ರಾಷ್ಟ್ರೀಯ

ಸುಪ್ರೀಂ ಕೋರ್ಟ್ ಗಡುವಿಗೆ ಮುನ್ನ ಅನಿಲ್ ಅಂಬಾನಿಗೆ ನೆರವು ಒದಗಿಸಿದ ಮುಕೇಶ್

Pinterest LinkedIn Tumblr


ನವದೆಹಲಿ: ಸಾಲದ ಸಂಕಷ್ಟಕ್ಕೆ ಸಿಲುಕಿರುವ ಅನಿಲ್ ಅಂಬಾನಿ ಮಾಲಕತ್ವದ ರಿಲಾಯನ್ಸ್ ಕಮ್ಯೂನಿಕೇಶನ್ಸ್ (RCom) ಸಂಸ್ಥೆಯು ಸ್ವೀಡನ್ ದೇಶದ ಎರಿಕ್ಸನ್ ಕಂಪನಿಗೆ ನೀಡಬೇಕಿದ್ದ 458.77 ಕೋಟಿ ರೂ ಬಾಕಿ ಹಣವನ್ನು ಮುಕೇಶ್ ಅಂಬಾನಿ ನೀಡಿದ್ದಾರೆ. ಹಣ ಸಂದಾಯ ಆಗಿರುವುದನ್ನು ಎರಿಕ್ಸನ್ ಕಂಪನಿ ಖಚಿತಪಡಿಸಿದೆ. ತಮಗೆ ನೆರವು ನೀಡಿದ್ದಕ್ಕೆ ಹಿರಿಯ ಸಹೋದರ ಮುಕೇಶ್ ಅಂಬಾನಿ ಅವರಿಗೆ ರಿಲಾಯನ್ಸ್ ಕಮ್ಯೂನಿಕೇಶನ್ಸ್ ಸಂಸ್ಥೆಯ ಛೇರ್ಮನ್ ಅನಿಲ್ ಅಂಬಾನಿ ಧನ್ಯವಾದ ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಎರಿಕ್ಸನ್ ಕಂಪನಿಗೆ ನೀಡಬೇಕಿದ್ದ 550 ಕೋಟಿ ರೂ ಹಾಗೂ ಬಡ್ಡಿ ಹಣವನ್ನು ಸಂಪೂರ್ಣವಾಗಿ ಪಾವತಿಸಿದಂತಾಗಿದೆ ಎಂದು ಆರ್​ಕಾಂ ವಕ್ತಾರರು ಹೇಳಿಕೆ ನೀಡಿದ್ದಾರೆ.

ಎರಿಕ್ಸನ್ ಸಂಸ್ಥೆಯು ಆರ್​ಕಾಂ ನೆಟ್ವರ್ಕ್ ಅನ್ನು ನಿರ್ವಹಿಸಲು 2014ರಲ್ಲಿ ಒಪ್ಪಂದಕ್ಕೆ ಸಹಿ ಹಾಕಿತ್ತು. ಇದರ ಕೆಲಸಕ್ಕಾಗಿ ಆರ್​ಕಾಂನಿಂದ ತನಗೆ ಬಾಕಿ ಹಣ ಬಂದಿಲ್ಲ ಎಂದು ಸ್ವೀಡನ್ ದೇಶದ ಈ ಕಂಪನಿಯು ಕೋರ್ಟ್ ಮೆಟ್ಟಿಲೇರಿತ್ತು. ಈ ವ್ಯಾಜ್ಯದ ವಿಚಾರವಾಗಿ ಸುಪ್ರೀಂ ಕೋರ್ಟ್ ನಿರ್ದೇಶನದ ನಂತರ ಆರ್​ಕಾಂ ಸಂಸ್ಥೆಯು ಫೆಬ್ರುವರಿ ತಿಂಗಳಲ್ಲಿ ಕೋರ್ಟ್​ನಲ್ಲಿ 118 ಕೋಟಿ ಹಣ ಡೆಪಾಸಿಟ್ ಇಟ್ಟಿತ್ತು.

