ರಾಷ್ಟ್ರೀಯ

ತಪ್ಪದೆ ಉಗ್ರ ಶಿಬಿರಕ್ಕೆ ಬಿದ್ದಿದೆ ಭಾರತದ ಬಾಂಬ್!: ಇಲ್ಲಿದೆ ಚಿಪ್ ರಹಸ್ಯ!

Pinterest LinkedIn Tumblr


ನವದೆಹಲಿ[ಮಾ.04]: ಬಾಲಾಕೋಟ್‌ನಲ್ಲಿರುವ ಭಯೋತ್ಪಾದಕರ ಶಿಬಿರದ ಮೇಲೆ ಭಾರತೀಯ ವಾಯುಪಡೆ ಯುದ್ಧ ವಿಮಾನಗಳು ದಾಳಿ ನಡೆಸಿದ ಬಳಿಕ ಸರಣಿ ಸುಳ್ಳುಗಳನ್ನು ಪೋಣಿಸಿದ್ದ ಪಾಕಿಸ್ತಾನದ ಬಣ್ಣ ಮತ್ತೊಮ್ಮೆ ಬಯಲಾಗಿದೆ. ಭಾರತದ ವಿಮಾನಗಳು ದಾಳಿಗೆ ಬಂದಿದ್ದವು, ಪಾಕಿಸ್ತಾನಿ ವಿಮಾನಗಳನ್ನು ಕಂಡ ಕೂಡಲೇ ಹಿಮ್ಮೆಟ್ಟಿದವು. ಹೋಗುವಾಗ ಖಾಲಿ ಜಾಗದಲ್ಲಿ ಬಾಂಬ್‌ ಎಸೆದು ಹೋಗಿದ್ದವು ಎಂಬ ಪಾಕ್‌ನ ವಾದ ಶುದ್ಧ ಸುಳ್ಳು ಎಂಬುದು ತಾಂತ್ರಿಕ ಅಂಶಗಳಿಂದಲೂ ತಿಳಿದುಬಂದಿದೆ.

ಪಾಕಿಸ್ತಾನದ ಉಗ್ರ ಶಿಬಿರದ ಮೇಲೆ ಭಾರತ ಪ್ರಯೋಗಿಸಿದ್ದು ಸ್ಪೈಸ್‌-2000 ಎಂಬ ಬಾಂಬ್‌. ಇದಕ್ಕೆ ದಾಳಿ ಮಾಡಬೇಕಾದ ಸ್ಥಳದ ಉಪಗ್ರಹ ಚಿತ್ರ ಹಾಗೂ ಆ ಪ್ರದೇಶದ ಅಕ್ಷಾಂಶ- ರೇಖಾಂಶದ ಪರಿಪೂರ್ಣ ಮಾಹಿತಿಯನ್ನು ಮೆಮೋರಿ ಚಿಪ್‌ ಮೂಲಕ ತುಂಬಿರಲಾಗಿರುತ್ತದೆ. ಮಿರಾಜ್‌-2000 ಯುದ್ಧ ವಿಮಾನದಲ್ಲಿರುವ ಕಂಪ್ಯೂಟರ್‌ನಿಂದ ಉಡಾವಣೆ ಮಾಡುತ್ತಿದ್ದಂತೆ ನಿಗದಿಯಾದ ಗುರಿಯನ್ನು ಕರಾರುವಾಕ್ಕಾಗಿ ತಲುಪುತ್ತದೆ. ಈ ಬಾಂಬ್‌ ನಿಗದಿತ ಗುರಿಯಿಂದ ಆಚೀಚೆ ಹೋದರೂ ಅದು ಕೇವಲ ಮೀಟರ್‌ನಷ್ಟುಮಾತ್ರ ಎಂದು ರಕ್ಷಣಾ ಇಲಾಖೆಯ ಉನ್ನತ ಮೂಲವೊಂದು ತಿಳಿಸಿದೆ.

ರಾಡಾರ್‌ಗಳು ಸೆರೆ ಹಿಡಿದಿರುವ ‘ದಾಳಿಯ ಮೊದಲು ಹಾಗೂ ಆನಂತರ’ದ ಚಿತ್ರದ ಪ್ರಕಾರ, ಭಾರತ ಅಂದುಕೊಂಡಿದ್ದ ಗುರಿಯ ಮೇಲೆ ಅತ್ಯಂತ ನಿಖರ ದಾಳಿ ನಡೆದಿದೆ. ಆದರೆ ಎಷ್ಟುಮಂದಿ ಸಾವನ್ನಪ್ಪಿದ್ದಾರೆ ಎಂಬ ಲೆಕ್ಕ ಪಡೆಯುವುದು ಅಸಾಧ್ಯ. ಬಾಂಬ್‌ ಬಿದ್ದ ಸ್ಥಳದಲ್ಲಿನ ಎಲ್ಲ ಉಗ್ರರೂ ಹತರಾಗಿದ್ದಾರೆ ಎಂದು ಮೂಲ ಹೇಳಿದೆ.

ಭಾರತೀಯ ವಿಮಾನಗಳು ದಾಳಿ ಮಾಡಿದಾಗ ಆ ಸ್ಥಳದ ಸಮೀಪದಲ್ಲಿ ಪಾಕಿಸ್ತಾನದ ಯಾವುದೇ ವಿಮಾನ ಕಂಡುಬಂದಿರಲಿಲ್ಲ. ಪಾಕಿಸ್ತಾನದ ವಿಮಾನವೊಂದು ಇನ್ನೂ 150 ಕಿ.ಮೀ. ದೂರದಲ್ಲಿತ್ತು. ಹೀಗಾಗಿ ಪಾಕ್‌ ವಿಮಾನಗಳನ್ನು ನೋಡಿ ಭಾರತೀಯ ವಿಮಾನಗಳು ಆತುರಾತುರವಾಗಿ ಪರಾರಿಯಾದವು ಎಂಬ ಪಾಕಿಸ್ತಾನ ಸೇನೆಯ ವಾದ ಸುಳ್ಳು ಎಂದು ಮೂಲ ತಿಳಿಸಿದೆ.

Comments are closed.