ರಾಷ್ಟ್ರೀಯ

ಪಾಕ್ ವಶದಲ್ಲಿರುವ ಭಾರತೀಯ ಪೈಲೆಟ್ ಅಭಿನಂದನ್ ಕುರಿತು ಒಂದಷ್ಟು ಮಾಹಿತಿ

Pinterest LinkedIn Tumblr


ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ವಾಯುಪಡೆಯ ಮಿಗ್-21 ಯುದ್ಧ ವಿಮಾನ ಬುಧವಾರ ಪತನಗೊಂಡ ಬಳಿಕ ಪಾಕಿಸ್ತಾನದ ವಶದಲ್ಲಿರುವ ಭಾರತೀಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಈಗ ಇಡೀ ವಿಶ್ವದ ಕೇಂದ್ರ ಬಿಂದುವಾಗಿದ್ದಾರೆ. ಅಲ್ಲದೆ, ಕೂಡಲೇ ಅವರನ್ನು ಭಾರತಕ್ಕೆ ಮರಳಿ ಕಳುಹಿಸುವಂತೆ ಪಾಕ್ ಜನತೆ ಸಹಿತ ಎಲ್ಲರೂ ಒತ್ತಾಯಿಸಿದ್ದಾರೆ.

ಪಾಕ್ ವಶದಲ್ಲಿರುವ ವಿಂಗ್ ಕಮಾಂಡರ್ ಅಭಿನಂದನ್ ಯಾರು?
ಭಾರತೀಯ ವಾಯು ಸೇನೆಯ ವಿಂಗ್ ಕಮಾಂಡರ್ ಆಗಿರುವ ಅಭಿನಂದನ್ ವರ್ತಮಾನ್ ಫೈಟರ್ ಪೈಲೆಟ್ ಆಗಿ 16 ವರ್ಷಗಳ ಅನುಭವ ಪಡೆದವರು. ಎಂಐಜಿ-21 ಬಿಸಾನ್ ಸ್ವಾಡ್ರನ್ ಗೆ ನಿಯೋಜಿತರಾಗುವ ಮುನ್ನ ಸುಕೊಯ್-30 ಯುದ್ಧ ವಿಮಾನದ ಪೈಲೆಟ್ ಆಗಿದ್ದರು. ಮೂಲತಃ ತಮಿಳುನಾಡಿನವರಾದ ಅಭಿನಂದನ್ ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಇವರ ತಂದೆ ಸಹ ಭಾರತೀಯ ವಾಯು ಸೇನೆಯ ನಿವೃತ್ತ ಅಧಿಕಾರಿ. ಪರಂ ವಿಶಿಷ್ಟ ಸೇವಾ ಪದಕ ವಿಜೇತ ಏರ್ ಮಾರ್ಷೆಲ್ ಸಿಂಹಕುಟ್ಟಿ ವರ್ತಮಾನ್ ಅವರ ಪುತ್ರನೇ ಅಭಿನಂದನ್ ವರ್ಧಮಾನ್.

ಅಭಿನಂದನ್ ಅವರ ತಂದೆಯೂ ಸಹ ಖ್ಯಾತ ಯುದ್ಧ ವಿಮಾನದ ಪೈಲೆಟ್ ಆಗಿದ್ದವರು. 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದ ವೇಳೆಯಲ್ಲಿ ಮಿರಾಜ್ ಯುದ್ಧ ವಿಮಾನಗಳಿರುವ ಗ್ವಾಲಿಯರ್ ವಾಯುನೆಲೆಯಲ್ಲಿ ಮುಖ್ಯ ಕಾರ್ಯಾಚರಣೆ ಅಧಿಕಾರಿಯಾಗಿದ್ದ ಸಿಂಹಕುಟ್ಟಿ ಅವರು, ಶಿಲ್ಲಾಂಗ್ ನಲ್ಲಿರುವ ಪೂರ್ವ ವಾಯು ಕಮಾಂಡ್ ನಲ್ಲಿ ಏರ್ ಆಫಿಸರ್ ಕಮಾಂಡಿಂಗ್ ಇನ್ ಚೀಫ್ ಆಗ್ ನಿವೃತ್ತರಾದವರು.

