ರಾಷ್ಟ್ರೀಯ

ಬಿಹಾರದಲ್ಲಿ ಬಿಜೆಪಿ-ಜೆಡಿಯು 50-50 ಸೂತ್ರ!

Pinterest LinkedIn Tumblr


ನವದೆಹಲಿ: ಬಿಹಾರದಲ್ಲಿ ಲೋಕಸಭೆ ಚುನಾವಣೆಗೆ ಬಿಜೆಪಿ ಮತ್ತು ಜೆಡಿಯು ಪಕ್ಷಗಳು 50:50 ಸೂತ್ರದೊಂದಿಗೆ ಸೀಟು ಹಂಚಿಕೆ ಮಾಡಿಕೊಂಡಿವೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೇ ಈ ಸೂತ್ರದ ಮೇರೆಗೆ ಸೀಟು ಹಂಚಿಕೆ ಮಾಡಿದ್ದಾರೆ. ಅಲ್ಲದೇ ಬಿಹಾರದ 40 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಮತ್ತು ಜೆಡಿಯು ಪಕ್ಷಗಳು ತಲಾ 17 ಸೀಟುಗಳಲ್ಲಿ ಕಣಕ್ಕಿಳಿಯಲಿವೆ. ಇನ್ನುಳಿದ 6 ಕ್ಷೇತ್ರಗಳನ್ನು ಇತರೆ ಎನ್​ಡಿಎ ಮಿತ್ರಪಕ್ಷಗಳಿಗೆ ಬಿಟ್ಟುಕೊಟ್ಟಿವೆ ಎನ್ನಲಾಗಿದೆ. ಈ ಬಗ್ಗೆ ಅಮಿತ್​​ ಶಾ ಅವರೇ ಸುದ್ದಿಗೋಷ್ಠಿ ನಡೆಸಿ ಅಧಿಕೃತವಾಗಿ ಘೋಷಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಬಿಹಾರದ 30 ಕ್ಷೇತ್ರಗಳ ಪೈಕಿ 29ರಲ್ಲಿ ಕಣಕ್ಕಿಳಿದು ಬರೋಬ್ಬರಿ 22 ಸ್ಥಾನಗಳನ್ನ ಜಯಿಸಿತ್ತು. ಅದಾದ ನಂತರ ಬಿಹಾರದಲ್ಲಿ ಜೆಡಿಯುಗಿಂತಲೂ ತಾನೇ ದೊಡ್ಡಣ್ಣನೆಂದು ಬಿಜೆಪಿ ಬೀಗುತ್ತಾ ಬಂದಿತ್ತು. ಈ ಹಿನ್ನೆಲೆಯಲ್ಲಿ ಇವತ್ತು ಅಮಿತ್ ಶಾ ಅವರು 50-50 ಫಾರ್ಮುಲಾಗೆ ಒಪ್ಪಿಕೊಂಡಿರುವುದು ಜೆಡಿಯು ಪಕ್ಷಕ್ಕೆ ಸಿಕ್ಕ ಚುನಾವಣಾ ಪೂರ್ವ ಗೆಲುವೆಂದು ಬಣ್ಣಿಸಲಾಗುತ್ತಿದೆ.

ಈ ಹಿಂದಿನ ಲೋಕಸಭಾ ಚುನಾವಣೆಯಲ್ಲಿ 3 ಕ್ಷೇತ್ರಗಳನ್ನ ಗೆದ್ದಿದ್ದ ಆರ್​ಎಲ್​ಎಸ್​ಪಿ ಈ ಬಾರಿ ಈ ಬಾರಿ ಕನಿಷ್ಠ 3 ಕ್ಷೇತ್ರಗಳನ್ನಾದರೂ ನಿರೀಕ್ಷಿಸಿತ್ತು. ಬಳಿಕ ಉಪೇಂದ್ರ ಕುಶ್ವಾಹ ಅವರಿಗೆ ಅಮಿತ್ ಶಾ ಅವರ ಫಾರ್ಮುಲಾ ನಿರಾಸೆ ತಂದಿತ್ತು. ಈ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದ ಉಪೇಂದ್ರ ಕುಶ್ವಾಹ ಅವರ ಪಕ್ಷವು ಎನ್​ಡಿಎ ಮೈತ್ರಿಕೂಟದಿಂದಲೇ ಹೊರನಡೆಯಿತು.

ಸೈದ್ಧಾಂತಿಕವಾಗಿಯೂ ಬಿಜೆಪಿ ಜೊತೆ ಸಾಮ್ಯತೆ ಇಲ್ಲದ ಅವರ ಪಕ್ಷಕ್ಕೆ ಎನ್​ಡಿಎ ಬಿಟ್ಟು ಹೋಗುವುದು ಕಷ್ಟವಾಗಿರಲಿಲ್ಲ. ನಂತರ ಎನ್​​ಡಿಎ ಸಖ್ಯ ತೊರೆದ ಉಪೇಂದ್ರ ಕುಶ್ವಾಹ ಪಕ್ಷ ಇದೀಗ ಕಾಂಗ್ರೆಸ್​​, ಆರ್​ಜೆಡಿ ಜತೆಗೆ ಮೈತ್ರಿ ಮಾಡಿಕೊಂಡಿದೆ. ಹೀಗಾಗಿ ಈ ಬಾರಿ ಬಿಹಾರದಲ್ಲಿನ ಲೋಕಸಭಾ ಕದನ ಭಾರೀ ಕುತೂಹಲ ಮೂಡಿಸಿದೆ. ಅಲ್ಲದೇ ಬಿಜೆಪಿ-ಜೆಡಿಯು ಮೈತ್ರಿಗೆ ಕಾಂಗ್ರೆಸ್​​​ ಮತ್ತು ಆರ್​​ಜೆಡಿ ಮೈತ್ರಿ ಸೆಡ್ಡು ಹೊಡೆಯಲಿದೆಯಾ? ಕಾದು ನೋಡಬೇಕಿದೆ.

Comments are closed.