ರಾಷ್ಟ್ರೀಯ

‘ಅಭಿನಂದನ್​’ನನ್ನು ಭೇಟಿಯಾಗಿ ಮಾತುಕತೆ ನಡೆಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ! 60 ಗಂಟೆಗಳ ಪಾಕ್​ ನೆನಪನ್ನು ಹಂಚಿಕೊಂಡ ಅಭಿನಂದನ್

Pinterest LinkedIn Tumblr

ನವದೆಹಲಿ: ನಿನ್ನೆ ರಾತ್ರಿ ಪಾಕಿಸ್ತಾನದಿಂದ ಭಾರತಕ್ಕೆ ಹಸ್ತಾಂತರಗೊಂಡ ವಿಂಗ್​ ಕಮಾಂಡರ್​ ಅಭಿನಂದನ್​ ವರ್ತಮಾನ್​ ಅವರನ್ನು ಇಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ ಭೇಟಿಯಾಗಿದ್ದಾರೆ.

ಎರಡು ದಿನಗಳ ಕಾಲ ಪಾಕ್​ ವಶದಲ್ಲಿದ್ದ ವಿಂಗ್ ಕಮಾಂಡರ್ ಅಭಿನಂದನ್ ನಿನ್ನೆ ರಾತ್ರಿ ತಾಯ್ನಾಡಿಗೆ ಮರಳಿದ್ದರು. ಈ ಹಿನ್ನೆಲೆಯಲ್ಲಿ ಇಡೀ ದೇಶವೇ ಅವರನ್ನು ಸಂಭ್ರಮದಿಂದ ಸ್ವಾಗತಿಸಿತ್ತು. ಅಭಿನಂದನ್​ ಅವರನ್ನು ಸಂಪೂರ್ಣವಾಗಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ಸದ್ಯಕ್ಕೆ ನವದೆಹಲಿಯ ಏರ್​ ಪೋರ್ಸ್​ ಸೆಂಟ್ರಲ್ ಮೆಡಿಕಲ್ ಎಸ್ಟಾಬ್ಲಿಷ್​ಮೆಂಟ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಆ ಆಸ್ಪತ್ರೆಗೆ ತೆರಳಿದ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಅಭಿನಂದನ್​ ಜೊತೆಗೆ ಮಾತುಕತೆ ನಡೆಸಿ ಕುಶಲೋಪರಿ ವಿಚಾರಿಸಿದ್ದಾರೆ.

ವಾಯುಪಡೆಯ ಹಿರಿಯ ಅಧಿಕಾರಿಗಳೊಂದಿಗೆ ಆಸ್ಪತ್ರೆಗೆ ತೆರಳಿದ್ದ ನಿರ್ಮಲಾ ಸೀತಾರಾಮನ್​, ಇಡೀ ದೇಶವೇ ನಿಮ್ಮ ಬಗ್ಗೆ ಹೆಮ್ಮೆ ಪಡುತ್ತಿದೆ. ದೇಶದ ಬಗ್ಗೆ ನಿಮಗಿರುವ ಬದ್ಧತೆ ಬೇರೆಯವರಿಗೆ ಸ್ಫೂರ್ತಿಯಾಗಲಿದೆ ಎಂದು ಹೇಳಿದ್ದಾರೆ.

ಮಿಗ್​- 21 ಬಿಸನ್​ ಯುದ್ಧವಿಮಾನವನ್ನು ಚಲಾಯಿಸುತ್ತಿದ್ದ ಅಭಿನಂದನ್​ ವರ್ತಮಾನ್​ ಅವರನ್ನು ಫೆ. 27ರಂದು ಪಾಕಿಸ್ತಾನ ವಶಕ್ಕೆ ಪಡೆದಿತ್ತು. ಆ ವೇಲೆ ಅವರು ತೀವ್ರವಾಗಿ ಗಾಯಗೊಂಡಿದ್ದು, ಅವರ ಬಲಗಣ್ಣಿಗೆ ತೀವ್ರವಾದ ಪೆಟ್ಟಾಗಿತ್ತು. ಅವರನ್ನು ನಿನ್ನೆ ಭಾರತಕ್ಕೆ ಹಸ್ತಾಂತರ ಮಾಡಿದ ಬಳಿಕ ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಕರೆದೊಯ್ಯಲಾಗಿತ್ತು. ಅಭಿನಂದನ್ ವರ್ತಮಾನ್‌ ಇನ್ನೂ ಕೆಲವು ಪರೀಕ್ಷೆಗಳಿಗೆ ಒಳಪಡಬೇಕಾಗಿರುವುದರಿಂದ ನಾಳೆಯವರೆಗೆ ವೈದ್ಯಕೀಯ ನಿಗಾದಲ್ಲಿ ಇರಬೇಕಾಗುತ್ತದೆ.

ಸುಮಾರು 60 ಗಂಟೆಗಳ ಕಾಲ ಪಾಕಿಸ್ತಾನದ ವಶದಲ್ಲಿದ್ದ ಅಭಿನಂದನ್​ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಬೇಕು ಎಂದು ಇಡೀ ದೇಶವೇ ಬೇಡಿಕೆಯಿಟ್ಟಿತ್ತು. ಪಾಕ್​ ವಶದಲ್ಲಿದ್ದರೂ ನಮ್ಮ ದೇಶದ ಭದ್ರತೆಗೆ ಸಂಬಂಧಿಸಿದ ಯಾವುದೇ ಗೌಪ್ಯ ಮಾಹಿತಿಗಳನ್ನು ಬಿಟ್ಟುಕೊಡದೆ ಧೈರ್ಯ ಪ್ರದರ್ಶಿಸಿದ ಅಭಿನಂದನ್​ ಕುರಿತು ರಾಜಕಾರಣಿಗಳು, ಸಾರ್ವಜನಿಕರು, ಸೆಲೆಬ್ರಿಟಿಗಳು ಸೇರಿದಂತೆ ಇಡೀ ದೇಶದ ಜನತೆ ಮೆಚ್ಚುಗೆ ವ್ಯಕ್ತಪಡಿಸಿತ್ತು.

ಪುಲ್ವಾಮಾ ದಾಳಿಯ ನಂತರ ಭಾರತ ಬಾಲಕೋಟ್​ನಲ್ಲಿರುವ ಜೈಷ್​- ಇ- ಮಹಮದ್​ ಸಂಘಟನೆಯ ತರಬೇತಿ ಶಿಬಿರಗಳ ಮೇಲೆ ದಾಳಿ ನಡೆಸಿ ಉಗ್ರರನ್ನು ಹತ್ಯೆಗೈದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಪರಿಸ್ಥಿತಿ ಉದ್ವಿಘ್ನಗೊಂಡಿತ್ತು. ಇದಾದ ನಂತರ ಗಡಿಭಾಗದಲ್ಲಿ ಗುಂಡಿನ ದಾಳಿಯ ಭೀತಿ ಕಾಡುತ್ತಿದ್ದರಿಂದ ಸರ್ಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿತ್ತು.

Comments are closed.