ರಾಷ್ಟ್ರೀಯ

ರಾಹುಲ್​​ ಗಾಂಧಿ ಸಮ್ಮುಖದಲ್ಲಿ ಹಾರ್ದಿಕ್​​ ಪಟೇಲ್​​​ ಕಾಂಗ್ರೆಸ್​​​ ಸೇರ್ಪಡೆ!

Pinterest LinkedIn Tumblr


ನವದೆಹಲಿ: ಗುಜರಾತ್​​​​ ಪಾಟೀದಾರ್ ಸಮುದಾಯದ ಮೀಸಲಾತಿ ಹೋರಾಟಗಾರ ಹಾರ್ದಿಕ್​​​​ ಪಟೇಲ್ ಇಂದು ಕಾಂಗ್ರೆಸ್​​ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್​ ಅಧ್ಯಕ್ಷ ರಾಹುಲ್​​ ಗಾಂಧಿಯವರ ಸಮ್ಮುಖದಲ್ಲಿಯೇ ಹಾರ್ದಿಕ್​​​ ಪಕ್ಷ ಸೇರಿದ್ದು, ಸ್ಥಳೀಯ ನಾಯರಿಂದ ಭರ್ಜರಿ ಸ್ವಾಗತ ಸಿಕ್ಕಿದೆ. ಇಂದು ರಾಹುಲ್​​ ಅವರೇ ಖುದ್ದು ಹಾರ್ದಿಕ್​​​ ಕೊರಳಿಗೆ ಕಾಂಗ್ರೆಸ್​​ ಶಾಲು ಹಾಕುವ ಮುಖೇನ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.

ಇಂದು ಅಹಮದಾಬಾದಿನಲ್ಲಿ ಕಾಂಗ್ರೆಸ್​​ ಕಾರ್ಯಕಾರಿ ಸಮಿತಿ ಸಭೆ ನಡೆಸಲಾಗಿತ್ತು. ಇದಾದ ಬಳಿಕ ಗಾಂಧಿ ನಗರದ ಮೈದಾನವೊಂದರಲ್ಲಿ ಬೃಹತ್​​​ ಸಮಾವೇಶ ಆಯೋಜಿಸಲಾಗಿತ್ತು. ಈ ಸಮಾವೇಶದಲ್ಲಿ ರಾಹುಲ್​​​ ಗಾಂಧಿಯವರ ಸಮ್ಮುಖದಲ್ಲಿಯೇ ಹಾರ್ದಿಕ್​​​ ಕಾಂಗ್ರೆಸ್​​ ಸೇರ್ಪಡೆಯಾಗಿದ್ದಾರೆ. ಅಲ್ಲದೇ ಈ ಯುವ ನಾಯಕನಿಗೆ ಸ್ಥಳೀಯ ಕಾಂಗ್ರೆಸ್ಸಿಗರಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.

ಪಾಟೀದಾರ್​​ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಆಗ್ರಹಿಸಿ ಆಡಳಿತರೂಢ ಬಿಜೆಪಿ ವಿರುದ್ಧ ಹಾರ್ದಿಕ್​​​ ಹೋರಾಟದ ಸಮರವನ್ನೇ ಸಾರಿದ್ದರು. ಇದೀಗ ತನ್ನ ಸಮುದಾಯದ ಆಶಯಗಳನ್ನು ಈಡೇರಿಸುವುದಕ್ಕಾಗಿ ಕಾಂಗ್ರೆಸ್​ ಸೇರಲಿದ್ದೇನೆ. ಪಕ್ಷ ಬಯಸಿದರೇ ಜಾಮ್ ನಗರ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಕಣಕ್ಕಿಳಿಯಲಿದ್ದೇನೆ ಎಂದಿದ್ದರು ಹಾರ್ದಿಕ್ ಪಟೇಲ್​​..

ನಾನು ನನ್ನ ಸಮುದಾಯಕ್ಕಷ್ಟೇ ಅಲ್ಲದೇ ಮಹಿಳಾ ಸುರಕ್ಷತೆ, ರೈತರ ಸಮಸ್ಯೆ, ಕೃಷಿ ಬಿಕ್ಕಟ್ಟು ಬಗೆಹರಿಸಲು ಸಕ್ರಿಯ ರಾಜಕೀಯಕ್ಕೆ ಬಂದಿದ್ದೇನೆ. ಗುಜರಾತ್‌ನ ಜಾಮ್‌ನಗರ್ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಯುವ ನಿರ್ಧಾರ ತೆಗೆದುಕೊಂಡಿದ್ದೇನೆ. ಪ್ರಸ್ತುತ ಜಾಮ್‌ನಗರ್ ಲೋಕಸಭಾ ಕ್ಷೇತ್ರವನ್ನು ಬಿಜೆಪಿಯ ಪೂನಂಬೆನ್ ಮಾಧಮ್ ಪ್ರತಿನಿಧಿಸುತ್ತಿದ್ದಾರೆ. ಇವರ ವಿರುದ್ಧವೇ ಕಾಂಗ್ರೆಸ್ಸಿನಿಂದ ಕಣಕ್ಕಿಳಿಯಲಿದ್ದೇನೆ ಎಂದು ಟ್ವೀಟ್​​​ನಲ್ಲಿ ತಿಳಿಸಿದ್ದರು.

ನೀವು ಪಟೇಲ್​​ ಸಮುದಾಯಕ್ಕೆ ಮಾತ್ರ ಸೀಮಿತರಾಗಿದ್ದೀರಿ ಎಂದು ಹೇಳಲಾಗುತ್ತಿದೆ. ಹೀಗಾಗಿ ನಿಮಗೆ ಬೇರೆ ಸಮುದಾಯದ ಬೆಂಬಲ ಸಿಗಲಿದೆಯೇ ಎಂದು ಮಾಧ್ಯಮದವರು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ್ದ ಹಾರ್ದಿಕ್​​​ ಪಟೇಲ್​​ “ನಾನು ಕೇವಲ ಪಟೇಲ್ ಸಮುದಾಯದವರಿಗಾಗಿ ಹೋರಾಟ ನಡೆಸಿಲ್ಲ. ರೈತರು, ಯುವಜನಾಂಗ ಸೇರಿದಂತೆ ಬಡವರ ಪರವಾಗಿಯೂ ಹೋರಾಟ ಮಾಡಿದ್ದೇನೆ. ನನ್ನ ಹೋರಾಟದಿಂದಲೇ ಇಲ್ಲಿನ ಬಿಜೆಪಿ ಸರ್ಕಾರ ಜನಪರ ನಿರ್ಧಾರ ತೆಗೆದುಕೊಳ್ಳುತ್ತಿದೆ. ಹೀಗಾಗಿ ಗುಜರಾತ್​​​ ಜನತೆ ನನ್ನನ್ನು ಬೆಂಬಲಿಸಲಿದ್ದಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

Comments are closed.