ರಾಷ್ಟ್ರೀಯ

ಚೆನ್ನೈನ ಕಾರ್ ಪಾರ್ಕಿಂಗ್​ನಲ್ಲೂ ಅಗ್ನಿ ಅವಘಡ; ಸುಟ್ಟು ಹೋದ 200ಕ್ಕೂ ಹೆಚ್ಚು ವಾಹನಗಳು

Pinterest LinkedIn Tumblr


ಚೆನ್ನೈ: ಬೆಂಗಳೂರಿನ ಯಲಹಂಕದಲ್ಲಿ ಏರ್ ಶೋ ಸ್ಥಳದಲ್ಲಿ ಕಾರ್ ಪಾರ್ಕಿಂಗ್​ನಲ್ಲಿ ಬೆಂಕಿ ಹೊತ್ತಿಕೊಂಡು 300ಕ್ಕೂ ಹೆಚ್ಚು ಕಾರುಗಳು ಸುಟ್ಟುಹೋದ ಘಟನೆಯಾದ ಬೆನ್ನಲ್ಲೇ ಈಗ ತಮಿಳುನಾಡಿನಲ್ಲೂ ಅಂಥದ್ದೇ ದುರಂತ ಸಂಭವಿಸಿದೆ. ಚೆನ್ನೈ ನಗರದ ಪೋರೂರಿನ ಶ್ರೀ ರಾಮಚಂದ್ರ ಮೆಡಿಕಲ್ ಸೆಂಟರ್ ಸಮೀಪ ಇದ್ದ ಕಾರ್ ಪಾರ್ಕಿಂಗ್ ಸ್ಥಳಕ್ಕೆ ಬೆಂಕಿ ತಗುಲಿ 200ಕ್ಕೂ ಹೆಚ್ಚು ವಾಹನಗಳು ಸುಟ್ಟು ಹೋಗಿವೆ. ಮಧ್ಯಾಹ್ನ 2:05ಕ್ಕೆ ಈ ದುರಂತ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಆರೇಳು ಅಗ್ನಿಶಾಮಕ ವಾಹನಗಳ ಮೂಲಕ ಬೆಂಕಿ ನಂದಿಸುವ ಕಾರ್ಯ ನಡೆಯಿತು. 2-3 ಗಂಟೆಯಲ್ಲಿ ಬೆಂಕಿಯನ್ನು ಯಶಸ್ವಿಯಾಗಿ ನಂದಿಲಾಯಿತು. ಬೆಂಕಿ ತಗುಲಲು ಕಾರಣ ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಪಾರ್ಕಿಂಗ್ ಸ್ಥಳದಲ್ಲಿದ್ದ ಒಣ ಹುಲ್ಲುಗಳಿಗೆ ಬೆಂಕಿ ತಗುಲಿ ಈ ದುರಂತ ಸಂಭವಿಸಿದೆ. ಜೊತೆಗೆ, ಗಾಳಿ ಬೀಸುತ್ತಿದ್ದರಿಂದ ಬೆಂಕಿ ಬೇಗನೇ ವ್ಯಾಪಿಸಿದೆ. ಈ ದುರಂತದಲ್ಲಿ ಒಟ್ಟು 214 ಕಾರುಗಳು ಸುಟ್ಟುಹೋಗಿವೆ ಎನ್ನಲಾಗಿದೆ.

ಬೆಂಗಳೂರಿನ ಏರ್ ಶೋ ಸ್ಥಳದಲ್ಲಿ ಬೆಂಕಿ ಹರಡಲು ಕಾರಣವಾಗಿದ್ದು ಇದೇ ಒಣ ಹುಲ್ಲೇ. ಪಾರ್ಕಿಂಗ್ ಸ್ಥಳದಲ್ಲಿ ಒಣ ಹುಲ್ಲುಗಳು ಹೇರಳವಾಗಿದ್ದರಿಂದ ಬೆಂಕಿ ಬಹಳ ಬೇಗ ಹರಡಿತ್ತು. ಯಲಹಂಕದ ವಾಯು ನೆಲೆಯಲ್ಲಿನ ಈ ಸ್ಥಳದಲ್ಲಿ 340 ಕಾರುಗಳು ಸುಟ್ಟು ಹೋಗಿದ್ದವು.

Comments are closed.