ಜಗತ್ತಿನ ಘಟಾನುಘಟಿ ಪೈಲಟ್‌ಗಳು ಅಚ್ಚರಿಗೊಂಡಿದ್ದಾರೆ. ಅಷ್ಟೇ ಯಾಕೆ ಜಾಗತಿಕ ವಾಯುಪಡೆ ಪಂಡಿತರು ತಂತ್ರಜ್ಞರೂ ನಿಬ್ಬೆರಗಾಗಿದ್ದಾರೆ. ಯಾಕಂದ್ರೆ ಇಂಡಿಯನ್ ಏರ್‌ಫೋರ್ಸ್‌ನ ವಿಂಗ್ ಕಮಾಂಡರ್ ಅಭಿನಂದನ್ ಮಾಡಿರೋದು ಜಗತ್ತಿನಲ್ಲೇ ಇದುವರೆಗೂ ಯಾವ ನಿಸ್ಸೀಮ ಪೈಲಟ್‌ಗಳಿಂದಲೂ ಸಾಧ್ಯವಾಗಿಲ್ಲದ ಸಾಹಸ. ಹೀಗಾಗಿಯೇ ಅಭಿನಂದನ್ ಅವರೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಹಾಗೇನೇ ಅವರು ಚಲಾಯಿಸ್ತಾ ಇದ್ದ ಮಿಗ್ 21 ಬೈಸನ್ ವಿಮಾನ ಕೂಡ.
ಮಿಗ್ ಸರಣಿಯ ವಿಮಾನಗಳು ಮೂಲತಃ ರಷ್ಯಾ ನಿರ್ಮಿತ ಜೆಟ್‌ಗಳು. ಇವು ಕಳೆದ 50 ವರ್ಷಗಳಿಂದಲೂ ಭಾರತೀಯ ವಾಯುಪಡೆಯಲ್ಲಿ ಕಾರ್ಯಾಚರಿಸುತ್ತಿವೆ. ರಷ್ಯಾ ತಂತ್ರಜ್ಞಾನದ ಇದೇ ವಿಮಾನಗಳನ್ನು ಕಾಲಾನುಕಾಲಕ್ಕೆ ಹೆಚ್‌ಎಎಲ್ ಮೇಲ್ದರ್ಜೆಗೇರಿಸುತ್ತಾ ಬಂದಿದೆ. ಹಾಗೇನೇ 2006ರಲ್ಲಿ ಈ ಜೆಟ್‌ಗಳನ್ನ ಹೆಚ್‌ಎಎಲ್‌ನ ವತಿಯಿಂದ ಮೇಲ್ದರ್ಜೆಗೇರಿಸಲಾಗಿದೆ. ಆಧುನೀಕರಣಗೊಳಿಸಲಾಗಿರೋ ಈ ವಿಮಾನಗಳನ್ನು ಮಿಗ್21 ಬೈಸನ್ ಅಂತಾ ಕರೆಯಲಾಗುತ್ತಿದೆ. ವಿಂಗ್ ಕಮಾಂಡರ್ ಅಭಿನಂದನ್ ಚಲಾಯಿಸ್ತಾ ಇದ್ದಿದ್ದು ಇದೇ ಮಿಗ್ 21 ಬೈಸನ್ ಯುದ್ಧ ವಿಮಾನ. ಆದ್ರೆ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯೋದಕ್ಕೆ ಕಾರಣ, ಅವರು ಹೊಡೆದುರುಳಿಸಿದ್ದು ಎಫ್.16 ಅನ್ನೋ ಅಮೆರಿಕಾದ ಅತ್ಯಾಧುನಿಕ ಯುದ್ಧ ವಿಮಾನವನ್ನ.
