ರಾಷ್ಟ್ರೀಯ

ಶಸ್ತ್ರಾಸ್ತ್ರ ಖರೀದಿಯಲ್ಲಿ 2ನೇ ಸ್ಥಾನಕ್ಕೆ ಜಾರಿದ ಭಾರತ!

Pinterest LinkedIn Tumblr


ನವದೆಹಲಿ: ಶಸ್ತ್ರಾಸ್ತ್ರ ಖರೀದಿಯಲ್ಲಿ ಮುಂಚೂಣಿಯಲ್ಲಿದ್ದ ಭಾರತ ಈಗ ಎರಡನೇ ಸ್ಥಾನಕ್ಕೆ ಕುಸಿದಿದ್ದು, ಸೌದಿ ಆರೇಬಿಯಾ ಮೊದಲ ಸ್ಥಾನವನ್ನು ಪಡೆದುಕೊಂಡಿದೆ ಎಂದು ನೂತನ ಅಧ್ಯಯನ ತಿಳಿಸಿದೆ.

ಸ್ಟಾಕ್ ಹೋಮ್ ಇಂಟರ್ ನ್ಯಾಷನಲ್ ಪೀಸ್ ರಿಸರ್ಚ್ ಇನ್ ಸ್ಟಿಟ್ಯೂಟ್(ಎಸ್‍ಐಪಿಆರ್‍ಐ) ವಿಶ್ವದ ಶಸ್ತ್ರಾಸ್ತ್ರ ಮಾರುಕಟ್ಟೆಯಲ್ಲಿ ಯಾವ ದೇಶ ಎಷ್ಟು ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುತ್ತಿದೆ ಎನ್ನುವ ವರದಿಯನ್ನು ಬಿಡುಗಡೆ ಮಾಡಿದೆ. ಒಟ್ಟು 155 ದೇಶಗಳನ್ನು ಪರಿಗಣಿಸಿ ಈ ಅಧ್ಯಯನ ನಡೆಸಲಾಗಿದೆ.

2009-13ರ ಜಾಗತಿಕ ಒಟ್ಟು ಶಸ್ತ್ರಾಸ್ತ್ರ ಖರೀದಿಯಲ್ಲಿ ಸೌದಿ ಅರೇಬಿಯಾ ಶೇ.4.3 ರಷ್ಟು ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಂಡಿದ್ದರೆ, 2014-2018ರ ಅವಧಿಯಲ್ಲಿ ಶೇ.12 ರಷ್ಟು ಶಶ್ತ್ರಾಸ್ತ್ರಗಳನ್ನು ಆಮದು ಮಾಡಿಕೊಂಡಿದೆ. ಭಾರತ 2009-13ರ ಅವಧಿಯಲ್ಲಿ ಶೇ.13 ರಷ್ಟು ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡಿದ್ದರೆ 2014-18ರ ಅವಧಿಯಲ್ಲಿ ಶೇ.9.5ರಷ್ಟು ಖರೀದಿ ಮಾಡಿತ್ತು. ಈ ಎರಡು ಅವಧಿಗೆ ಹೋಲಿಕೆ ಮಾಡಿದರೆ ಸೌದಿ ಅರೇಬಿಯಾ ಖರೀದಿ ಪ್ರಮಾಣ ಶೇ.192ರಷ್ಟು ಹೆಚ್ಚಳವಾಗಿದ್ದರೆ, ಭಾರತದ ಪ್ರಮಾಣ ಶೇ.24 ರಷ್ಟು ಕಡಿಮೆಯಾಗಿದೆ.

ಭಾರತ ಈಗ ಮೇಕ್ ಇನ್ ಇಂಡಿಯಾ ಅಭಿಯಾನದಲ್ಲಿ ಶಸ್ತ್ರಾಸ್ತ್ರಗಳನ್ನು ಉತ್ಪಾದಿಸಲು ಮುಂದಾಗುತ್ತಿದೆ. ಇದರ ಜೊತೆಯಲ್ಲಿ ರಕ್ಷಣಾ ಒಪ್ಪಂದಗಳು ನಡೆದ ಬಳಿಕ ಶಸ್ತ್ರಾಸ್ತಗಳು ಭಾರತ ಸೇರಲು ತಡವಾಗುತ್ತಿರುವ ಹಿನ್ನೆಲೆಯಲ್ಲಿ ಭಾರತ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ ಎಂದು ವರದಿ ತಿಳಿಸಿದೆ.