“ಈ ಸಂಕಷ್ಟದ ಸ್ಥಿತಿಯಲ್ಲಿ ನನ್ನ ಗೌರವಾನ್ವಿತ ಹಿರಿಯ ಸಹೋದರ ಮುಕೇಶ್ ಮತ್ತು ನೀತಾ ಅವರು ನನಗೆ ಸಹಾಯವಾಗಿ ನಿಂತರು. ಸರಿಯಾದ ಸಮಯಕ್ಕೆ ನೆರವಿನ ಹಸ್ತ ಚಾಚುವ ಮೂಲಕ ಒಂದು ಗಟ್ಟಿಯಾದ ಕೌಟುಂಬಿಕ ಬಾಂಧವ್ಯದ ಮಹತ್ವವನ್ನು ತೋರಿಸಿಕೊಟ್ಟರು. ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು” ಎಂದು ಅನಿಲ್ ಅಂಬಾನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಎರಿಕ್ಸನ್ ಸಂಸ್ಥೆಗೆ ಕೊಡಬೇಕಿದ್ದ ಹಣ ನೀಡದೇ ಬಾಕಿ ಉಳಿಸಿಕೊಂಡು ಅನಿಲ್ ಅಂಬಾನಿ ಅವರು ಕೋರ್ಟ್ ಆದೇಶ ಉಲ್ಲಂಘನೆ ಮಾಡಲಾಯಿತೆಂದು ಸುಪ್ರೀಂ ಕೋರ್ಟ್ ಪರಿಗಣಿಸಿತು. ನಾಲ್ಕು ವಾರಗಳಲ್ಲಿ ಎರಿಕ್ಸನ್​ಗೆ ಕೊಡಬೇಕಿರುವ ಬಾಕಿಯನ್ನು ಪಾವತಿಸಬೇಕೆಂದು ಅನಿಲ್ ಅಂಬಾನಿ ಮತ್ತು ಇಬ್ಬರು ಆರ್​ಕಾಂ ನಿರ್ದೇಶಕರಿಗೆ ಸರ್ವೋಚ್ಚ ನ್ಯಾಯಾಲಯ ಆದೇಶ ಹೊರಡಿಸಿತು. ಹಣ ಕೊಡದೇ ಇದ್ದರೆ ಮೂರು ತಿಂಗಳ ಜೈಲು ಶಿಕ್ಷೆ ಎದುರಿಸಬೇಕೆಂದು ಎಚ್ಚರಿಸಿತು. ಸುಪ್ರೀಂ ಕೋರ್ಟ್ ನೀಡಿದ ವಾಯಿದೆ ಮಾರ್ಚ್ 19ಕ್ಕೆ, ಅಂದರೆ ಮಂಗಳವಾರ ಮುಗಿಯುತ್ತದೆ. ಗಡುವಿಗೆ ಒಂದು ದಿನ ಮುಂಚೆಯೇ ಮುಕೇಶ್ ಅಂಬಾನಿ ಅವರು ತಮ್ಮ ಕಿರಿಯ ಸಹೋದರರ ನೆರವಿಗೆ ಧಾವಿಸಿದ್ದಾರೆ. ಇವತ್ತಿನ ಬಾಕಿ ಹಣ ಪಾವತಿಯೊಂದಿಗೆ ಆರ್​ಕಾಂ ಮತ್ತು ಎರಿಕ್ಸನ್ ನಡುವಿನ ವ್ಯಾಜ್ಯ ಅಂತ್ಯಗೊಂಡಂತಾಗಿದೆ.

