ರಾಷ್ಟ್ರೀಯ

ವಿಮಾನದಲ್ಲಿ ಅಭಿನಂದನ್​ ಪೋಷಕರನ್ನು ನೋಡಿದಾಕ್ಷಣ ಪ್ರಯಾಣಿಕರ ಪ್ರತಿಕ್ರಿಯೆ​ ಹೇಗಿತ್ತು ಗೊತ್ತಾ?

Pinterest LinkedIn Tumblr


ನವದೆಹಲಿ: ಪಾಕಿಸ್ತಾನದ ವಶದಲ್ಲಿರುವ ಭಾರತೀಯ ವಾಯುಪಡೆಯ ವಿಂಗ್​ ಕಮಾಂಡರ್​ ಅಭಿನಂದನ್​ ಅವರು ಇಂದು ಭಾರತಕ್ಕೆ ಮರಳುತ್ತಿದ್ದಾರೆ. ಅವರ ಪೋಷಕರು ಮಗನನ್ನು ಸ್ವಾಗತಿಸಲು ವಾಘಾ ಗಡಿ ಭಾಗಕ್ಕೆ ತೆರಳುತ್ತಿದ್ದಾರೆ. ನಿನ್ನೆ ರಾತ್ರಿ ವಿಮಾನ ಏರಿದ ಅಭಿನಂದನ್​ ಪಾಲಕರಿಗೆ ಸಹ ಪ್ರಯಾಣಿಕರು ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಗೌರವ ಸೂಚಿಸಿದ್ದಾರೆ.

ಅಭಿನಂದನ್​ ಪಾಲಕರು ನಿನ್ನೆ ರಾತ್ರಿ ದೆಹಲಿಗೆ ತೆರಳಿದ್ದಾರೆ. ಅಭಿನಂದನ್​ ತಂದೆ-ತಾಯಿ ಇಬ್ಬರೂ ವಿಮಾನ ಏರುತ್ತಿದ್ದಂತೆ, ಎಲ್ಲರೂ ಚಪ್ಪಾಳೆ ತಟ್ಟುವ ಮೂಲಕ ಅವರನ್ನು ಸ್ವಾಗತಿಸಿದರು. ಇದಕ್ಕೆ ಅಭಿನಂದನ್​ ತಂದೆ-ತಾಯಿ ತುಂಬು ಹೃದಯದಿಂದ ಧನ್ಯವಾದ ಅರ್ಪಿಸಿದ್ದಾರೆ.

ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರು ಈ ದೃಶ್ಯವನ್ನು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಶೇರ್​ ಆಗುತ್ತಿದೆ.

ಬುಧವಾರ ಬೆಳಗ್ಗೆ ಪಾಕಿಸ್ತಾನದ ಜೆಟ್​ ಎಫ್​-16 ಯುದ್ಧವಿಮಾನ ಭಾರತ ವಾಯು ವಲಯ ಗಡಿಯನ್ನು ದಾಟಿದಾಗ ಭಾರತದ ಮಿಗ್​-21 ವಿಮಾನವು ಅದನ್ನು ಹಿಮ್ಮೆಟ್ಟಿಸಿತ್ತು. ಈ ವೇಳೆ ಮಿಗ್​-21 ವಿಮಾನ ಪತನಗೊಂಡಿತ್ತು. ವಿಮಾನದಿಂದ ಪ್ಯಾರಾಚೂಟ್​ ಮೂಲಕ ಕೆಳಗಿಳಿದ ಅಭಿನಂದನ್​ ಅವರನ್ನು ಪಾಕಿಸ್ತಾನ ಸೈನಿಕರು ಬಂಧಿಸಿದ್ದರು.

ಅಭಿನಂದನ್​ ಅವರ ಬಂಧನದ ನಂತರ ಎರಡು ದೇಶಗಳ ನಡುವಿನ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು. ಎಲ್ಲೆಡೆ ಹೈ ಅಲರ್ಟ್​ ಘೋಷಿಸಲಾಗಿತ್ತು. ಅಭಿನಂದನ್​ ಅವರನ್ನು ಸುರಕ್ಷಿತವಾಗಿ ಮತ್ತು ಆದಷ್ಟು ಬೇಗ ಭಾರತಕ್ಕೆ ವಾಪಸ್​ ಕಳುಹಿಸುವಂತೆ ಭಾರತ ಪಾಕಿಸ್ತಾನಕ್ಕೆ ಆಗ್ರಹಿಸಿತ್ತು. ಈ ಸಂಬಂಧ ನೆನ್ನೆ ಪಾಕ್​ ಹೈ ಕಮಿಷನರ್ ಅವರಿಗೆ ಸಮನ್ಸ್​ ಜಾರಿಯಾಗಿದೆ.

ಎರಡು ದೇಶಗಳ ನಡುವೆ ಶಾಂತಿ ಸಂಕೇತವಾಗಿ ಅಭಿನಂದನ್​ ಅವರನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಗುರುವಾರ ಹೇಳಿದ್ದರು. ಅಂತೆಯೇ ಅವರನ್ನು ಪಾಕಿಸ್ತಾನ ಇಂದು ಭಾರತಕ್ಕೆ ಹಸ್ತಾಂತರ ಮಾಡಲಿದೆ.

Comments are closed.