ರಾಷ್ಟ್ರೀಯ

ಹತ ಉಗ್ರ ಪುಲ್ವಾಮಾ ಮಾದರಿ ಮತ್ತೊಂದು ದಾಳಿಗೆ ಸಜ್ಜಾಗಿದ್ದ!

Pinterest LinkedIn Tumblr


ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಕಳೆದ ವಾರ ಎನ್‌ಕೌಂಟರ್‌ನಲ್ಲಿ ಹತರಾದ ಮೂವರು ಉಗ್ರರ ಪೈಕಿ ಒಬ್ಬಾತ ಪುಲ್ವಾಮಾ ದಾಳಿ ಮಾದರಿಯಲ್ಲೇ ಮತ್ತೊಂದು ದಾಳಿಗೆ ಸಂಚು ರೂಪಿಸಿದ್ದ ಎಂಬ ಮಾಹಿತಿ ಬಯಲಾಗಿದೆ.

ಫೆಬ್ರವರಿ 24ರಂದು ಕುಲ್ಗಾಂನ ತುರಿಗಾಂನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಜೈಷೆ ಮೊಹಮ್ಮದ್ ಉಗ್ರರು ಹತರಾಗಿದ್ದರು. ಅವರನ್ನು ಶಿಗನ್‌ಪುರದ ರಾಖಿಬ್ ಅಹ್ಮದ್ ಮತ್ತು ಪಾಕಿಸ್ತಾನದ ವಾಲೀದ್ ಮತ್ತು ನುಮಾನ್ ಎಂದು ಗುರುತಿಸಲಾಗಿತ್ತು.

ಅವರ ಪೈಕಿ ಉಗ್ರ ಅಹಮದ್‌ ಸಿದ್ಧಪಡಿಸಿದ್ದ ಎನ್ನಲಾದ ವೀಡಿಯೋ ಒಂದರಲ್ಲಿ, ಭದ್ರತಾ ಪಡೆಗಳ ಮೇಲೆ ಫಿದಾಯೀನ್ (ಆತ್ಮಹತ್ಯಾ) ದಾಳಿ ನಡೆಸಲು ಉದ್ದೇಶಿಸಿದ್ದಾಗಿ ಹೇಳಿಕೊಂಡಿದ್ದ. ಅದು ಕಾಶ್ಮೀರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಆರು ನಿಮಿಷದ ಈ ವೀಡಿಯೋದಲ್ಲಿ- ‘ಈ ವೀಡಿಯೋ ನಿಮಗೆ ತಲುಪುವಾಗ ನಾನು ಸ್ವರ್ಗದಲ್ಲಿರುತ್ತೇನೆ’ ಎಂದು ಅಹ್ಮದ್ ಹೇಳಿದ್ದಾನೆ. ವೀಡಿಯೋದಲ್ಲಿ, ಆತ್ಮಹತ್ಯಾ ದಾಳಿಕೋರರು ನಡೆಸುವ ಭಯೋತ್ಪಾದಕ ದಾಳಿಗಳನ್ನು ಆತ ರೋಚಕವಾಗಿ ವಿವರಿಸುವ ಪ್ರಯತ್ನ ಮಾಡಿದ್ದಾನೆ.

ಪುಲ್ವಾಮಾ ದಾಳಿ ನಡೆದ ಬಳಿಕ ಆತ್ಮಹತ್ಯಾ ದಾಳಿಕೋರ ಜೈಷೆ ಉಗ್ರ ಆದಿಲ್ ಅಹ್ಮದ್ ದಾರ್ ಮಾಡಿದ್ದನೆನ್ನಲಾದ ವೀಡಿಯೋ ಬಹಿರಂಗವಾಗಿತ್ತು.

ಈಗಿನ ವೀಡಿಯೋದ ಸಾಚಾತನವನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

Comments are closed.