ರಿಲಾಯನ್ಸ್ ಗ್ರೂಪ್​ ಸಂಸ್ಥೆಯಲ್ಲಿ ಭಿನ್ನಾಭಿಪ್ರಾಯದಿಂದಾಗಿ ಇಬ್ಬರು ಸಹೋದರರು ವ್ಯವಹಾರ ವಿಭಜನೆ ಅಥವಾ ಹಂಚಿಕೆ ಮಾಡಿಕೊಂಡ ನಂತರ ಮುಕೇಶ್ ಅಂಬಾನಿ ಅವರು ತಮ್ಮ ಕಿರಿಯ ಸಹೋದರರ ಸಹಾಯಕ್ಕೆ ಬಂದಿದ್ದು ಇದು ಎರಡನೇ ಬಾರಿ. 2018ರಲ್ಲಿ ಮುಕೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಜಿಯೋ ಇನ್​ಫೋಕಾಮ್ ಸಂಸ್ಥೆಯು ಆರ್​ಕಾಮ್​ನ ನಿಸ್ತಂತು(ವೈರ್​ಲೆಸ್) ಆಸ್ತಿಗಳನ್ನು 3 ಸಾವಿರ ಕೋಟಿ ರೂಗೆ ಖರೀದಿ ಮಾಡಿದ್ದರು. ಇಬ್ಬರು ಸಹೋದರರ ಕಲಹ ನಿಂತ ಕುರುಹು ಆಗ ಸಿಕ್ಕಿತ್ತು.

ಎರಿಕ್ಸನ್​ಗೆ ಕೊಡಬೇಕಿದ್ದ ಬಾಕಿ ಹಣ ಪಾವತಿ ಆಗುತ್ತಿದ್ದಂತೆಯೇ ಆರ್​ಕಾಮ್​ನ ಶೇರುಗಳ ಮೌಲ್ಯ ಸೋಮವಾರ ಶೇ. 9.3ರಷ್ಟು ಹೆಚ್ಚಾಗಿ 4 ರೂ ತಲುಪಿದೆ. ಒಂದು ಕಾಲದಲ್ಲಿ ಭಾರತದ ಎರಡನೇ ಅತಿದೊಡ್ಡ ಸಂಸ್ಥೆ ಎನಿಸಿದ್ದ ರಿಲಾಯನ್ಸ್ ಕಮ್ಯೂನಿಕೇಶನ್ಸ್ ಸಂಸ್ಥೆಯ ಆದಾಯಗಳು ಕಡಿಮೆಗೊಂಡು, ನಷ್ಟ ಹೆಚ್ಚಾಗಿ 46 ಸಾವಿರ ಕೋಟಿ ಕೋಟಿ ರೂ ಸಾಲದ ಹೊರೆ ಬಿದ್ದು, 2017ರ ಅಂತ್ಯದಲ್ಲಿ ತನ್ನ ವೈರ್​ಲೆಸ್ ವ್ಯವಹಾರವನ್ನು ಮುಚ್ಚುವ ಪರಿಸ್ಥಿತಿ ಬಂದಿತ್ತು.

ಆರ್​ಕಾಂ ಸಂಸ್ಥೆಗೆ ನಷ್ಟವಾಗಲು ರಿಲಾಯನ್ಸ್ ಜಿಯೋ ಮಾರುಕಟ್ಟೆ ಪ್ರವೇಶಿಸಿ ಪ್ರೈಸ್ ವಾರ್ ಶುರುವಾಗಿದ್ದೂ ಒಂದು ಕಾರಣವಾಗಿದೆ.

260 ಕೋಟಿ ರೂಪಾಯಿಯ ತನ್ನ ಆದಾಯ ತೆರಿಗೆ ರೀಫಂಡ್​ಗಳ ಮೂಲಕ ಎರಿಕ್ಸನ್​ಗೆ ಬಾಕಿ ಹಣ ಕೊಡಲು ಆರ್​ಕಾಮ್​ನ ಪ್ರಯತ್ನ ಫಲಗೂಡಲಿಲ್ಲ. ಎಸ್​ಬಿಐ ಸೇರಿದಂತೆ ಹಣಕಾಸು ಸಂಸ್ಥೆಗಳು ಆರ್​ಕಾಮ್​ಗೆ ಫಂಡ್ ಬಿಡುಗಡೆ ಮಾಡುವುದಕ್ಕೆ ನ್ಯಾಷನಲ್ ಕಂಪನಿ ಲಾ ಅಪೆಲ್ಲೇಟ್ ಟ್ರಿಬ್ಯುನಲ್(ಎನ್​ಸಿಎಲ್​ಎಟಿ) ಒಪ್ಪಿಗೆ ನೀಡಲಿಲ್ಲ.

