ರಾಷ್ಟ್ರೀಯ

ಭಾರತೀಯ ಸೇನಾ ಯೋಧನ ಅಪಹರಣ ಆಗಿಲ್ಲ, ರಜೆ ಮೇಲೆ ತೆರಳಿದ್ದರು: ರಕ್ಷಣಾ ಸಚಿವಾಲಯ

Pinterest LinkedIn Tumblr

ನವದೆಹಲಿ: ಸೇನಾ ಯೋಧ ಮೊಹಮ್ಮದ್ ಯಾಸೀನ್ ನ ಅಪಹರಣವಾಗಿದೆ ಎಂದು ಮಾಧ್ಯಮಗಳಲ್ಲಿ ಬಂದಿರುವ ವರದಿಗಳು ತಪ್ಪಾಗಿದ್ದು ಅವರು ರಜೆ ಮೇಲೆ ತೆರಳಿದ್ದರು ಎಂದು ರಕ್ಷಣಾ ಸಚಿವಾಲಯ ಶನಿವಾರ ಪ್ರಕಟಣೆ ಹೊರಡಿಸಿದೆ.

ಶಸ್ತ್ರಸಜ್ಜಿತ ಉಗ್ರರು ಯಾಸೀನ್ ನನ್ನು ಕೇಂದ್ರ ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿರುವ ಆತನ ಮನೆಯಿಂದ ಅಪಹರಿಸಿದ್ದಾರೆ ಎಂದು ನಿನ್ನೆ ಸಂಜೆ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.

ಈ ಬಗ್ಗೆ ನಿನ್ನೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ್ದ ಕೇಂದ್ರ ಕಾಶ್ಮೀರದ ಡಿಐಜಿ ವಿ ಕೆ ಬಿದ್ರಿ, ಇಬ್ಬರಿಂದ ಮೂವರು ಶಸ್ತ್ರಸಜ್ಜಿತ ಉಗ್ರರು ಯಾಸೀನ್ ನ ಮನೆಗೆ ನುಗ್ಗಿ ಅವರನ್ನು ಅಪಹರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದಿದ್ದರು.

ಮೊಹಮ್ಮದ್ ಯಾಸೀನ್ ಭಾರತೀಯ ಸೇನೆಯ ಜೆಎಕೆಎಲ್ಐ ಘಟಕಕ್ಕೆ ಸೇರಿದ್ದಾರೆ.ಯಾಸಿನ್ ಅವರ ನಿವಾಸವಿರುವ ಗ್ರಾಮ ಕಾಶ್ಮೀರದ ಪುಲ್ವಾಮಾ ಜಿಲ್ಲೆಗೆ ಹತ್ತಿರವಾಗಿದೆ. ಉಗ್ರರು ಪುಲ್ವಾಮಾದ ನೆವಾದಿಂದ ಬಂದಿರಬಹುದು ಎಂದು ಶಂಕಿಸಲಾಗಿತ್ತು. ಹೀಗಾಗಿ ಪೊಲೀಸರು ಸಾಮೂಹಿಕ ಶೋಧ ಕಾರ್ಯಾಚರಣೆಯನ್ನು ಸುತ್ತಮುತ್ತಲ ಪ್ರದೇಶಗಳಲ್ಲಿ ಕೈಗೊಂಡಿದ್ದರು. ಯೋಧನ ಅಪಹರಣದ ಹಿಂದೆ ಹಿಜ್ ಬುಲ್ ಮುಜಾಹಿದ್ದೀನ್ ಮತ್ತು ಲಷ್ಕರ್ ಎ ತೊಯ್ಬಾ ಸಂಘಟನೆಯ ಕೈವಾಡವಿರುವುದನ್ನು ಕೂಡ ಶಂಕಿಸಲಾಗಿತ್ತು.

ಕಳೆದ ವರ್ಷ ಜೂನ್ 14ರಂದು ಉಗ್ರರು ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಯೋಧ ಔರಂಗಬೇಜ್ ನನ್ನು ಉಗ್ರರು ಅಪಹರಿಸಿ ಒಂದು ದಿನ ಬಳಿಕ ಕೊಂದು ಹಾಕಿದ್ದರು. ಯೋಧನ ಮೃತದೇಹ ಪುಲ್ವಾಮಾ ಜಿಲ್ಲೆಯ ಬಳಿ ಸಿಕ್ಕಿತ್ತು.

2017ರ ಮೇ ತಿಂಗಳಲ್ಲಿ ಯುವ ಸೇನಾಧಿಕಾರಿ ಲೆಫ್ಟಿನೆಂಟ್ ಫಯಾಜ್ ನನ್ನು ಅಪಹರಿಸಿದ್ದ ಉಗ್ರರು ನಂತರ ಅವರನ್ನು ಕೂಡ ಕೊಂದು ಹಾಕಿದ್ದರು.

Comments are closed.