ರಾಷ್ಟ್ರೀಯ

ಪಾಕ್ ನಲ್ಲಿ ಜೈಷ್ ಮುಖ್ಯಸ್ಥನ ಸಹೋದರ ಸೇರಿ 44 ಮಂದಿ ಬಂಧನ

Pinterest LinkedIn Tumblr


ನವದೆಹಲಿ: ಭಾರತದಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಸುವ ಉಗ್ರರಿಗೆ ಪಾಕಿಸ್ತಾನ ಆಶ್ರಯತಾಣವಾಗಿದೆ ಎಂಬ ಆರೋಪದ ಮೇಲೆ ಅಂತಾರಾಷ್ಟ್ರೀಯ ಸಮುದಾಯದಿಂದ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಪಾಕಿಸ್ತಾನವು ಇವತ್ತು ವಿವಿಧ ನಿಷೇಧಿತ ಉಗ್ರ ಸಂಘಟನೆಗಳಿಗೆ ಸೇರಿದ 44 ಮಂದಿಯನ್ನು ಬಂಧಿಸಿದೆ. ಕಾಶ್ಮೀರದ ಪುಲ್ವಾಮದಲ್ಲಿ ಉಗ್ರ ದಾಳಿಯ ಹೊಣೆ ಹೊತ್ತಿದ್ದ ಜೈಷ್-ಎ-ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಅವರ ಸಹೋದರ ಮುಫ್ತಿ ಅಬ್ದುರ್ ಹಾಗೂ ಅದೇ ಸಂಘಟನೆಗೆ ಸೇರಿದ ಕಮಾಂಡರ್ ಹಮ್ಮದ್ ಅಜರ್ ಅವರೂ ಈ 44 ಬಂಧಿತರಲ್ಲಿ ಸೇರಿದ್ದಾರೆ. ಪಾಕಿಸ್ತಾನದ ಆಂತರಿಕ ಸಚಿವ ಶೆಹರ್ಯಾರ್ ಖಾನ್ ಅಫ್ರಿದಿ ಅವರು ಇವತ್ತು ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಚಾರವನ್ನು ತಿಳಿಸಿದ್ದಾರೆ. ಆದರೆ, ಭಯೋತ್ಪಾದನೆ ವಿರುದ್ಧ ಪಾಕಿಸ್ತಾನ ನಡೆಸುತ್ತಿರುವ ಹೋರಾಟದ ಒಂದು ಭಾಗ ಮಾತ್ರ ಇದಾಗಿದ್ದು, ಯಾವುದೇ ಬಾಹ್ಯ ಒತ್ತಡದಿಂದ ಈ ಕ್ರಮ ಕೈಗೊಂಡಿಲ್ಲ ಎಂದೂ ಪಾಕ್ ಸಚಿವರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.

ಫೆ. 14ರಂದು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರ ದಾಳಿಯಲ್ಲಿ 40ಕ್ಕೂ ಹೆಚ್ಚು ಸಿಆರ್​ಪಿಎಫ್ ಯೋಧರು ಬಲಿಯಾಗಿದ್ದರು. ಪಾಕ್ ಮೂಲದ ಉಗ್ರರು ಈ ದಾಳಿ ಎಸಗಿದ್ದಾರೆ ಎಂದು ಭಾರತ ಮೊದಲಿಂದಲೂ ಆರೋಪ ಮಾಡುತ್ತಾ ಬಂದಿದೆ. ಜೈಷ್-ಎ-ಮೊಹಮ್ಮದ್ ಸಂಘಟನೆಯ ಕೈವಾಡ ಇರುವುದಕ್ಕೆ ಭಾರತ ಸೂಕ್ತ ಸಾಕ್ಷ್ಯಾಧಾರ ಒದಗಿಸಿದರೆ ಕ್ರಮ ಕೈಗೊಳ್ಳುವುದಾಗಿ ಪಾಕಿಸ್ತಾನ ಹೇಳಿತ್ತು. ಆದರೆ, ಭಾರತ ಈ ಮುಂಚೆಯೇ ಸಾಕ್ಷ್ಯಾಧಾರ ಒದಗಿಸಿದೆ. ಆದರೂ ಕೂಡ ಪಾಕಿಸ್ತಾನ ಸಾಕ್ಷ್ಯಾಧಾರ ಕೇಳುತ್ತಿತ್ತು. ಉಗ್ರರು, ಉಗ್ರ ಸಂಘಟನೆಗಳ ಮೇಲೆ ಕ್ರಮ ಕೈಗೊಳ್ಳುವಂತೆ ಅವುಗಳ ಹಣಕಾಸು ಮೂಲಗಳಿಗೆ ಕಡಿವಾಣ ಹಾಕುವಂತೆ ಅನೇಕ ರಾಷ್ಟ್ರಗಳ ಪಾಕಿಸ್ತಾನದ ಮೇಲೆ ಒತ್ತಡ ಹಾಕುತ್ತಾ ಬಂದಿವೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನವು 44 ಮಂದಿಯನ್ನು ಬಂಧಿಸಿರುವುದು ಗಮನಾರ್ಹವಾಗಿದೆ.