ಆರ್​ಕಾಂನ ರಾಷ್ಟ್ರವ್ಯಾಪಿ ನೆಟ್​ವರ್ಕ್​ನ ನಿರ್ವಹಣೆಗೆ 2013ರಲ್ಲಿ ಎರಿಕ್ಸನ್ ಸಂಸ್ಥೆ ಏಳು ವರ್ಷಗಳ ಒಪ್ಪಂದಕ್ಕೆ ಸಹಿ ಮಾಡಿಕೊಂಡಿತು. ಈ ಸಂಬಂಧ ತನಗೆ 1,500 ಕೋಟಿ ರೂ ಬಾಕಿ ಉಳಿಸಿಕೊಂಡಿದೆ ಎಂದು ಆರ್​ಕಾಂ ವಿರುದ್ಧ ಎರಿಕ್ಸನ್ 2017ರಲ್ಲಿ ಕೋರ್ಟ್ ಮೆಟ್ಟಿಲೇರಿತು.

ಈ ಪ್ರಕರಣವು ನ್ಯಾಷನಲ್ ಕಂಪನಿ ಲಾ ಟ್ರಿಬ್ಯುನಲ್​ನಿಂದ ನ್ಯಾಷನಲ್ ಕಂಪನಿ ಲಾ ಅಪೆಲ್ಲೇಟ್ ಟ್ರಿಬ್ಯುನಲ್​ಗೆ ವರ್ಗಾವಣೆಯಾಯಿತು. ಸೆಪ್ಟೆಂಬರ್ 30ರೊಳಗೆ ಆರ್​ಕಾಂ ಸಂಸ್ಥೆಯು 550 ಕೋಟಿ ರೂಪಾಯಿಯನ್ನು ಎರಿಕ್ಸನ್​ಗೆ ಕೊಡಬೇಕೆಂದು ತೀರ್ಪು ಬಂದಿತು. ಆದರೆ, ಕೋರ್ಟ್ ಗಡುವು ನೀಡಿದ ದಿನದೊಳಗೆ ಆರ್​ಕಾಂ ಹಣ ಪಾವತಿ ಮಾಡದೇ ಹೋದಾಗ ಎರಿಕ್ಸನ್ ಸಂಸ್ಥೆಯು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ಆಗ ಸರ್ವೋಚ್ಚ ನ್ಯಾಯಾಲಯವು 2018ರ ಡಿಸೆಂಬರ್​ಗೆ ಮತ್ತೊಂದು ವಾಯಿದೆ ನೀಡಿತು. ಆರ್​ಕಾಂ ಆಗಲೂ ಪಾವತಿ ಮಾಡಲಿಲ್ಲ.

550 ಕೋಟಿ ರೂ ಮೊತ್ತ ಪಾವತಿ ಆಗದೇ ಹೋದಾಗ ಆರ್​ಕಾಂ ಛೇರ್ಮನ್ ಅನಿಲ್ ಅಂಬಾನಿ ಹಾಗೂ ಸಂಸ್ಥೆಯ ಎರಡು ಘಟಕಗಳ ವಿರುದ್ಧ ಎರಿಕ್ಸನ್ ಕಂಪನಿಯು ಮೂರು ನ್ಯಾಯಾಂಗ ನಿಂದನೆಯ ಅರ್ಜಿ ಹಾಕಿತು.

ತನ್ನ ಬಳಿ ಹಣ ಇದ್ದರೂ ಎರಿಕ್ಸನ್ ಸಂಸ್ಥೆಯ ಬಾಕಿ ಹಣ ಪಾವತಿ ಮಾಡದೇ ಅನಿಲ್ ಅಂಬಾನಿ ಅಪರಾಧಿಯಾಗಿದ್ದಾರೆಂದು ಕೋರ್ಟ್ ಫೆಬ್ರುವರಿಯಲ್ಲಿ ಪರಿಗಣಿಸಿತು. ಕೋರ್ಟ್ ಆದೇಶದ ಪ್ರಕಾರ ಬಡ್ಡಿ ಸಮೇತ ಬಾಕಿ ಹಣ ಪಾವತಿಗೆ ಮಾರ್ಚ್ 19 ಕೊನೆಯ ದಿನವಾಗಿತ್ತು.

Comments are closed.