ಭಾರತ ಫ್ರಾನ್ಸ್ ರಫೇಲ್ ಖರೀದಿ ಸಂಬಂಧ ನಡೆಸಿದ 59 ಸಾವಿರ ಕೋಟಿ ರೂ. ಒಪ್ಪಂದ, ರಷ್ಯಾ ಜೊತೆ ಎಸ್-400 ಟ್ರಯಫ್ ವಾಯು ರಕ್ಷಣಾ ವ್ಯವಸ್ಥೆ ಕ್ಷಿಪಣಿ ಖರೀದಿ ಸಂಬಂಧ ನಡೆಸಿದ 40 ಸಾವಿರ ಕೋಟಿ ರೂ. ಒಪ್ಪಂದಗಳನ್ನು ಈ ಅಧ್ಯಯನಕ್ಕೆ ಪರಿಗಣಿಸಿಲ್ಲ. ರಫೇಲ್ ವಿಮಾನಗಳು 2019ರ ನವೆಂಬರ್ ನಲ್ಲಿ ಭಾರತಕ್ಕೆ ಬರಲಿದ್ದರೆ, ಎಸ್40 ಕ್ಷಿಪಣಿ ರಕ್ಷಣಾ ವ್ಯವಸ್ಥೆ 2020 ಅಕ್ಟೋಬರ್ ಮತ್ತು ಏಪ್ರಿಲ್ 2023ರ ಒಳಗಡೆ ಭಾರತಕ್ಕೆ ಬರಲಿದೆ.

ಭಾರತಕ್ಕೆ ಆಮದಾಗುವ ಶಸ್ತ್ರಾಸ್ತ್ರಗಳ ಪೈಕಿ ಶೇ.58 ರಷ್ಟು ಪಾಲು ರಷ್ಯಾ, ಶೇ.15 ರಷ್ಟು ಇಸ್ರೇಲ್, ಶೇ.12 ರಷ್ಟು ಅಮೆರಿಕದ ಕಂಪನಿಗಳ ಪಾಲಿದೆ. ಸೌದಿ ಅರೇಬಿಯಾಗೆ ಶೇ.68 ಅಮೆರಿಕ, ಶೇ.16 ಇಂಗ್ಲೆಂಡ್, ಶೇ.4.3 ಫ್ರಾನ್ಸ್ ಕಂಪನಿಗಳಿಂದ ರಫ್ತಾಗುತ್ತಿದೆ.

ಸೌದಿ ಅರೇಬಿಯಾ, ಭಾರತದ ಬಳಿಕ ಟಾಪ್-10 ಪಟ್ಟಿಯಲ್ಲಿ ಈಜಿಪ್ಟ್(3), ಆಸ್ಟ್ರೇಲಿಯಾ(4), ಅಲ್ಜೀರಿಯಾ(5), ಚೀನಾ(6), ಯುಎಇ(7), ಇರಾಕ್(8), ದಕ್ಷಿಣ ಕೊರಿಯಾ(9), ವಿಯೆಟ್ನಾ(10), ಪಾಕಿಸ್ತಾನ(11) ನಂತರದ ಸ್ಥಾನವನ್ನು ಪಡೆದಿದೆ.

ಪಾಕಿಸ್ತಾನ 2009-2013ರ ಅವಧಿಯಲ್ಲಿ ಒಟ್ಟು ಶೇ.4.8 ರಷ್ಟು ಖರೀದಿಸಿದ್ದರೆ, 2014-18ರ ಅವಧಿಯಲ್ಲಿ ಒಟ್ಟು ಶೇ.2.7ರಷ್ಟು ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡಿದೆ. ಪಾಕಿಸ್ತಾನ ಚೀನಾದಿಂದ ಅತಿ ಹೆಚ್ಚು ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಿದೆ. ಚೀನಾ ಪಾಲು ಶೇ.70 ರಷ್ಟು ಇದ್ದರೆ, ಅಮೆರಿಕ ಶೇ.8.9, ರಷ್ಯಾ ಪಾಲು ಶೇ.6.0ರಷ್ಟಿದೆ.

ಇಸ್ರೇಲಿನಿಂದ ಅತಿ ಹೆಚ್ಚು ಶೇ.15 ರಷ್ಟು ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಭಾರತ ಮಾತ್ರ ಖರೀದಿಸುತ್ತಿದೆ. ಶಸ್ತ್ರಾಸ್ತ್ರಗಳನ್ನು ಖರೀದಿಸುವ ಟಾಪ್ 15 ದೇಶಗಳ ಪೈಕಿ ಪಾಕಿಸ್ತಾನ ಒಂದನ್ನು ಹೊರತು ಪಡಿಸಿ ಬೇರೆ ಯಾವುದೇ ದೇಶ ಚೀನಾದಿಂದ ರಕ್ಷಣಾ ಸಾಮಾಗ್ರಿಗಳನ್ನು ಆಮದು ಮಾಡುತ್ತಿಲ್ಲ ಎಂದು ವರದಿ ತಿಳಿಸಿದೆ.

Comments are closed.