ರಾಷ್ಟ್ರೀಯ

ಅಭಿನಂದನ್ ಆಗಮನದ ನಂತರವೂ ಪಾಕ್ ಮೇಲೆ 1,2,3,4…ಬಾಂಬ್!

Pinterest LinkedIn Tumblr


ನವದೆಹಲಿ: ಪುಲ್ವಾಮಾ ದಾಳಿಯ ಬಳಿಕ ಭಾರತ-ಪಾಕ್ ಸಂಬಂಧ ಹದಗೆಟ್ಟಿದೆ. ಎರಡೂ ರಾಷ್ಟ್ರಗಳು ಯುದ್ಧದ ಹೊಸ್ತಿಲಲ್ಲಿ ಬಂದು ನಿಂತಿವೆ. ಆದರೆ ಪಾಕಿಸ್ತಾನಕ್ಕೆ ಪಾಠ ಕಲಿಸಲು ಭಾರತ ಕೇವಲ ಯುದ್ಧವಲ್ಲದೇ ಇನ್ನೂ ಹಲವು ಮಾರ್ಗೋಪಾಯಗಳನ್ನು ತನ್ನ ಬತ್ತಳಿಕೆಯಲ್ಲಿರಿಸಿಕೊಂಡಿದೆ.

ಅಣ್ತಮ್ಮಂದಿರಂತೆ ಬಾಳೋಣ ಎಂಬ ಭಾರತದ ಸಂದೇಶಕ್ಕೆ ಪ್ರತಿಬಾರಿಯೂ ಶತ್ರುತ್ವದ ರೋಷಾವೇಶ ತೋರಿದ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯೋಜನೆ ಸಿದ್ದಪಡಿಸಿಕೊಂಡು ಕುಳಿತಿದೆ. ಯುದ್ಧ ಈ ಯೋಜನೆಯಲ್ಲಿನ ಅಂತಿಮ ಆಯ್ಕೆ ಎಂಬುದು ಬಿಡಿಸಿ ಹೇಳಬೇಕಿಲ್ಲ.

ಬ್ಯುಸಿನೆಸ್ ಬಾಂಬ್:

ಪದೇ ಪದೇ ಭಾರತವನ್ನು ಕೆಣಕುತ್ತಿರುವ ಪಾಕಿಸ್ತಾನಕ್ಕೆ ಪಾಠ ಕಲಿಸಲು ಪ್ರಧಾನಿ ಮೋದಿ ಸರ್ಕಾರ ಕೈಗೆತ್ತಿಕೊಂಡ ಮೊದಲ ಅಸ್ತ್ರವೇ ಆರ್ಥಿಕ ಒತ್ತಡ. ಪುಲ್ವಾಮಾ ದಾಳಿಯ ಬಳಿಕ ಈ ಮೊದಲು ಪಾಕಿಸ್ತಾನಕ್ಕೆ ನೀಡಲಾಗಿದ್ದ ಪರಮಾಪ್ತ ರಾಷ್ಟ್ರದ ಸ್ಥಾನಮಾನ ಕಿತ್ತುಕೊಂಡ ಭಾರತ, ಪಾಕಿಸ್ತಾನದಿಂದ ಆಮದಾಗುವ ವಸ್ತುಗಳ ಮೇಲೆ ಶೇ. 200ರಷ್ಟು ಸುಂಕ ವಿಧಿಸಿತು.

ಭಾರತದ ಈ ನಡೆಯಿಂದ ಕಂಗಾಲಾದ ಪಾಕ್ ತನ್ನ ವಸ್ತುಗಳಿಗೆ ಈ ಪ್ರಮಾಣದ ಸುಂಕ ಭರಿಸಲಾಗದೇ ಕೈ ಚೆಲ್ಲಿದೆ. ಭಾರತಕ್ಕೆ ರಫ್ತಾಗಬೇಕಿದ್ದ ಸಿಮೆಂಟ್ ಮತ್ತಿತರ ವಸ್ತುಗಳನ್ನು ಹೊತ್ತ ಹಡಗು ಕರಾಚಿ ಬಂದರಿನಲ್ಲೇ ಲಂಗರು ಹಾಕಿ ಕುಳಿತಿವೆ.

ಟೊಮೆಟೊ ಬಾಂಬ್:

ಇನ್ನು ಟೊಮೆಟೊಗಾಗಿ ಭಾರತವನ್ನೇ ನಂಬಿಕೊಂಡಿರುವ ಪಾಕಿಸ್ತಾನಕ್ಕೆ ಭಾರತ ಟೊಮೆಟೊ ಬಾಂಬ್ ಹಾಕಿದೆ. ಪಾಕಿಸ್ತಾನಕ್ಕೆ ಟೊಮೆಟೊ ರಫ್ತು ಮಾಡಬಾರದು ಎಂಬ ರೈತರ ಒತ್ತಾಯದ ಹಿನ್ನೆಲೆಯಲ್ಲಿ ಟೊಮೆಟೊ ರಫ್ತು ನಿಂತಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದೆ.