ಹಾಗೆಯೇ, ಉಗ್ರರು ಹಾಗೂ ಉಗ್ರ ಸಂಘಗಳ ವಿರುದ್ಧ ವಿಶ್ವಸಂಸ್ಥೆ ವಿಧಿಸಿರುವ ದಿಗ್ಬಂಧನಗಳನ್ನು ಜಾರಿಗೊಳಿಸಲು ಪಾಕಿಸ್ತಾನ ನಿನ್ನೆ ಒಂದು ಸಮಗ್ರ ಕಾನೂನು ರೂಪಿಸಿತ್ತು. ಅದಾದ ಒಂದು ದಿನ ನಂತರ ಪಾಕಿಸ್ತಾನ 44 ಉಗ್ರರನ್ನು ಬಂಧಿಸಿದೆ. ಪಾಕಿಸ್ತಾನದಲ್ಲಿರುವ ಎಲ್ಲಾ ನಿಷೇಧಿತ ಉಗ್ರ ಸಂಘಟನೆಗಳ ಆಸ್ತಿಗಳನ್ನು ಸರಕಾರ ಮುಟ್ಟುಗೋಲು ಹಾಕಿಕೊಂಡಿದೆ ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆ ವಕ್ತಾರ ಮೊಹಮ್ಮದ್ ಫೈಸಲ್ ಸ್ಪಷ್ಟಪಡಿಸಿದ್ದಾರೆ.

ಉಗ್ರರನ್ನು ರಕ್ಷಿಸುವ ಕ್ರಮವೇ?

44 ಉಗ್ರರನ್ನು ಬಂಧಿಸುವ ಪಾಕಿಸ್ತಾನದ ಕ್ರಮದ ಬಗ್ಗೆ ಭಾರತದ ಭದ್ರತಾ ಸಂಸ್ಥೆಗಳು ಸಂಶಯದ ನೋಟ ಹರಿಸಿವೆ. ಉಗ್ರರನ್ನು ಯಾವ ಪ್ರಕರಣದ ಮೇಲೆ ಅಥವಾ ಕಾಯ್ದೆ ಮೇಲೆ ಬಂಧಿಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಭಯೋತ್ಪಾದನೆ ವಿರೋಧಿ ಕಾಯ್ದೆಯಡಿ ಇವರನ್ನು ಬಂಧಿಸಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಇವರನ್ನು ಅರೆಸ್ಟ್ ಮಾಡಿದಂತಿದೆ. ಇದು ಉಗ್ರರನ್ನು ರಕ್ಷಿಸುವ ಚಿತಾವಣೆಯಷ್ಟೇ ಎಂದು ಭಾರತದ ಭದ್ರತಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಹಿಂದೆಯೂ ಪಾಕಿಸ್ತಾನವು ಮಸೂದ್ ಅಜರ್, ಹಫೀಜ್ ಸಯೀದ್ ಸೇರಿದಂತೆ ಸಾಕಷ್ಟು ಉಗ್ರರನ್ನು ಬಂಧಿಸಿದ್ದಿದೆ. ಆದರೆ, ಬೇರೆ ಬೇರೆ ಕಾರಣಗಳಿಗೆ ಅವರೆಲ್ಲರನ್ನೂ ಬಿಡುಗಡೆ ಮಾಡಿದೆ. ಭಯೋತ್ಪಾದನೆ ವಿಚಾರದಲ್ಲಿ ತಾನೇನೋ ಮಾಡುತ್ತಿದ್ದೇನೆ ಎಂದು ತೋರಿಸಿಕೊಂಡು ಜಗತ್ತಿನ ಕಣ್ಣೊರೆಸುವ ತಂತ್ರವನ್ನಷ್ಟೇ ಪಾಕ್ ಮಾಡುತ್ತಿದೆ ಎಂಬ ವಾದವಿದೆ.

Comments are closed.