ರಕ್ತ ಸುರಿಯುತ್ತಿದ್ದರೂ ಮಾಹಿತಿ ಬಿಟ್ಟುಕೊಡದ ದೇಶಭಕ್ತ ಅಭಿನಂದನ್
ಬುಧವಾರ ಮಿಗ್‌ ಯುದ್ಧವಿಮಾನ ಪತನಗೊಂಡು, ಪಾಕಿಸ್ತಾನದ ಸ್ಥಳೀಯರಿಂದ ವಂಚನೆಗೊಳಗಾಗಿ ಪಾಕ್ ಸೈನಿಕರ ವಶಕ್ಕೆ ಸಿಕ್ಕ ಏರ್‌ಫೋರ್ಸ್ ಪೈಲಟ್, ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರಿಗೆ ಚಿತ್ರ ಹಿಂಸೆ ನೀಡಿ ಮಾಹಿತಿ ಪಡೆಯಲು ಪಾಕ್ ಸೈನಿಕರು ಎಷ್ಟೇ ಪ್ರಯತ್ನಿಸಿದರೂ ಬಾಯಿ ಬಿಡದ ಅಭಿನಂದನ್ ಹೇಳಿದ್ದು ಕೇವಲ ಅವರ ಹೆಸರು ಮತ್ತು ಸರ್ವೀಸ್ ನಂಬರ್!

ರಕ್ತಸಿಕ್ತ ಮುಖ, ಕೈ ಕಾಲುಗಳನ್ನು ಕಟ್ಟಿ ಹೊಡೆದು, ಚಿತ್ರಹಿಂಸೆ ನೀಡಿ ಮಾಹಿತಿ ಪಡೆಯಲು ಪಾಕ್ ಸೈನಿಕರು ಎಷ್ಟೇ ಪ್ರಯತ್ನಿಸಿದರೂ ಎಲ್ಲಾ ನೋವನ್ನು ನುಂಗಿಕೊಂಡು, “ಐಯಾಮ್‌ ಸಾರಿ.. ನನ್ನ ಬಗ್ಗೆ ನಾನು ನಿಮಗೇನೂ ಹೇಳುವಂತಿಲ್ಲ..” ಎಂದು ಹೇಳುವ ಮೂಲಕ ಕರ್ತವ್ಯಪ್ರಜ್ಞೆ ಹಾಗೂ ದೇಶ ಪ್ರೇಮವನ್ನು ಮೆರೆದವರು ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್!

ಅಭಿನಂದನ್ ಬಿಡುಗಡೆಗೆ ಒತ್ತಾಯ
ಈ ಮಧ್ಯೆ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಕೂಡಲೇ ಭಾರತಕ್ಕೆ ಕಳುಹಿಸಿ ಎಂಬ ಕೂಗು ಎಲ್ಲೆಡೆ ವ್ಯಾಪಕವಾಗುತ್ತಿದೆ. ಭಾರತದಲ್ಲಿಯೂ ಸಹ ಅಭಿನಂದನ್, ಬ್ರಿಂಗ್ ಬ್ಯಾಕ್ ಅಭಿನಂದನ್, ಅಭಿನಂದನ್ ಮೈ ಹೀರೋ ಎಂಬ ಹ್ಯಾಷ್ ಟ್ಯಾಗ್ ಬಳಕೆ ಮಾಡಿ ಭಾರತಕ್ಕೆ ಕರೆತರುವಂತೆ ಒತ್ತಾಯಿಸಿದ್ದಾರೆ. ಇನ್ನು ವಿಪಕ್ಷಗಳೂ ಕೂಡ ಅಭಿನಂದನ್ ಅವರನ್ನು ವಾಪಸ್ ಕರೆತನ್ನಿ ಅಂಥಾ ಟ್ವಿಟರ್​ನಲ್ಲಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿವೆ. ಇದೇ ವೇಳೆ ಪಾಕಿಸ್ತಾನದಲ್ಲೂ ಸಹ ಸ್ಥಳೀಯರು ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನ್‍ರನ್ನು ಭಾರತಕ್ಕೆ ಕಳುಹಿಸಿ ಎಂಬ ಸಂದೇಶಗಳನ್ನು ಹಾಕುವ ಮೂಲಕ ಬಹಿರಂಗವಾಗಿ ಭಾರತಕ್ಕೆ ನೆರವಾಗುತ್ತಿದ್ದಾರೆ.

Comments are closed.