ರಾಷ್ಟ್ರೀಯ

ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ನಿಧನ!

Pinterest LinkedIn Tumblr


ಪಣಜಿ: ಕ್ಯಾನ್ಸರ್​ನಿಂದ ಬಳಲುತ್ತಿದ್ದ ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಅವರು ಇಂದು ವಿಧಿವಶರಾಗಿದ್ದಾರೆ. ಎರಡು ದಿನಗಳ ಹಿಂದಷ್ಟೇ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿತ್ತು. ಇವತ್ತು ಅವರ ಆರೋಗ್ಯ ಇನ್ನಷ್ಟು ಹದಗೆಟ್ಟಿತ್ತು. ಇವತ್ತು ಇಲ್ಲಿಯ ಆಸ್ಪತ್ರೆಯಲ್ಲಿ ಪರ್ರಿಕರ್ ಕೊನೆಯುಸಿರೆಳೆದಿದ್ದಾರೆ.

63 ವರ್ಷದ ಪರ್ರಿಕರ್ ಅವರಿಗೆ ವರ್ಷದ ಹಿಂದಷ್ಟೇ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಸಾಕಷ್ಟು ಕಾಲ ಅವರು ಆಸ್ಪತ್ರೆಯಲ್ಲೇ ಇದ್ದು ಜೀವನ್ಮರಣ ಹೋರಾಟ ನಡೆಸಿದ್ದರು. ಗೋವಾ, ಮುಂಬೈ, ದೆಹಲಿ, ನ್ಯೂಯಾರ್ಕ್​ ನಗರಗಳಲ್ಲಿನ ಆಸ್ಪತ್ರೆಗಳಲ್ಲಿ ಅವರು ಚಿಕಿತ್ಸೆ ಪಡೆದಿದ್ದರು. ಅನಾರೋಗ್ಯ ಸ್ಥಿತಿಯಲ್ಲೇ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡು ಆಡಳಿತ ವ್ಯವಹಾರ ನಡೆಸುತ್ತಿದ್ದರು. ಎರಡು ದಿನದ ಹಿಂದೆ ಅವರ ಆರೋಗ್ಯ ಇನ್ನಷ್ಟು ಕ್ಷೀಣಗೊಂಡು ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು.

ಮನೋಹರ್ ಪರ್ರಿಕರ್ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಂತಾಪ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಜೀವದದಲ್ಲಿ ದಕ್ಷತೆಗೆ ಅವರು ಪ್ರತೀಕವಾಗಿದ್ದರು. ಗೋವಾ ಮತ್ತು ಭಾರತಕ್ಕೆ ಅವರು ನೀಡಿದ ಸೇವೆಯನ್ನು ಮರೆಯಲು ಸಾಧ್ಯವಿಲ್ಲ ಎಂದು ಕೋವಿಂದ್ ಅಭಿಪ್ರಾಯಪಟ್ಟಿದ್ಧಾರೆ.

ಮನೋಹರ್ ಪರ್ರಿಕರ್ ಅವರು ಎರಡು ಬಾರಿ ಗೋವಾ ಸಿಎಂ ಆಗಿದ್ದವರು. ಈ ಬಾರಿ ಅವರು ಗೋವಾ ಸಿಎಂ ಆಗುವ ಮುನ್ನ ಕೇಂದ್ರದ ರಕ್ಷಣಾ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಗೋವಾದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗುವ ಸೂಚನೆ ಬಂದಾಗ ಕೇಂದ್ರದ ಸೇವೆಯನ್ನು ತ್ಯಜಿಸಿ ಸಿಎಂ ಆಗಿ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರ ಹಿಡಿದಿದ್ದರು. ಈಗ ಪರ್ರಿಕರ್ ಸಾವಿನ ನಂತರ ಗೋವಾ ರಾಜಕೀಯದಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಟಿಯಾಗುವ ಸಾಧ್ಯತೆ ಇದೆ.

ಐಐಟಿ ಶಿಕ್ಷಿತ ಹಾಗೂ ಆರೆಸ್ಸೆಸ್ ಕಾರ್ಯಕರ್ತ:

ಗೋವಾದ ಮಪೂಸಾದಲ್ಲಿ ಜನಿಸಿದ ಮನೋಹರ್ ಪರ್ರಿಕರ್ ಅವರು ಬಾಲ್ಯದಿಂದಲೇ ಆರೆಸ್ಸೆಸ್ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದರು. 26ನೇ ವಯಸ್ಸಿನಲ್ಲಿ ಸಂಘದ ಸಂಚಾಲಕರಾಗಿದ್ದ ಅವರು ರಾಮಜನ್ಮಭೂಮಿ ಆಂದೋಲನದಲ್ಲಿ ಸಕ್ರಿಯರಾಗಿ ಪಾಲ್ಗೊಂಡಿದ್ದರು.

1978ರಲ್ಲಿ ಬಾಂಬೆ ಐಐಟಿಯಲ್ಲಿ ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದ ಅವರು ಶಾಸಕರಾದ ಮೊದಲ ಐಐಟಿ ಪದವೀಧರರೆನಿಸಿದ್ದಾರೆ.

Comments are closed.