ರಾಷ್ಟ್ರೀಯ

ಭಾರತ ಮತ್ತು ಪಾಕಿಸ್ತಾನದ ಸೇನಾ ಬಲದ ಮಾಹಿತಿ

Pinterest LinkedIn Tumblr


ಪುಲ್ವಾಮ ಉಗ್ರರ ದಾಳಿಗೆ ಪ್ರತ್ಯುತ್ತರವಾಗಿ ಭಾರತ ನೆನ್ನೆ ಬಾಲ್​ಕೋಟ್​ನಲ್ಲಿ ವಾಯು ದಾಳಿ ನಡೆಸಿ, ಜೈಶ್​-ಇ-ಮೊಹಮ್ಮದ್​ ಉಗ್ರ ಸಂಘಟನೆಯ ಶಿಬಿರವನ್ನು ನಾಮಾವಶೇಷ ಮಾಡಿತ್ತು. ಪ್ರಸ್ತುತ ಭಾರತ ಮತ್ತು ಪಾಕಿಸ್ತಾನದ ನಡುವೆ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿದೆ.

ಎರಡು ದೇಶಗಳ ನಡುವೆ ಯಾವ ಸಂದರ್ಭದಲ್ಲಿ ಬೇಕಾದರೂ ಯುದ್ಧ ನಡೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡು ದೇಶಗಳು ಅಣು ಬಾಂಬ್​ಗಳನ್ನು ಹೊಂದಿದ್ದು, ಯಾವ ದೇಶದ ಬಳಿ ಸೇನಾ ಬಲ ಹೇಗಿದೆ? ಆಯಾ ದೇಶಗಳು ಸೇನೆಗೆ ವಾರ್ಷಿಕವಾಗಿ ಮೀಸಲಿರಿಸುವ ಹಣ ಎಷ್ಟು ಎಂಬುದನ್ನು ಕುರಿತು ‘ಅಲ್​ಜಜೀರಾ’ ವಿಶೇಷ ವರದಿ ಪ್ರಕಟಿಸಿದೆ.

ಮಿಲಿಟರಿ ಬಜೆಟ್​

2018ರ ಬಜೆಟ್​ನಲ್ಲಿ ಭಾರತ ಸರ್ಕಾರ ಸೇನೆಗೆ 4 ಲಕ್ಷ ಕೋಟಿಯನ್ನು (58 ಬಿಲಿಯನ್​ ಡಾಲರ್) ಮೀಸಲಿರಿಸಿದೆ. ಇದು ದೇಶದ ಜಿಡಿಪಿಯ ಶೇ.2.1 ಭಾಗವಾಗಿದೆ. ಭಾರತೀಯ ಸೇನೆ ಒಟ್ಟು 14 ಲಕ್ಷ​ ಕ್ಷಿಪ್ರ ಪಡೆಯನ್ನು ಹೊಂದಿದೆ ಎಂದು ಇಂಟರ್​ನ್ಯಾಷನಲ್​ ಇನ್ಸ್​ಟಿಟ್ಯೂಟ್​ ಫಾರ್ ಸ್ಟ್ರಾಟರ್ಜಿ ಸ್ಟಡೀಸ್​ (ಐಐಎಸ್​ಎಸ್​) ವರದಿ ಮಾಡಿದೆ.

ಕಳೆದ ವರ್ಷ ಪಾಕಿಸ್ತಾನ 1.26 ಲಕ್ಷ ಕೋಟಿಯನ್ನು (11 ಬಿಲಿಯನ್​ ಡಾಲರ್) ಸೇನೆಗೆ ಮೀಸಲಿರಿಸಿದೆ. ಇದು ಪಾಕಿಸ್ತಾನದ ಜಿಡಿಪಿಯ ಶೇ.3.6ರಷ್ಟು ಭಾಗವಾಗಿದೆ. ಪಾಕ್​ ಸೇನೆ 6,53,800 ಪಡೆಯನ್ನು ಹೊಂದಿದೆ. ಪಾಕಿಸ್ತಾನ 100 ಮಿಲಿಯನ್​ ಡಾಲರ್​ಅನ್ನು ವಿದೇಶಿ ಸೇನಾ ಸಹಾಯಧನವನ್ನು ಪಡೆದುಕೊಳ್ಳುತ್ತಿದೆ.

