ರಾಷ್ಟ್ರೀಯ

ಮಧ್ಯ ರಾತ್ರಿ 1:51 ರ ವೇಳೆಗೆ ಗೋವಾ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರಮೋದ್ ಸಾವಂತ್ !

Pinterest LinkedIn Tumblr

ಮನೋಹರ್ ಪರಿಕ್ಕರ್ ನಿಧನದಿಂದ ತೆರವಾಗಿದ್ದ ಗೋವಾ ಮುಖ್ಯಮಂತ್ರಿ ಹುದ್ದೆಗೆ ಆಯ್ಕೆಯಾಗಿದ್ದ ಪ್ರಮೋದ್ ಸಾವಂತ್ ಮಾ.18 ರಂದು ತಡರಾತ್ರಿ 1:51 ರ ವೇಳೆಗೆ ಗೋವಾ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಅತ್ತ ಮನೋಹರ್ ಪರಿಕ್ಕರ್ ಅವರ ನಿಧನದ ವಾರ್ತೆ ಕೇಳುತ್ತಿದ್ದಂತೆಯೇ ಕಾಂಗ್ರೆಸ್ ಪಕ್ಷ ಗೋವಾದಲ್ಲಿ ಸರ್ಕಾರ ರಚನೆ ಕಸರತ್ತಿಗೆ ಮುಂದಾಗಿ ರಾಜ್ಯಪಾಲರನ್ನು ಭೇಟಿ ಮಾಡಿತ್ತು. ಇತ್ತ ಬಿಜೆಪಿ ಪಾಳಯದಲ್ಲೂ ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ತ್ವರಿತವಾಗಿ ನೂತನ ಮುಖ್ಯಮಂತ್ರಿಯ ಘೋಷಣೆ ಹಾಗೂ ಮಿತ್ರಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ ಬಿರುಸಿನಿಂದ ನಡೆದಿತ್ತು.

ಅಂತಿಮವಾಗಿ ಮನೋಹರ್ ಪರಿಕ್ಕರ್ ಅವರೇ ರಾಜಕೀಯಕ್ಕೆ ಕರೆ ತಂದಿದ್ದ ಗೋವಾದ ಸ್ಪೀಕರ್ ಪ್ರಮೋದ್ ಸಾವಂತ್ ಮನೋಹರ್ ಪರಿಕ್ಕರ್ ಅವರ ಅಂತ್ಯಸಂಸ್ಕಾರ ನಡೆದ ಕೆಲವೇ ಗಂಟೆಗಳಲ್ಲಿ ಅವರ ರಾಜಕೀಯ ಉತ್ತರಾಧಿಕಾರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಈಗಾಗಲೇ ಮನೋಹರ್ ಪರಿಕ್ಕರ್ ಅವರ ಸಚಿವ ಸಂಪುಟದಲ್ಲಿದ್ದ 11 ಶಾಸಕರು ಪ್ರಮೋದ್ ಸಾವಂತ್ ಜೊತೆಗೆ ಸಚಿವರಾಗಿ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾತ್ರಿ 11 ಗಂಟೆಗೆ ನಡೆಯಬೇಕಿದ್ದ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಕಾರಣಾಂತರಗಳಿಂದ ರಾತ್ರಿ 1:51 ಕ್ಕೆ ನಡೆಯಿತು.

ಇನ್ನು ಮಿತ್ರಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿರುವ ಬಿಜೆಪಿ, ಎರಡು ಉಪಮುಖ್ಯಮಂತ್ರಿ ಹುದ್ದೆಯನ್ನೂ ಸೃಷ್ಟಿಸಿದ್ದು, ಬಿಜೆಪಿಗೆ ಬೆಂಬಲ ನೀಡಿರುವ ಎಂಜಿಪಿ ಹಾಗೂ ಜಿಎಫ್ ಪಿಯ ಶಾಸಕರಿಗೆ ಉಪಮುಖ್ಯಮಂತ್ರಿ ಹುದ್ದೆಗಳನ್ನು ನೀಡಿದೆ.

ಪದಗ್ರಹಣದ ಬಳಿಕ ಮಾತನಾಡಿರುವ ಪ್ರಮೋದ್ ಸಾವಂತ್, ಪಕ್ಷ ನನ್ನ ಹೆಗಲಿಗೆ ಬಹುದೊಡ್ಡ ಜವಾಬ್ದಾರಿಯನ್ನು ಹೊರೆಸಿದೆ. ನಾನು ಈ ರಾಜಕೀಯದಲ್ಲಿ ಏನಾದರೂ ಆಗಿದ್ದರೆ ಅದು ಮನೋಹರ್ ಪರಿಕ್ಕರ್ ಅವರಿಂದಲೇ, ಅವರೇ ನನ್ನನ್ನು ರಾಜಕೀಯವಾಗಿ ಬೆಳೆಸಿದವರು, ನಾನು ಗೋವಾ ವಿಧಾನಸಭೆ ಸ್ಪೀಕರ್ ಆಗಿದ್ದೂ ಸಹ ಮನೋಹರ್ ಪರಿಕ್ಕರ್ ಅವರಿಂದಲೇ ಎಂದು ಹೇಳಿದ್ದಾರೆ.

Comments are closed.