ರಾಷ್ಟ್ರೀಯ

ಹೊತ್ತಿ ಉರಿಯುತ್ತಿರುವ ಅರುಣಾಚಲ; ಉಪ ಮುಖ್ಯಮಂತ್ರಿ ನಿವಾಸಕ್ಕೇ ಬೆಂಕಿ

Pinterest LinkedIn Tumblr


ಇಟಾನಗರ್: ಅರುಣಾಚಲ ಪ್ರದೇಶದಲ್ಲಿ ಕೆಲ ನಿರ್ದಿಷ್ಟ ಸಮುದಾಯಗಳಿಗೆ ಖಾಯಂ ನಿವಾಸಿ ಪ್ರಮಾಣಪತ್ರ ನೀಡುವ ಕ್ರಮವನ್ನು ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಸುತ್ತಿರುವ ಜನರು ಇವತ್ತು ಭಾನುವಾರ ಮತ್ತೊಮ್ಮೆ ಹಿಂಸಾಚಾರಕ್ಕಿಳಿದಿದ್ದಾರೆ. 24 ಪೊಲೀಸರು ಸೇರಿದಂತೆ 35 ಮಂದಿಗೆ ಗಾಯಗಳಾಗಿವೆ. ಶುಕ್ರವಾರ ಪೊಲೀಸ್ ಫೈರಿಂಗ್​ನಲ್ಲಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬ ಇವತ್ತು ನಿಧನಗೊಳ್ಳುತ್ತಿದ್ದಂತೆಯೇ ಪ್ರತಿಭಟನಾಕಾರರು ಉದ್ರಿಕ್ತಗೊಂಡು ಹಿಂಸಾಚಾರದಲ್ಲಿ ತೊಡಗಿದ್ದಾರೆ. ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಲೆಕ್ಕಿಸದೆ ಪ್ರತಿಭಟನಾಕಾರರು ಹಲವು ವಾಹನಗಳನ್ನ ಜಖಂಗೊಳಿಸಿದ್ದಾರೆ. ಮಧ್ಯಾಹ್ನ 1ಗಂಟೆಯ ಸುಮಾರಿಗೆ ಉಪಮುಖ್ಯಮಂತ್ರಿ ಚೌನಾ ಮೇನ್ ಅವರ ಖಾಸಗಿ ನಿವಾಸವನ್ನು ದುಷ್ಕರ್ಮಿಗಳು ಬೆಂಕಿ ಹಚ್ಚಿ ಸುಟ್ಟಿದ್ದಾರೆ. ಅವರ ಕಾರನ್ನೂ ಧ್ವಂಸಗೊಳಿಸಿದ್ದಾರೆ. ಅಷ್ಟೇ ಅಲ್ಲ, ಉಪ ಆಯುಕ್ತರ ಕಚೇರಿಗೂ ನುಗ್ಗಿ ಕಟ್ಟಡದ ಹಲವು ಭಾಗಗಳಿಗೆ ಹಾನಿ ಮಾಡಿದ್ದಾರೆ.

ನಿನ್ನೆ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದ ಪರಿಣಾಮ 24 ಪೊಲೀಸರು ಸೇರಿದಂತೆ 35 ಮಂದಿಗೆ ಗಾಯವಾಗಿದೆ. ಅದಾಧ ಬಳಿಕ ಇಟಾನಗರ್, ನಹರ್​ಲಗುನ್​ನಲ್ಲಿ ಅನಿರ್ದಿಷ್ಟಾವಧಿ ಕರ್ಫ್ಯೂ ಹೇರಲಾಯಿತು. ಈ ಎರಡು ಪಟ್ಟಣಗಳಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಯಿತು. ರಾಜಧಾನಿ ಇಟಾನಗರದಲ್ಲಿ ಪೆಟ್ರೋಲ್ ಬಂಕ್, ಮಾರುಕಟ್ಟೆ, ಮಳಿಗೆ ಇತ್ಯಾದಿಗಳನ್ನು ಮುಚ್ಚಲಾಯಿತು. ಬಹುತೇಕ ಎಟಿಎಂಗಳಿಗೆ ಬೀಗ ಬಿದ್ದವು.

ಶುಕ್ರವಾರ ಪ್ರಾರಂಭಗೊಂಡ ಪ್ರತಿಭಟನೆಯಲ್ಲಿ ಇಲ್ಲಿಯವರೆಗೆ 50ಕ್ಕೂ ಹೆಚ್ಚು ಪೊಲೀಸರ ವಾಹನಗಳನ್ನ ಸುಟ್ಟುಹಾಕಲಾಗಿದೆ. 150ಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿವೆ.

ಯಾಕೆ ಪ್ರತಿಭಟನೆ?

ಅರುಣಾಚಲ ಪ್ರದೇಶದಲ್ಲಿ ವಾಸಿಸುತ್ತಿರುವ ಆರು ಸಮುದಾಯಗಳಿಗೆ ಖಾಯಂ ನಿವಾಸಿ ಪ್ರಮಾಣ ಪತ್ರ ನೀಡಬೇಕೆಂದು ಜಂಟಿ ಉನ್ನತಾಧಿಕಾರ ಸಮಿತಿ ಶಿಫಾರಸು ಮಾಡಿರುವುದು ಇಲ್ಲಿ ಬೃಹತ್ ಪ್ರತಿಭಟನೆಗೆ ಕಾರಣವಾಗಿದೆ. ಈ ಆರು ಸಮುದಾಯಗಳು ಅರುಣಾಚಲದ ಮೂಲ ನಿವಾಸಿಗಳಲ್ಲವಾದರೂ ಹಲವು ದಶಕಗಳಿಂದ ನೆಲಸಿದ್ದಾರೆ. ಆದರೆ, ಇವರು ಮೂಲ ನಿವಾಸಿಗಳಲ್ಲವೆಂಬ ಕಾರಣಕ್ಕೆ ಸ್ಥಳೀಯರು ಇವರಿಗೆ ಪರ್ಮನೆಂಟ್ ರೆಸಿಡೆಂಟ್ ಸರ್ಟಿಫಿಕೇಟ್ ಕೊಡುವುದಕ್ಕೆ ಬಲವಾಗಿ ವಿರೋಧಿಸುತ್ತಿದ್ದಾರೆ. ಇವರಿಗೆ ಖಾಯಂ ನಿವಾಸಿಗಳಾಗಿ ಮಾನ್ಯತೆ ಕೊಟ್ಟರೆ ಸ್ಥಳೀಯ ಮೂಲ ನಿವಾಸಿಗಳ ಹಕ್ಕಿಗೆ ಧಕ್ಕೆಯಾಗುತ್ತದೆ ಎಂಬುದು ಇವರ ಆತಂಕವಾಗಿದೆ.

ಉನ್ನತಾಧಿಕಾರ ಸಮಿತಿಯು ತನ್ನ ವರದಿಯನ್ನು ವಿಧಾನಸಭೆಯಲ್ಲಿ ನಿನ್ನೆಯೇ ಸಲ್ಲಿಕೆ ಮಾಡಬೇಕಿತ್ತಾದರೂ ಪ್ರತಿಭಟನೆಗಳಿಂದಾಗಿ ಮುಂದಕ್ಕೆ ಹಾಕಿದೆ. ಇದೇ ವೇಳೆ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಅರುಣಾಚಲದ ಜನರಿಗೆ ಶಾಂತಿ ಕಾಪಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

Comments are closed.