2017-18 ರಲ್ಲಿ ಭಾರತ-ಪಾಕ್ ನಡುವೆ ಒಟ್ಟು 2.41 ಬಿಲಿಯನ್ ಯುಎಸ್ ಡಾಲರ್ ವಹಿವಾಟು ನಡಿದಿದೆ. 2016-17ರಲ್ಲಿ ಎರಡೂ ರಾಷ್ಟ್ರಗಳ ಮಧ್ಯೆ 2.27 ಬಿಲಿಯನ್ ಯುಎಸ್ ಡಾಲರ್ ವ್ಯಾಪಾರ ನಡೆದಿತ್ತು. ಅಂದರೆ 2018ರ ಅವಧಿಯಲ್ಲಿ ಭಾರತ-ಪಾಕ್ ನಡುವೆ ವ್ಯಾಪಾರ ಸಂಬಂಧ ವೃದ್ಧಿಯಾಗಿತ್ತು. ಆದರೆ ಪುಲ್ವಾಮಾ ದಾಳಿ ಬಳಿಕ ಪಾಕಿಸ್ತಾನ ಈ ಅವಕಾಶ ಕಳೆದುಕೊಂಡಿದೆ.

ಭಾರತ ಇನ್ನೇನು ಮಾಡಬಹುದು?:

ಜಾಗತಿಕ ಆರ್ಥಿಕ ಮಾರುಕಟ್ಟೆಯಲ್ಲಿ ಪಾಕಿಸ್ತಾನವನ್ನು ಒಂಟಿಯಾಗಿ ಮಾಡುವ ವಿಫುಲ ಅವಕಾಶ ಭಾರತದ ಮುಂದಿದೆ. ವಿಶ್ವವ ವೇದಿಕೆಯಲ್ಲಿ ಪಾಕ್‌ ನಿಜ ಬಣ್ಣ ಬಯಲು ಮಾಡಿ ವಿಶ್ವದ ಪ್ರಮುಖ ರಾಷ್ಟ್ರಗಳಿಂದ ಪಾಕಿಸ್ತಾನಕ್ಕೆ ಬರುತ್ತಿರುವ ಆರ್ಥಿಕ ಸಹಾಯವನ್ನು ನಿಲ್ಲಿಸುವ ಸಾಧ್ಯತೆ ಇದೆ.

ಈ ಪ್ರಕ್ರಿಯೆ ಈಗಾಗಲೇ ಶುರುವಾಗಿದ್ದು, ಪಾಕಿಸ್ತಾನಕ್ಕೆ ಸಹಾಯ ಮಾಡುತ್ತಿದ್ದ ಅಮೆರಿಕ ಈಗಾಗಲೇ ಆರ್ಥಿಕ ಸಹಾಯ ನಿಲ್ಲಿಸಿದೆ. ಅರಬ್ ರಾಷ್ಟ್ರಗಳು ಕೂಡ ಆರ್ಥಿಕ ಸಹಾಯದ ಕುರಿತು ಮರುಪರಿಶೀಲನೆ ನಡೆಸುತ್ತಿವೆ.

ಅಷ್ಟೇ ಅಲ್ಲದೇ ನಿನ್ನೆಯಷ್ಟೇ ಇಸ್ಲಾಮಿಕ್ ರಾಷ್ಟ್ರಗಳ ಸಹಕಾರ ಸಂಘಟನೆಯಲ್ಲಿ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅತಿಥಿ ಭಾಷಣ ಮಾಡಿರುವುದು ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಒಟ್ಟಿನಲ್ಲಿ ಭಯೋತ್ಪಾದನೆಗೆ ಆಶ್ರಯ ನೀಡುತ್ತಿರುವ ಪಾಕಿಸ್ತಾನಕ್ಕೆ ನಾಲ್ಕೂ ದಿಕ್ಕುಗಳಿಂದ ಹೊಡೆತ ನೀಡುತ್ತಿರುವ ಭಾರತ, ಆರ್ಥಿಕ ಜಗತ್ತಿನಲ್ಲಿ ಪಾಕ್‌ನ್ನು ಒಂಟಿಯನ್ನಾಗಿ ಮಾಡುವ ಮೂಲಕ ತಕ್ಕ ಪಾಠ ಕಲಿಸಲು ಸಾಧ್ಯವಾದದ್ದನ್ನೆಲ್ಲಾ ಮಾಡಲಿದೆ.

Comments are closed.