1993 ಮತ್ತು 2006ರ ಮಧ್ಯೆ ಪಾಕಿಸ್ತಾನ ಸರ್ಕಾರದ ವಾರ್ಷಿಕ ಆದಾಯದಲ್ಲಿ ಶೇ.20 ನಷ್ಟು ಸೇನೆಗೆ ಮೀಸಲಿರಿಸಿತ್ತು ಎಂದು ಸ್ಟಾಕ್​ಹೋಮ್​ ಇಂಟರ್​ನ್ಯಾಷನಲ್ ಪೀಸ್​ ರೀಸರ್ಚ್​ ಇನ್ಸ್​ಟಿಟ್ಯೂಟ್​ ಹೇಳಿದೆ.

ಕ್ಷಿಪಣಿ ಮತ್ತು ಅಣು ಬಾಂಬ್​ಗಳು

ಎರಡು ದೇಶಗಳು ಅಣುಬಾಂಬ್​ಅನ್ನು ಸಿಡಿಸಬಲ್ಲ ಕ್ಷಿಪಣಿಗಳನ್ನು ಹೊಂದಿವೆ.

ಭಾರತದ ಬಳಿ 3 ಸಾವಿರದಿಂದ 5 ಸಾವಿರ ಕಿ.ಮೀ. ವರೆಗೆ ಸಾಗಬಲ್ಲ ಅಗ್ನಿ-3 ಕ್ಷಿಪಣಿ ಒಳಗೊಂಡಂತೆ 9 ವಿಧದಲ್ಲಿ ಕಾರ್ಯಾಚರಣೆ ನಡೆಸಬಲ್ಲ ಕ್ಷಿಪಣಿಗಳು ಇವೆ ಎಂದು ವಾಷಿಂಗ್ಟನ್​ನ ಸೆಂಟರ್​ ಫಾರ್​ ಸ್ಟ್ರಾಟರ್ಜಿಕ್​ ಆ್ಯಂಡ್​ ಇಂಟರ್​ನ್ಯಾಷನಲ್​ ಸ್ಟಡೀಸ್​ ತಿಳಿಸಿದೆ.

ಚೀನಾದ ಸಹಾಯದೊಂದಿಗೆ ಪಾಕಿಸ್ತಾನ ಸಣ್ಣ ಮತ್ತು ಮಧ್ಯಮ ಗುರಿಯೊಂದಿಗೆ ಭಾರತದ ಯಾವುದೇ ಭಾಗವನ್ನು ತಲುಪಬಲ್ಲ ಕ್ಷಿಪಣಿಯನ್ನು ತಯಾರಿಸಿದೆ ಎಂದು ಸಿಎಸ್​ಐಎಸ್​ ಹೇಳಿದೆ. ಅವರ ಬಳಿ ಇರುವ ಶಾಹೀನ್​-2 ಕ್ಷಿಪಣಿ ಅತಿಹೆಚ್ಚು ದೂರ ಕ್ರಮಿಸಬಲ್ಲ ಕ್ಷಿಪಣಿಯಾಗಿದ್ದು, ಇದರ ಸಾಮರ್ಥ್ಯ 2 ಸಾವಿರ ಕಿ.ಮೀ. ಪಾಕಿಸ್ತಾನದ ಬಳಿ 140ರಿಂದ 150 ಸಿಡಿತಲೆಯ ಕ್ಷಿಪಣಿಗಳಿದ್ದರೆ ಭಾರತದ ಬಳಿ 130ರಿಂದ 140 ಸಿಡಿತಲೆಯ ಕ್ಷಿಪಣಿಗಳಿವೆ ಎಂದು ಎಸ್​ಐಪಿಆರ್​ಐ ಹೇಳಿದೆ.

ಸೇನೆಯ ಬಲಾಬಲ

ಭಾರತದ ಬಳಿ 12 ಲಕ್ಷ ಬಲಿಷ್ಠ ಸೇನೆ ಪಡೆ ಇದ್ದು, 3,565 ಯುದ್ಧ ಟ್ಯಾಂಕರ್​ಗಳಿವೆ. 3,100 ಕಾಲಾಳು ಪಡೆಯ ಯುದ್ಧ ವಾಹನಗಳು, 336 ಶಸ್ತ್ರಸಜ್ಜಿತ ಸಿಬ್ಬಂದಿ ಮತ್ತು 9,719 ಫಿರಂಗಿಗಳು ಇವೆ ಎಂದು ಐಐಎಸ್​ಎಸ್​ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಭಾರತದ ಸೇನೆಗೆ ಹೋಲಿಸಿಕೊಂಡರೆ ಪಾಕಿಸ್ತಾನದ ಸೇನೆಯು ಕಡಿಮೆ ಗಾತ್ರವನ್ನು ಹೊಂದಿದೆ. 5,60,000 ಪಡೆಗಳು, 2,496 ಯುದ್ಧ ಟ್ಯಾಂಕರ್​ಗಳು, 1,605 ಶಸ್ತ್ರಸಜ್ಜಿತ ಸೈನಿಕರು ಮತ್ತು 4,472 ಫಿರಂಗಿಗಳನ್ನು ಹೊಂದಿದೆ.

