ರಾಷ್ಟ್ರೀಯ

ಮಾಜಿ ಸಚಿವ, ಜಗನ್ಮೋಹನ್ ರೆಡ್ಡಿ ಚಿಕ್ಕಪ್ಪನ ಹತ್ಯೆ; ಎಸ್ಐಟಿ ತನಿಖೆಗೆ ಆದೇಶ

Pinterest LinkedIn Tumblr


ಅಮರಾವತಿ: ವೈಎಸ್​ಆರ್ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ವೈ.ಎಸ್. ವಿವೇಕಾನಂದ ರೆಡ್ಡಿ ಅವರನ್ನು ನಿನ್ನೆ ರಾತ್ರಿ ಆಂಧ್ರದ ಕಡಪ ಜಿಲ್ಲೆಯಲ್ಲಿ ಹತ್ಯೆಗೈಯಲಾಗಿದೆ. ವಿವೇಕಾನಂದ ರೆಡ್ಡಿ ಅವರು ಮಾಜಿ ಸಿಎಂ ವೈ.ಎಸ್. ರಾಜಶೇಖರ ರೆಡ್ಡಿ ಅವರ ಸಹೋದರರಾಗಿದ್ಧಾರೆ. ಅಂದರೆ, ವೈಎಸ್ಸಾರ್ ಕಾಂಗ್ರೆಸ್ ಮುಖ್ಯಸ್ಥ ಜಗನ್ಮೋಹನ್ ರೆಡ್ಡಿ ಅವರ ಚಿಕ್ಕಪ್ಪರಾಗಿದ್ದಾರೆ.

ಕಡಪದ ಪುಲಿವೆಂದುಲದಲ್ಲಿರುವ ತಮ್ಮ ನಿವಾಸದ ಸ್ನಾನದ ಮನೆಯಲ್ಲಿ ಇವತ್ತು ಬೆಳಗ್ಗೆ ವೈ.ಎಸ್. ವಿವೇಕಾನಂದ ರೆಡ್ಡಿ ಅವರ ದೇಹವು ರಕ್ತದ ಮಡುವಿನಲ್ಲಿ ಪತ್ತೆಯಾಗಿತ್ತು. ಇದನ್ನು ಮೊದಲ ನೋಡಿದವರು ಅವರ ಆಪ್ತ ಸಹಾಯಕ ಕೃಷ್ಣ ರೆಡ್ಡಿ. ಕೂಡಲೇ ಅವರು ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ ದೂರನ್ನೂ ಕೊಟ್ಟಿದ್ಧಾರೆ. ರಾತ್ರಿ 11:30ರಿಂದ ಬೆಳಗ್ಗೆ 5 ಗಂಟೆಯ ಅವಧಿಯಲ್ಲಿ ಈ ಹತ್ಯೆ ನಡೆದಿರಬಹುದೆಂದು ಫೋರೆನ್ಸಿಕ್ ವರದಿಗಳು ಹೇಳುತ್ತಿವೆ. ಕಡಪ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿವೇಕಾನಂದ ರೆಡ್ಡಿ ಅವರ ಮೃತ ದೇಹದಲ್ಲಿ ಹಲವು ಗಾಯದ ಗುರುತುಗಳಿವೆ. ಪೋಸ್ಟ್ ಮಾರ್ಟಮ್ ವರದಿಗಳು ಕೂಡ ವಿವೇಕಾನಂದರನ್ನು ಹತ್ಯೆಗೈದು ಸಾಯಿಸಲಾಗಿರುವುದನ್ನು ಖಚಿತಪಡಿಸಿವೆ.

ವಿವೇಕಾನಂದ ರೆಡ್ಡಿ ಅವರ ಹತ್ಯೆ ಬಗ್ಗೆ ಸಿಎಂ ಚಂದ್ರಬಾಬು ನಾಯ್ಡು ಆಘಾತ ವ್ಯಕ್ತಪಡಿಸಿದ್ದಾರೆ. ಹಿರಿಯ ಐಪಿಎಸ್ ಅಧಿಕಾರಿ ಅಮಿತ್ ಗರ್ಗ್ ನೇತೃತ್ವದಲ್ಲಿ ಎಸ್​ಐಟಿ ತಂಡವನ್ನು ರಚಿಸಿ ಪ್ರಕರಣದ ತನಿಖೆಯ ಜವಾಬ್ದಾರಿ ನೀಡಿದ್ದಾರೆ. ತ್ವರಿತವಾಗಿ ತನಿಖೆ ನಡೆಸಿ ಆದಷ್ಟೂ ಬೇಗ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿಗಳು ಆಜ್ಞಾಪಿಸಿದ್ದಾರೆ.

ವೈಎಸ್​ಆರ್ ಕಾಂಗ್ರೆಸ್ ಪಕ್ಷವು ಈ ಹತ್ಯೆ ಪ್ರಕರಣದಲ್ಲಿ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಆಗ್ರಹಿಸಿದೆ. “ರಾಜ್ಯದಲ್ಲಿ ಕಾನೂನು ಮುರಿದುಬಿದ್ದಿದೆ. ರಾಷ್ಟ್ರಪತಿ ಮತ್ತು ರಾಜ್ಯಪಾಲರು ಕೂಡಲೇ ಮಧ್ಯಪ್ರವೇಶಿಸಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸುತ್ತೇವೆ” ಎಂದು ವೈಎಸ್ಸಾರ್ ಪಕ್ಷದ ಮಲ್ಲಾಡಿ ವಿಷ್ಣು ಎಚ್ಚರಿಕೆ ನೀಡಿದ್ದಾರೆ.

ವೈಎಸ್ಸಾರ್ ಕಾಂಗ್ರೆಸ್ ಪಕ್ಷದ ಆರೋಪಕ್ಕೆ ಆಡಳಿತಾರೂಢ ಟಿಡಿಪಿ ಪಕ್ಷದವರು ತಿರುಗೇಟು ನೀಡಿದ್ಧಾರೆ. ರಾಜ್ಯದಲ್ಲಿ ನಡೆಯುವ ಎಲ್ಲಾ ಘಟನೆಗಳಿಗೂ ಟಿಡಿಪಿಯನ್ನೇ ದೂಷಿಸುವ ಪರಿಪಾಠ ಬೆಳೆಸಿಕೊಂಡಿದ್ಧಾರೆ ಎಂದು ಹರಿಹಾಯ್ದ ಸಚಿವ ಆದಿನಾರಾಯಣ ರೆಡ್ಡಿ ಅವರು, ಕಡಪದ ಹಾಲಿ ಸಂಸದ ವೈ.ಎಸ್. ಅವಿನಾಶ್ ರೆಡ್ಡಿ ಮತ್ತು ವಿವೇಕಾನಂದ ರೆಡ್ಡಿ ಮಧ್ಯೆ ಭಿನ್ನಾಭಿಪ್ರಾಯವಿತ್ತೆಂದೂ ಉಲ್ಲೇಖಿಸಿ ವೈಎಸ್ಸಾರ್ ಪಕ್ಷದ ಆಂತರಿಕ ಕಲಹದತ್ತ ಬೊಟ್ಟು ಮಾಡಿದ್ದಾರೆ.

Comments are closed.