ಎಫ್ 16 ವಿಮಾನಗಳನ್ನ ಮಿಗ್- ಜೆಟ್ ಹೊಡೆದುರುಳಿಸಿದ ನಿದರ್ಶನವೇ ಇಲ್ಲ
ಎಫ್ 16 ಅಮೆರಿಕಾ ನಿರ್ಮಿತ ವಿಮಾನಗಳು. ಪಾಕಿಸ್ತಾನ ವಾಯುಪಡೆಯ ಅತಿದೊಡ್ಡ ಶಕ್ತಿ ಅಂದ್ರೆ ಈ ಅಮೆರಿಕಾ ವಿಮಾನಗಳೇ. ಕಳೆದ 50 ವರ್ಷಗಳ ಇತಿಹಾಸದಲ್ಲಿ ಎಫ್16 ವಿಮಾನಗಳು ಜಗತ್ತಿನ ನಾನಾ ಕಡೆ ಮಿಗ್ ಸರಣಿಯ ವಿಮಾನಗಳ ಜೊತೆ ಕಾದಾಡಿವೆ. ಆದ್ರೆ ಪ್ರತಿಬಾರಿಯೂ ಎಫ್-16 ವಿಮಾನಗಳು ಮೇಲುಗೈ ಸಾಧಿಸಿದ್ದರೆ, ಮಿಗ್ ಸರಣಿಯ ವಿಮಾನಗಳು ಪತನಗೊಂಡಿವೆ. ಅದೇ, ಮಿಗ್ ವಿಮಾನವೊಂದು ಎಫ್16 ಅನ್ನು ಹೊಡೆದುರುಳಿಸಿದ ನಿದರ್ಶನವೇ ಇಲ್ಲ. ಮಿಗ್‌ನ ಪಿತಾಮಹ ರಷ್ಯಾದ ಪೈಲಟ್‌ಗಳಿಂದಲೂ ಈ ಸಾಧನೆ ಮಾಡಲಾಗಿಲ್ಲ. ಆದ್ರೆ ಜಗತ್ತಿನ ಯಾವ ಪೈಲಟ್‌ಗಳೂ ಮಾಡಲಾರದ ಸಾಹಸವನ್ನ ಅಭಿನಂದನ್ ಅವರು ಮಾಡಿದ್ದಾರೆ. ಅದರಲ್ಲೂ ಪಾಕ್ ಎಫ್ 16 ಹೊಡೆಯಲು ಅಭಿನಂದನ್ ಬಳಸಿರೋದು ಆರ್-73 ಕ್ಲೋಸ್ ರೇಂಜ್ ಕ್ಷಿಪಣಿ ಅನ್ನೋದು ಮತ್ತೊಂದು ಅಚ್ಚರಿ.
ಎಫ್ 16 ವಿಮಾನಗಳು ಬಳಸೋದು ಅತ್ಯಾಧುನಿಕ ಕ್ಷಿಪಣಿ
ಎಫ್ 16ನಲ್ಲಿ ಬಳಸಲಾಗುವ ‘ಆರ್ಮಾಮ್’ ಸರಣಿಯ ಕ್ಷಿಪಣಿಗಳು ಕಣ್ಣಿಗೆ ಕಾಣದಷ್ಟು ದೂರದ ವಿಮಾನಗಳನ್ನೂ ಹೊಡೆದುರುಳಿಸಬಲ್ಲ ಸಾಮರ್ಥ್ಯ ಹೊಂದಿವೆ. Fire and Forget, ಅಂದ್ರೆ ಉಡಾಯಿಸಿ ಮರೆತೇ ಬಿಡಬಹುದು. ಅರ್ಮಾಮ್ ಕ್ಷಿಪಣಿ ತನ್ನಿಂತಾನೇ ಗುರಿಯನ್ನು ಹುಡುಕಿಕೊಂಡು ಹೋಗಿ ಬೇಧಿಸುತ್ತೆ. ಅಂಥಾ ಕ್ಷಿಪಣಿ ಹೊತ್ತ ಎಫ್-16, ಮಿಗ್ 21ನ ಕ್ಲೋಸ್ ರೇಂಜ್ ಹೊಡೆತಕ್ಕೆ ಛಿದ್ರಗೊಂಡು ನೆಲಕ್ಕಪ್ಪಳಿಸಿದ್ದೇ ಸದ್ಯ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗ್ತಿರೋ ಅಚ್ಚರಿ.