ವಾಯು ಸೇನೆಯ ಬಲಾಬಲ

ಭಾರತೀಯ ವಾಯಪಡೆ 1,27,200 ಸಿಬ್ಬಂದಿ ಮತ್ತು 814 ಯುದ್ಧ ವಿಮಾನ, 590 ಫೈಟರ್​ ಜೆಟ್​ಗಳು, 708 ಸಾಗಣೆ ವಿಮಾನಗಳು, 15 ದಾಳಿ ನಡೆಸುವ ಹೆಲಿಕಾಪ್ಟರ್​ಗಳು ಸೇರಿದಂತೆ 720 ಹೆಲಿಕಾಪ್ಟರ್​ಗಳನ್ನು ಭಾರತೀಯ ಸೇನೆ ಹೊಂದಿದೆ. ರಷ್ಯಾ ನಿರ್ಮಿತದ ಮಿಗ್​-21 ಯುದ್ಧ ವಿಮಾನ ಹಾಗೂ ಫ್ರಾನ್ಸ್​ ತಂತ್ರಜ್ಞಾನದ ಮಿರಾಜ್​- 2000 ಯುದ್ಧವಿಮಾನಗಳು ಭಾರತೀಯ ವಾಯುಪಡೆಯ ಪ್ರಬಲ ಅಸ್ತ್ರಗಳಾಗಿವೆ.

ಪಾಕಿಸ್ತಾನದ ವಾಯುಪಡೆಯಲ್ಲಿ 70 ಸಾವಿರ ಸಿಬ್ಬಂದಿ, 425 ಯುದ್ಧ ವಿಮಾನಗಳು, 320 ಫೈಟರ್​ಜೆಟ್​ಗಳು, 49 ದಾಳಿ ಹೆಲಿಕಾಪ್ಟರ್​ಗಳು ಸೇರಿ 378 ಹೆಲಿಕಾಪ್ಟರ್​ಗಳಿವೆ ಹಾಗೂ ಚೀನಾ ನಿರ್ಮಿತದ ಎಫ್​-7ಪಿಜಿ ಮತ್ತು ಅಮೆರಿಕದ ಎಫ್​-16 ಯುದ್ಧ ವಿಮಾನವಿದೆ.

ನೌಕಾಪಡೆ
ಭಾರತೀಯ ನೌಕಾಪಡೆಯಲ್ಲಿ 67,700 ಸಿಬ್ಬಂದಿ ಹೊಂದುವ ಮೂಲಕ ಬಲಿಷ್ಠ ನೌಕಾಪಡೆಯನ್ನು ಹೊಂದಿದೆ. ಯುದ್ಧ ವಿಮಾನ ವಾಹಕ ವಿಕ್ರಮಾಧಿತ್ಯ ಪ್ರಬಲ ಅಸ್ತ್ರವಾಗಿದೆ. 16 ಸಬ್​ಮರಿನ್​, 14 ಡೆಸ್ಟ್ರಾಯರ್​ಗಳು, 13 ಫ್ರಿಗ್ರೆಟ್ಸ್​, 106 ಕರಾವಳಿ ಯುದ್ಧ ವಾಹಕ ನೌಕೆಗಳು ಮತ್ತು 75 ಯುದ್ಧ ಸಾಮರ್ಥ್ಯ ನೌಕೆಗಳನ್ನು ಹೊಂದಿದೆ.

ಪಾಕಿಸ್ತಾನದಲ್ಲಿ ಕಡಿಮೆ ಕರಾವಳಿ ಪ್ರದೇಶವನ್ನು ಹೊಂದಿದೆ. ಹೀಗಾಗಿ ಪಾಕಿಸ್ತಾನದ ನೌಕಾಪಡೆ ಸಣ್ಣ ಪಡೆಯನ್ನು ಹೊಂದಿದೆ. 9 ಫ್ರಿಗೆಟ್ಸ್​, 8 ಸಬ್​ಮರಿನ್​, 17 ಪೆಟ್ರೋಲ್ ಮತ್ತು ಕರಾವಳಿ ನೌಕೆಗಳು ಹಾಗೂ 8 ಯುದ್ಧ ಸಾಮರ್ಥ್ಯ ವಿಮಾನಗಳು ಇವೆ.

Comments are closed.