು ಸ್ಫೋಟಕ ತುಂಬಿದ್ದ ವಾಹನವನ್ನು ಚಲಾಯಿಸಿ 78 ಮಂದಿಯಿದ್ದ ಸಿಆರ್ಪಿಎಫ್ ಬೆಂಗಾವಲು ಪಡೆ ಯೋಧರನ್ನು ಹೊತ್ತೊಯ್ಯುತ್ತಿದ್ದ ವಾಹನಕ್ಕೆ ಜೈಷ್ ಎ ಮೊಹಮ್ಮದ್ ಉಗ್ರ ಡಿಕ್ಕಿ ಹೊಡೆದಿದ್ದ. ಆ ಆತ್ಮಾಹುತಿ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದರು. ಬಳಿಕ ಫೆಬ್ರವರಿ 26ರಂದು ಭಾರತೀಯ ವಾಯುಪಡೆ ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ಏರ್ ಸ್ಟ್ರೈಕ್ ದಾಳಿ ನಡೆಸಿತ್ತು.
Comments are closed.