50 ವರ್ಷ ಹಳೇಯ ದಂತಕತೆ ಮಿಗ್-21
ಹೇಳಿ ಕೇಳಿ ಮಿಗ್ ವಿಮಾನಗಳನ್ನು ಭಾರತದ ದಂತಕತೆ ಅಂತಾನೇ ಕರೆಯಲಾಗುತ್ತೆ. 50 ವರ್ಷ ಹಳೇಯದಾದ ಈ ವಿಮಾನಗಳು, ನಿರಂತರ ತಾಂತ್ರಿಕ ದೋಷ, ಪದೇ ಪದೆ ಪತನವಾಗೋ ಘಟನೆಗಳ ಹಿನ್ನೆಲೆಯಲ್ಲಿ 2019ರ ನಂತರ ಭಾರತೀಯ ವಾಯುಪಡೆಯಿಂದ ಕ್ರಮೇಣ ವಿಮುಖವಾಗ್ತಿವೆ. ಈ ಸಂದರ್ಭದಲ್ಲೇ ಮಿಗ್ 21 ಬೈಸನ್ ಜಾಗತಿಕ ಸಾಹಸವೊಂದನ್ನ ಮಾಡುವಲ್ಲಿ ಸಫಲವಾಗಿದೆ. ಈ ಕುರಿತಂತೆ ಬ್ಲಾಗ್ ಒಂದನ್ನ ಬರೆದಿರೋ ಇಟಲಿಯ ಪ್ರಸಿದ್ಧ ಜಾಗತಿಕ ಡಿಫೆನ್ಸ್ ಪತ್ರಕರ್ತ ಡೇವಿಡ್ ಕೆನ್ಸಿಯೋಟ್ಟಿ,” ಅತ್ಯಾಧುನಿಕ ಸಲಕರಣೆಗಳೇ ಪ್ರತಿಬಾರಿಯೂ ಮೇಲುಗೈ ಸಾಧಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ನೈಪುಣ್ಯತೆ ಮತ್ತು ತಂತ್ರಗಾರಿಕೆಯೂ ಗೆಲ್ಲಬಲ್ಲದು ಅನ್ನೋದಕ್ಕೆ ಈ ಘಟನೆ ಸಾಕ್ಷಿ” ಎಂದಿದ್ದಾರೆ. ವಾಯುಯುದ್ಧದಲ್ಲಿ ಕೇವಲ ಆಧುನಿಕ ಸಾಧನಗಳಿದ್ದರೆ ಸಾಲದು. ಇಲ್ಲಿ ಪೈಲಟ್‌ನ ಸಾಹಸ, ಸಮಯಪ್ರಜ್ಞೆ, ನಿಖರ ಗುರಿಯಿರಿಸುವ ಸಾಮರ್ಥ್ಯ, ಸಹಾಯಕ ಸಿಬ್ಬಂದಿಯ ಸಮಯೋಚಿತ ಸಹಕಾರ, ಹಾಗೇನೇ ಶತ್ರುವನ್ನು ಯಾವ ರೀತಿ ಎದುರಿಸಬೇಕು ಅನ್ನೋ ಪರಿಜ್ಞಾನವೇ ಹೆಚ್ಚು ಕೆಲಸ ಮಾಡುತ್ತೆ ಅಂತಾನೂ ಅಭಿಪ್ರಾಯ ಪಟ್ಟಿದ್ದಾರೆ.
ವಿಂಗ್ ಕಮಾಂಡರ್ ಅಭಿನಂದನ್ ಮಾಡಿರೋ ಸಾಹಸ ಎಂಥದ್ದು ಅನ್ನೋದನ್ನ ಈ ಜಾಗತಿಕ ಮಟ್ಟದ ಚರ್ಚೆಗಳೇ ಸಾಬೀತು ಮಾಡ್ತಿವೆ. ನಾನಾ ದೇಶಗಳ ಜಾಗತಿಕ ರಕ್ಷಣಾ ತಂತ್ರಜ್ಞರು ಅಚ್ಚರಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಈ ಸಾಹಸ ಸಾಧ್ಯವಾಗಿರೋದು ಪೈಲಟ್‌ನ ಚಾಕಚಕ್ಯತೆಯಿಂದಲೇ ಹೊರತು ಬೇರೇನಲ್ಲಾ ಅನ್ನೋದೇ ಬಹುತೇಕರ ಅಭಿಮತ. ಇದು ನಮ್ಮ ಪೈಲಟ್‌ಗಳ ತರಬೇತಿಯ ಗುಣಮಟ್ಟವನ್ನು ಹೇಳುತ್ತೆ ಅನ್ನೋದು ಭಾರತೀಯ ವಾಯುಪಡೆಯ ಹೆಮ್ಮೆಯ ಮಾತು.
Comments are closed.